ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಬಡವರ, ಸಾಮಾನ್ಯ ಜನರ ಮತ್ತು ಹಿಂದುಳಿದ, ರೈತರ ಬದುಕಿನ ಏಳಿಗೆಗಾಗಿ ದುಡಿದ ಮತ್ತು ಬದುಕಿಗೆ ಆಶಾಕಿರಣವಾಗಿದ್ದ ಕೀರ್ತಿ ಮಾಜಿ ಸಚಿವ ದಿ.ಎಂ.ಸಿ. ಮನಗೂಳಿಯವರಿಗೆ ಸಲ್ಲುತ್ತದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಸೋಮನಗೌಡ ಬಿರಾದಾರ ಹೇಳಿದರು.ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಮನಗೂಳಿ ಆಸ್ಪತ್ರೆ ಮತ್ತು ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆವರಣದಲ್ಲಿನ ದಿ. ಎಂ.ಸಿ.ಮನಗೂಳಿ ಅವರ ಪುತ್ಥಳಿಗೆ ಅವರ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಪೂಜೆ ಸಲ್ಲಿಸಿ ಮಾತನಾಡಿದರು. ಸಿಂದಗಿ ಮತಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿ, ಸಾಮಾನ್ಯರ ಶಾಸಕರಾಗಿ, ಸಚಿವರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದಾರೆ. ಕಷ್ಟದಿಂದ ಬಂದ ಅವರು ಅತ್ಯಂತ ಮೇಲ್ಮಟ್ಟಕ್ಕೆ ಹೋಗಿರುವುದು ಇದೊಂದು ಇತಿಹಾಸವೇ ಸರಿ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸುವ ಯೋಜನೆ, ಒಳಚರಂಡಿ ಕಾಮಗಾರಿ, 24×7 ಕುಡಿಯವ ನೀರಿನ ಯೋಜನೆ, ಮಿನಿ ವಿಧಾನಸೌಧ, ಶಿಕ್ಷಣ ಆರೋಗ್ಯ, ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವಾರು ಶಾಶ್ವತ ಯೋಜನೆಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ್ದಾರೆ. ಅಂತಹ ಮಹಾನ್ ಚೇತನ. ಹಣ ಇದ್ದಾಗ ದಾನ ಧರ್ಮ ಮಾಡಬೇಕು ಅಧಿಕಾರವಿದ್ದಾಗ ಜನಸೇವೆ ಮಾಡಬೇಕು ಎಂಬ ಮಾತಿನಂತೆ ನಡೆದರು. ಕ್ಷೇತ್ರದ ಜನತೆ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ,ಗೌರವ ಯಾವತ್ತೂ ಕಡಿಮೆ ಯಾಗುವುದಿಲ್ಲ ಎಂದು ಸ್ಮರಿಸಿದರು.ಈ ವೇಳೆ ಶಾಸಕ ಅಶೋಕ್ ಮನಗೂಳಿ ಮಾತನಾಡಿ, ತಂದೆಯವರು ಅಧಿಕಾರದ ಅವಧಿಯಲ್ಲಿದ್ದಾಗ ಅನೇಕ ಶಾಶ್ವತ ಯೋಜನೆಗಳನ್ನ ಈ ಕ್ಷೇತ್ರಕ್ಕೆ ನೀಡಿದ್ದಾರೆ. ಅವರ ಹಾಗೆ ನಾನು ಕೂಡ ಸಿಂದಗಿ ಮತಕ್ಷೇತ್ರದಲ್ಲಿ ಶಾಶ್ವತ ಯೋಜನೆಗಳನ್ನು ಮಾಡುವ ಅನೇಕ ಕನಸುಗಳನ್ನ ಹೊತ್ತಿದ್ದೇನೆ. ಮನಗೂಳಿ ಕುಟುಂಬದ ಮೇಲೆ ಈ ಕ್ಷೇತ್ರ ಇಟ್ಟಿರುವ ಪ್ರೀತಿ ಗೌರವಕ್ಕೆ ನಾನು ಎಂದೂ ಅಗೌರವವಾಗಿ ನಡೆದುಕೊಳ್ಳುವುದಿಲ್ಲ. ತಂದೆಯವರ ಹಾಗೆ ಸಾಮಾನ್ಯರ ಮತ್ತು ಹಿಂದುಳಿದವರ ಪರವಾಗಿ ನಾನು ಸದಾ ಕಾರ್ಯವನ್ನ ನಿರ್ವಹಿಸುತ್ತೇನೆ ಎಂದರು.ಪಟ್ಟಣದ ಎಚ್‌ಜಿ ಹೈಸ್ಕೂಲ್ ಮೈದಾನದಲ್ಲಿನ ದಿ.ಎಂ.ಸಿ.ಮನಗೂಳಿ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮನಗೂಳಿ ಧರ್ಮಪತ್ನಿ ಸಿದ್ದಮ್ಮಗೌಡ್ತಿ ಮನಗೂಳಿ, ಡಾ.ಅರವಿಂದ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ಮುತ್ತು ಮನಗೂಳಿ, ಬಿ. ಜಿ.ನೆಲ್ಲಗಿ, ಪ್ರಾಚಾರ್ಯ ಹೆಗ್ಗಣದೊಡ್ಡಿ, ಭೀಮನಗೌಡ ಬಿರಾದಾರ, ಬಸವರಾಜ ಕಾಂಬಳೆ, ಸಿದ್ದು ಮಲ್ಲೇದ, ಮಲ್ಲಿಕಾರ್ಜುನ ಶಂಬೆವಾಡ, ಪೀರಾ ಮಗರಬಿ, ಕುಮಾರ ಬಗಲಿ ಸೇರಿದಂತೆ ಅನೇಕ ಮುಖಂಡರು, ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.