ಕೈ ಕೋಟೆ ಕೆಡವಿ ಅರಳಿದ ಕಮಲ!

| Published : Jun 06 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚಿದೆ. ನಾಲ್ವರು ಶಾಸಕರು, ಇಬ್ಬರು ಸಚಿವರು ಇದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆದಿದ್ದವು. ಆದರೆ, ಸಚಿವರು, ಶಾಸಕ ಕ್ಷೇತ್ರದಲ್ಲೇ ಕೈ ಅಭ್ಯರ್ಥಿ ರಾಜು ಆಲಗೂರು ಅವರಿಗೆ ಹೆಚ್ಚಿನ ಮತಗಳು ದೊರೆಲಿಲ್ಲ. ಹೀಗಾಗಿ ಕೈ ಕೋಟೆಯನ್ನು ಬೇಧಿಸಿ ಕಮಲ ಅರಳಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚಿದೆ. ನಾಲ್ವರು ಶಾಸಕರು, ಇಬ್ಬರು ಸಚಿವರು ಇದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆದಿದ್ದವು. ಆದರೆ, ಸಚಿವರು, ಶಾಸಕ ಕ್ಷೇತ್ರದಲ್ಲೇ ಕೈ ಅಭ್ಯರ್ಥಿ ರಾಜು ಆಲಗೂರು ಅವರಿಗೆ ಹೆಚ್ಚಿನ ಮತಗಳು ದೊರೆಲಿಲ್ಲ. ಹೀಗಾಗಿ ಕೈ ಕೋಟೆಯನ್ನು ಬೇಧಿಸಿ ಕಮಲ ಅರಳಿದೆ. ಹೌದು, ಅಧಿಕಾರದಲ್ಲಿದ್ದ ಬಿಜೆಪಿಯನ್ನು ಹೊಡೆದುಹಾಕಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಒಂದಲ್ಲ ಎರಡಲ್ಲ ಬರೋಬ್ಬರಿ 6 ಸೀಟುಗಳನ್ನು ಕಾಂಗ್ರೆಸ್‌ಗೆ ನೀಡಿದ್ದರು. ಅದರಂತೆ ಲೋಕಸಭೆಯಲ್ಲೂ ಮತದಾರರು ಕೈ ಬಿಡೋದಿಲ್ಲ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಹಾಕಿಕೊಂಡಿತ್ತು. ಆದರೆ ಕಾಂಗ್ರೆಸ್ ಸಚಿವರು ಹಾಗೂ ಶಾಸಕರುಗಳು ಇರುವ ಕ್ಷೇತ್ರಗಳಲ್ಲಿಯೇ ಬಿಜೆಪಿಗೆ ಹೆಚ್ಚಿನ ವೋಟುಗಳು ಬಂದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆದ್ದು ಬೀಗಿದ್ದಾರೆ. ಸಚಿವರ, ಶಾಸಕರ ಪ್ರಭಾವ ಕೈಕೊಟ್ಟಿದ್ದರಿಂದ ಆಲಗೂರು ಸೋಲು ಅನುಭವಿಸಿದ್ದಾರೆ. ನಾಲ್ವರು ಶಾಸಕರ ಕ್ಷೇತ್ರದಲ್ಲೂ ಹಿನ್ನಡೆ:

ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿ.ಎಸ್.ಪಾಟೀಲ್ ನಾಡಗೌಡ ಶಾಸಕರಾಗಿದ್ದು ಇಲ್ಲಿ ಬಿಜೆಪಿಗೆ 72650 ಮತಗಳು, ಕಾಂಗ್ರೆಸ್‌ಗೆ 68688 ಮತಗಳು ಬಂದಿದ್ದು, 3962 ಮತಗಳು ಬಿಜೆಪಿಗೆ ಹೆಚ್ಚಿಗೆ ಬಂದಿವೆ. ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್‌ನ ರಾಜುಗೌಡ ಪಾಟೀಲ್ ಶಾಸಕರಾಗಿದ್ದು, ಇಲ್ಲಿ ಬಿಜೆಪಿಗೆ 72569 ಮತಗಳು, ಕಾಂಗ್ರೆಸ್‌ಗೆ 63543 ಮತಗಳು ಬಂದಿದ್ದು, 9026 ಮತಗಳು ಬಿಜೆಪಿಗೆ ಹೆಚ್ಚಿಗೆ ಬಂದಿವೆ. ನಾಗಠಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಠ್ಠಲ ಕಟಕದೊಂಡ ಶಾಸಕರಾಗಿದ್ದು, ಬಿಜೆಪಿಗೆ 96158 ಮತಗಳು, ಕಾಂಗ್ರೆಸ್‌ಗೆ 84373 ಮತಗಳು ಬಂದಿದ್ದು, 11785 ಹೆಚ್ಚಿಗೆ ಮತಗಳು ಬಿಜೆಪಿಗೆ ಬಂದಿವೆ. ಇಂಡಿಯಲ್ಲಿ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್ ಶಾಸಕರಾಗಿದ್ದು, ಬಿಜೆಪಿಗೆ 95064 ಮತಗಳು, ಕಾಂಗ್ರೆಸ್‌ಗೆ 69340 ಮತಗಳು ಬಂದಿದ್ದು, ಬಿಜೆಪಿಗೆ 25724 ಹೆಚ್ಚಿನ ಮತಗಳು ಬಂದಿವೆ. ಸಿಂದಗಿಯಲ್ಲಿ ಕಾಂಗ್ರೆಸ್‌ನ ಅಶೋಕ ಮನಗೂಳಿ ಶಾಸಕರಾಗಿದ್ದು, ಇಲ್ಲಿ ಬಿಜೆಪಿಗೆ 85982 ಮತಗಳು, ಕಾಂಗ್ರೆಸ್‌ಗೆ 72335 ಮತಗಳು ಬಂದಿದ್ದು, 13647 ಹೆಚ್ಚಿಗೆ ಮತಗಳು ಬಿಜೆಪಿಗೆ ಬಂದಿವೆ.ಸಚಿವರ ಕ್ಷೇತ್ರದಲ್ಲೂ ಬಿಜೆಪಿಗೆ ಹೆಚ್ಚು ಮತ:

ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಶಾಸಕರಾಗಿದ್ದು, ಜೊತೆಗೆ ಸಕ್ಕರೆ ಸಚಿವರೂ ಆಗಿದ್ದಾರೆ. ಇಲ್ಲಿ ಬಿಜೆಪಿಗೆ 83916 ಮತಗಳು, ಕಾಂಗ್ರೆಸ್‌ಗೆ 66363 ಮತಗಳು ಬಂದಿದ್ದು, ಬಿಜೆಪಿಗೆ 17553 ಮತಗಳು ಹೆಚ್ಚಿಗೆ ಬಂದಿವೆ. ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲ್ ಶಾಸಕರಾಗಿದ್ದು, ಇವರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇಲ್ಲಿ ಬಿಜೆಪಿಗೆ 79002 ಮತಗಳು, ಕಾಂಗ್ರೆಸ್‌ಗೆ 75651 ಮತಗಳು ಬಂದಿದ್ದು, 3351 ಹೆಚ್ಚಿಗೆ ಮತಗಳು ಬಿಜೆಪಿಗೆ ಬಂದಿವೆ.ಬಾಕ್ಸ್‌...ಯತ್ನಾಳ ಮತಕ್ಷೇತ್ರದಲ್ಲಿ ಕೈಗೆ ಲೀಡ್‌

ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಶಾಸಕರಾಗಿದ್ದು, ಇಲ್ಲಿ ಬಿಜೆಪಿಗೆ 83714 ಮತಗಳು, ಕಾಂಗ್ರೆಸ್‌ಗೆ 92984 ಮತಗಳು ಬಂದಿದ್ದು, 9270 ಹೆಚ್ಚಿಗೆ ಮತಗಳು ಕಾಂಗ್ರೆಸ್ ಪಾಲಾಗಿವೆ.

---

ಬಾಕ್ಸ್‌..

ಆತ್ಮಾವಲೋಕನಕ್ಕೆ ಮುಂದಾದ ಕಾಂಗ್ರೆಸ್

ಜಿಲ್ಲೆಯ 6 ಕ್ಷೇತ್ರಗಳು ಕೈ ವಶದಲ್ಲಿದ್ದರೂ ಜನರು ಮಾತ್ರ ಬಿಜೆಪಿಗೆ ಮಣೆ ಹಾಕಿದ್ದೇಕೆ? ಕಾಂಗ್ರೆಸ್ ಹಾಗೂ ಗ್ಯಾರಂಟಿಗಳನ್ನು ಧಿಕ್ಕರಿಸಿದ್ದೇಕೆ? ಕಾಂಗ್ರೆಸ್ ಯೋಜನೆಗಳ ತಿಳಿವಳಿಕೆಯನ್ನು ಜನರಿಗೆ ಸರಿಯಾಗಿ ಮುಟ್ಟಿಸುವಲ್ಲಿ ವಿಫಲವಾಯಿತಾ? ಮುಂತಾದ ಪ್ರಶ್ನೆಗಳನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕರು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಚರ್ಚೆ ನಡೆಸಿ ಆತ್ಮಾವಲೋಕನ ಮಾಡಿಕೊಳ್ಳಲಿದ್ದಾರೆ.

--

ಒಟ್ಟು ಮತಗಳ ವಿವರರಮೇಶ ಜಿಗಜಿಣಗಿ: 6,72,781ರಾಜು ಆಲಗೂರ: 5,95,552ಗೆಲುವಿನ ಅಂತರ: 77,229

---ಇವರ ಪೋಟೋ ಬಳಸಿಎಂ.ಬಿ.ಪಾಟೀಲ, ಶಿವಾನಂದ ಪಾಟೀಲ್, ಅಶೋಕ ಮನಗೂಳಿ, ಯಶವಂತರಾಯಗೌಡ ಪಾಟೀಲ್, ಸಿ.ಎಸ್.ಪಾಟೀಲ್ ನಾಡಗೌಡ, ವಿಠ್ಠಲ ಕಟಕದೊಂಡ