ಸಿದ್ಧೇಶ್ವರ ಶ್ರೀಗಳ ಸಂದೇಶ ವಿಶ್ವಾದ್ಯಂತ ಪಸರಿಸಬೇಕಿದೆ:ಸ್ಪೀಕರ್ ಯು.ಟಿ.ಖಾದರ್‌

| Published : Dec 26 2023, 01:30 AM IST

ಸಿದ್ಧೇಶ್ವರ ಶ್ರೀಗಳ ಸಂದೇಶ ವಿಶ್ವಾದ್ಯಂತ ಪಸರಿಸಬೇಕಿದೆ:ಸ್ಪೀಕರ್ ಯು.ಟಿ.ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಜಾಗತಿಕ ಆಧ್ಯಾತ್ಮಿಕ ಚಿಂತನೆ ವಿಷಯದ ಕುರಿತು ನಡೆದ 3ನೇ ಗೋಷ್ಠಿಗೆ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವಾಮೀಜಿಯವರು ಸದಾ ಶಾಂತಿಗೆ ಒತ್ತನ್ನು ಕೊಟ್ಟವರು. ಆದರೆ ನಾವು ಇಂದು ದ್ವೇಷದ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮ್ಮ ಗಾಳಿಯಲ್ಲಿ, ಉಸಿರಿನಲ್ಲಿಯೇ ದ್ವೇಷ ತುಂಬಿದೆ. ಇಂತಹ ಸಮಾಜದಲ್ಲಿ ನಾವು ಶ್ರೀ ಸಿದ್ದೇಶ್ವರ ಅಪ್ಪನವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನ್ಮಾರ್ಗ ಮತ್ತು ಶಾಂತಿಯುತ ಬದುಕು ನಡೆಸಲು ಸಾಧ್ಯ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್‌ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಜಾಗತಿಕ ಆಧ್ಯಾತ್ಮಿಕ ಚಿಂತನೆ ವಿಷಯದ ಕುರಿತು ನಡೆದ 3ನೇ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಅಪ್ಪನವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಯಾವುದೇ ಅಪೇಕ್ಷೆ ಪಡದೆ ನಾವು ಬದುಕಬೇಕು. ಸಣ್ಣ-ಪುಟ್ಟ ವಿಷಯಗಳಿಗೆ ಜಗಳವಾಡುವುದನ್ನು ಬಿಟ್ಟು ನಿಸ್ವಾರ್ಥದಿಂದ ಬದುಕಬೇಕು. ಅಂದಾಗ ನಮ್ಮ ಬದುಕು ಸುಂದರವಾಗಲು ಸಾಧ್ಯ ಎನ್ನುತ್ತಿದ್ದರು. ಅವರು ಹೇಳಿದ ಮಾತು ನಾವು ಪಾಲಿಸಿದ್ದೇ ಆದಲ್ಲಿ ಉತ್ತಮ ಬದುಕು, ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.

ಧರ್ಮ ನಮ್ಮನ್ನು ಸಂಘಟಿಸಲು ಇದೆ. ಬೇರೆ ಧರ್ಮಗಳನ್ನು ಪ್ರೀತಿಸಿ, ವಿಶ್ವಾಸದಿಂದ ಬದುಕಬೇಕು. ನಾವು ಸತ್ತ ಮೇಲೆ ನಮಗೆ ಯಾವ ಜಾತಿ ಧರ್ಮವೂ ಇರುವುದಿಲ್ಲ. ನನ್ನ ಸಾವಿನ ನಂತರ ನಮ್ಮ ಹೆಸರು ಸಹ ಉಳಿಯುವುದಿಲ್ಲ. ಹೀಗಾಗಿ ನಾವು ಎಂದಿಗೂ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಈ ನಿಟ್ಟಿನಲ್ಲಿ ಸದಾಕಾಲ ಪ್ರೇರೇಪಿಸುತ್ತಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನಾವೆಲ್ಲರೂ ಸದಾ ಚಿರಋಣಿ ಎಂದರು.

ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ, ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಎಲ್ಲವನ್ನು ಮರೆಯುತ್ತಿದ್ದಾರೆ. ಅದರಿಂದ ಅವರನ್ನು ಹೊರತಂದು ನಮ್ಮ ಸಂಸ್ಕೃತಿ, ಅಧ್ಯಾತ್ಮದತ್ತ ಚಿತ್ತ ಕೊಡುವಂತೆ ನೋಡಿಕೊಳ್ಳಬೇಕು ಎಂದರು.

ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಇಂದು ಜ್ಞಾನ, ಯಜ್ಞ, ಯಾಗಾದಿಗಳು ಅಷ್ಟು ಪ್ರಮುಖವಲ್ಲ. ಅತ್ಯಂತ ಪ್ರಮುಖವಾದದ್ದು ದಾನ. ದಾನ ಕೇವಲ ಹಣವಲ್ಲ, ಮಾನವ ಜನಾಂಗಕ್ಕೆ ಅಗತ್ಯವಿರುವ ಪ್ರತಿಯೊಂದು ದಾನ. ಪ್ರಸ್ತುತ ದಿನಗಳಲ್ಲಿ ದಾನಕ್ಕೆ ಒತ್ತು ನೀಡಬೇಕು. ಎಂದಿಗೂ ಹಣದ ಹಿಂದೆ ಬೆನ್ನು ಬೀಳಬಾರದು. ಹಣದ ಹಿಂದೆ ಬೀಳುತ್ತಾರೋ ಅವರು ಹೆಣವಿದ್ದಂತೆ. ಯಾವ ಸಮಾಜ ಬರೀ ಹಣ ಗಳಿಕೆಯ ಹಿಂದೆ ಬೀಳುತ್ತದೆ ಅದು ನಾಶದ ಅಂಚಿನಲ್ಲಿದ್ದಂತೆ. ಸ್ವಾಮಿ ವಿವೇಕಾನಂದರಿಗೆ ಸಂಪತ್ಭರಿತವಾಗಿ ಬದುಕುವ ಅವಕಾಶಗಳು ಹುಡುಕಿಕೊಂಡು ಬಂದಾಗಲೂ ಅವರು ನಿರಾಕರಿಸಿದ್ದರು. ಅಂತಹ ಮಹಾತ್ಮರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಬೀದರನ ಚಿದಂಬರ ಆಶ್ರಮದ ಶಿವಕುಮಾರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷ ವಿ.ಸಿ. ನಾಗಠಾಣ,ಶ್ರದ್ಧಾನಂದ ಮಹಾಸ್ವಾಮೀಜಿ ಇತರರು ಇದ್ದರು.