ಸಾರಾಂಶ
ಬೆಂಗಳೂರು : ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ಸಿಇಟಿ ಪರೀಕ್ಷೆ ವೇಳೆ ಶಿವಮೊಗ್ಗ ಮತ್ತು ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಸ್ವಾಮೀಜಿಗಳು ಖಂಡಿಸಿದ್ದಾರೆ.
ಬ್ರಾಹ್ಮಣ ಸಮಾಜವನ್ನು ಅವಮಾನಿಸುವ ಉದ್ದೇಶ ಇದರ ಹಿಂದಿದೆ ಎಂದು ಪೇಜಾವರ ಶ್ರೀಗಳು ಕಿಡಿಕಾರಿದ್ದರೆ, ಈ ಘಟನೆ ಹಿಂದೆ ದ್ವೇಷದ ಜ್ವಾಲೆ ಕಾಣುತ್ತದೆ ಎಂದು ರಾಮಚಂದ್ರಾಪುರ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನಾತನಿಗಳನ್ನು ಕೆಣಕುವ ಪ್ರಕ್ರಿಯೆ ಇದು ಎಂದು ಪುತ್ತಿಗೆ ಶ್ರೀಗಳು, ಇದೊಂದು ಆಘಾತಕಾರಿ ಎಂದು ಸ್ವರ್ಣವಲ್ಲೀ ಶ್ರೀಗಳು ವಿಷಾದಿಸಿದ್ದಾರೆ.
ಬ್ರಾಹ್ಮಣರನ್ನು ಅವಮಾನಿಸುವ ಉದ್ದೇಶವಿದು: ಪೇಜಾವರ ಶ್ರೀ
ಶೃಂಗೇರಿ: ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣವನ್ನು ಉಡುಪಿ ಪೇಜಾವರ ಶ್ರೀಗಳು ಖಂಡಿಸಿದ್ದಾರೆ. ಶೃಂಗೇರಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಆಶೀರ್ವಚನ ನೀಡುವ ವೇಳೆ ವಿಷಯ ಪ್ರಸ್ತಾಪಿಸಿದ ಶ್ರೀಗಳು, ಈ ನಿಯಮ ಪರೀಕ್ಷಾ ವ್ಯವಸ್ಥೆಯಲ್ಲಿ ಸೇರಿದ್ದರೆ ಎಲ್ಲಾ ಕಡೆ ಇರಬೇಕಿತ್ತು. ಆದರೆ, ಪರೀಕ್ಷಾ ನಿಯಮಗಳಲ್ಲಿ ಇದು ಇಲ್ಲ. ಬ್ರಾಹ್ಮಣ ಸಮಾಜವನ್ನು ಅವಮಾನಿಸಬೇಕು ಎಂಬ ಉದ್ದೇಶದಿಂದ ಮಾಡಿದ ಕೃತ್ಯ ಇದಾಗಿದೆ. ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇಂತಹ ಕೃತ್ಯದಿಂದ ಸಮಾಜದಲ್ಲಿ ಕ್ಷೋಭೆ ಉಂಟಾಗುವ ಸಾಧ್ಯತೆ ಇರುತ್ತದೆ.
ಇಂತಹ ಕೃತ್ಯ ಮಾಡಿದ ತಪ್ಪಿಗೆ ಶಿಕ್ಷೆ ನೀಡಿದರೆ ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು. ಇಂತಹ ಅಧಿಕಾರಿಗೆ ಕಟುವಾದ ಎಚ್ಚರಿಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಘಟನೆ ಹಿಂದೆ ದ್ವೇಷದ ಜ್ವಾಲೆ: ರಾಘವೇಶ್ವರ ಶ್ರೀ
ಮಂಗಳೂರು: ಜನಿವಾರ ತೆಗೆಸಿದ ಘಟನೆಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಖಂಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಬಟ್ಟೆಯ ಒಳಗೆ ಧರಿಸುವ ಜನಿವಾರದಿಂದ ಪರೀಕ್ಷಾ ನಿಯಮಕ್ಕೆ ಯಾವ ತೊಂದರೆಯೂ ಇಲ್ಲ. ಈ ಘಟನೆ ಹಿಂದೆ ಕೇವಲ ದ್ವೇಷದ ಜ್ವಾಲೆ ಕಾಣುತ್ತದೆ. ಬ್ರಾಹ್ಮಣರು ಜನಿವಾರ ಧರಿಸಿದರೆ, ವೀರಶೈವರು ಲಿಂಗ ಧರಿಸುತ್ತಾರೆ. ಇಂದು ಬ್ರಾಹ್ಮಣ ಜನಾಂಗದ ಮೇಲೆ ಆಗುತ್ತಿರುವ ಕ್ರೌರ್ಯ ನಾಳೆ ಬೇರೆ ಸಮಾಜದ ಮೇಲೂ ಆಗಬಹುದು. ಹಾಗಾಗಿ, ಸಮಸ್ತ ಹಿಂದೂ ಸಮಾಜ ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದರು.
ಧಾರ್ಮಿಕತೆಯ ಜೊತೆಗೆ ರಾಜಿ ಮಾಡಿಕೊಳ್ಳದೆ, ಪರೀಕ್ಷೆಯನ್ನೇ ತಿರಸ್ಕರಿಸಿದ ವಿದ್ಯಾರ್ಥಿಯ ಧೋರಣೆ ಮೆಚ್ಚುವಂತದ್ದು. ಆ ವಿದ್ಯಾರ್ಥಿಯ ಜೊತೆಗೆ ರಾಮಚಂದ್ರಾಪುರ ಮಠವಿರಲಿದ್ದು, ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ಮಠದಿಂದ ನೀಡಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
ಧರ್ಮಾಚರಣೆಗೆ ಸಂವಿಧಾನದಲ್ಲೇ ಅವಕಾಶವಿದೆ: ಸ್ವರ್ಣವಲ್ಲೀ ಶ್ರೀ
ಶಿರಸಿ: ಬ್ರಾಹ್ಮಣರ ಜನಿವಾರಕ್ಕೆ ಸಂಬಂಧಿಸಿದಂತೆ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬೀದರ್ ಮತ್ತು ಶಿವಮೊಗ್ಗದಲ್ಲಿ ನಡೆದ ಘಟನೆಗಳು ವಿಷಾದನೀಯ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಶನಿವಾರ ಅವರು ಹೇಳಿಕೆ ನೀಡಿ, ಘಟನೆಯನ್ನು ಖಂಡಿಸಿದ್ದಾರೆ. ಭಾರತದ ಸಂವಿಧಾನ ಎಲ್ಲರಿಗೂ ಅವರವರ ಧರ್ಮಾಚರಣೆ ಕೈಗೊಳ್ಳಲು ಮುಕ್ತ ಸ್ವಾತಂತ್ರ್ಯ ಕೊಟ್ಟಿದೆ. ಪರೀಕ್ಷಾ ನಿಯಮಗಳಿಗೆ ಜನಿವಾರದಿಂದ ಯಾವುದೇ ಉಲ್ಲಂಘನೆಯಾಗುವುದಿಲ್ಲ. ಹಾಗಿರುವಾಗ ಎಲ್ಲರನ್ನೂ ಸರಿಸಮವಾಗಿ ನೋಡಬೇಕಾದ ಅಧಿಕಾರಿಗಳು ಜನಿವಾರವನ್ನೇ ಮುಂದಿಟ್ಟುಕೊಂಡು ಸಿಇಟಿ ಪರೀಕ್ಷೆಗೆ ಅಡ್ಡಿಪಡಿಸಿದ್ದು ಸರಿಯಲ್ಲ ಎಂದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದವರು ಆಗ್ರಹಿಸಿದ್ದಾರೆ.
ಹಿಂದೂ, ಸನಾತನಿಗಳನ್ನು ಕೆಣಕುವ ಪ್ರಕ್ರಿಯೆ: ಪುತ್ತಿಗೆ ಶ್ರೀ
ಉಡುಪಿ: ಜನಿವಾರ ತೆಗೆದು ಸಿಇಟಿ ಪರೀಕ್ಷೆ ಎದುರಿಸಲು ಒತ್ತಾಯಿಸಿದ ಘಟನೆಯನ್ನು ಉಡುಪಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಪರೀಕ್ಷೆ ಬರೆಯಲು ಯಜ್ಞೋಪವೀತವನ್ನು ತೆಗೆಯಲು ಹೇಳಿದ ವಿಚಾರ ತಿಳಿದು ಆಘಾತವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಸರಣಿಯಾಗಿ ನಡೆಯಲು ಪ್ರಾರಂಭವಾಗಿವೆ. ಇಂತಹ ದುಷ್ಟ ಪ್ರವೃತ್ತಿ ಎಲ್ಲಾ ಕಡೆ ಕಾಣಿಸಲು ಆರಂಭವಾಗಿದೆ. ಹಿಂದೂ ಧರ್ಮ ಹಾಗೂ ಸನಾತನಿಗಳನ್ನು ಕೆಣಕುವ ಪ್ರಕ್ರಿಯೆ ಇದು ಎಂದು ಕಿಡಿ ಕಾರಿದ್ದಾರೆ.
ಸರ್ಕಾರ ಈ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು. ಇಂತಹ ಪ್ರವೃತ್ತಿ ಮುಂದುವರಿದರೆ ಸಮಾಜದಲ್ಲಿ ದ್ವೇಷ, ಸಂಘರ್ಷ ಬೆಳೆಯುವ ಸಾಧ್ಯತೆ ಇದೆ. ಮೂಲದಲ್ಲೇ ಇಂತಹದ್ದನ್ನು ಸರಿ ಮಾಡುವುದು ಜಾಣತನ. ತಪ್ಪು ಮಾಡಿದ ವ್ಯಕ್ತಿಗೆ ತಕ್ಕ ಶಿಕ್ಷೆ ಆಗಬೇಕು, ವಿದ್ಯಾರ್ಥಿಗೆ ನ್ಯಾಯ ದೊರಕಬೇಕು ಎಂದು ಅವರು ಆಗ್ರಹಿಸಿದ್ದಾರೆ.