ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸದ್ಯ ಮೀಟರ್ ಬಡ್ಡಿ ದಂಧೆ ಬಗ್ಗೆ ಜೋರು ಚರ್ಚೆಗಳು ಶುರುವಾಗಿವೆ. ಇದರೊಂದಿಗೆ ಪಕ್ಕದಲ್ಲಿಯೇ ಇರುವ ಧಾರವಾಡ ಸಹ ಮೀಟರ್ ಬಡ್ಡಿ ದಂಧೆಯಲ್ಲಿ ಕಡಿಮೆ ಏನಿಲ್ಲ. ಇಲ್ಲೂ ಮೀಟರ್ ಬಡ್ಡಿ ಕರಾಳ ಮುಖದ ಪರಿಣಾಮಗಳು ಬಹಳಷ್ಟು ಕುಟುಂಬಗಳ ಮೇಲಾಗಿದ್ದು ಬಹಿರಂಗ ಸತ್ಯ.ಮೀಟರ್ ಬಡ್ಡಿ ದಂಧೆ ಪ್ರಮುಖವಾಗಿ ನಡೆಯುತ್ತಿರುವುದು ಸಾಮಾನ್ಯ ವ್ಯಾಪಾರ - ವಹಿವಾಟುಗಳಲ್ಲಿ ಎನ್ನುವುದಕ್ಕಿಂತ ಜೂಜಾಟದಲ್ಲಿಯೇ ಜಾಸ್ತಿಯಾಗಿದೆ. ಸಾಮಾನ್ಯ ವ್ಯಾಪಾರ ವಹಿವಾಟುಗಳಲ್ಲಿ ಗರಿಷ್ಠ ಶೇ. 1ರಷ್ಟು ಬಡ್ಡಿ ಪಡೆಯಲಾಗುತ್ತದೆ. ಆದರೆ, ಜೂಜಾಟದಲ್ಲಿ ಅದೂ ಶೇ. 3ರಿಂದ ಶೇ. 10ರ ವರೆಗೂ ಹೋಗುತ್ತಿದೆ. ಧಾರವಾಡದಲ್ಲಿ ಕಲಘಟಗಿ ಟೋಲ್ ಬಳಿಯ ಹೋಟೆಲ್, ನರೇಂದ್ರ ಬೈಪಾಸ್ ಬಳಿಯ ಹೋಟೆಲ್ ಸೇರಿದಂತೆ ಧಾರವಾಡದ ಕೆಲವು ಹೋಟೆಲ್‌ಗಳಲ್ಲಿ ನಡೆಯುತ್ತಿರುವ ಜೂಜಾಟ ಸಮಯದಲ್ಲಿ ಈ ಮೀಟರ್ ಬಡ್ಡಿ ಬಳಕೆಗೆ ಬರುತ್ತಿದೆ. ಆಟದಲ್ಲಿ ಗೆದ್ದರೆ ಬಚಾವ್, ಸೋತರೆ ಮನೆ-ಮಠ ಮಾರಿಕೊಂಡುವ ಹೋಗಿರುವ ಅನೇಕ ಉದಾಹರಣೆಗಳಿವೆ.
ಆಸ್ತಿ ಪಾಸ್ತಿ ಹೋಯಿತುಇಂತಹ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ನಡೆಯುವ ಜೂಜಾಟದ ಸಮಯದಲ್ಲಿ ಒಂದುರೀತಿಯ ಮೀಟರ್ ಬಡ್ಡಿ ದಂಧೆ ನಡೆದರೆ, ಊರ ಹೊರಗಿನ ಮಾವಿನ ತೋಪುಗಳಲ್ಲಿ ನಡೆಯುವ ಜೂಜಾಟ ಇನ್ನೂ ಭಯಂಕರ. ಕೆಲಗೇರಿಯ ಪ್ರತಿಷ್ಠಿತ ಕುಟುಂಬದ ಒಬ್ಬ ಯುವಕ ಇಂತಹ ಜೂಜಾಟದಲ್ಲಿ ಮೀಟರ್ ಬಡ್ಡಿಗೆ ಸಾಲ ಪಡೆದು ಪಡಿಪಾಟಿಲು ಪಟ್ಟಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ವಾರದ ಬಡ್ಡಿಗೆ ಹಣ ನೀಡಿದ ದುರುಳರು ಮನೆಗೆ ಬಂದು ಗೌರವ ಹಾಳು ಮಾಡಿದ ಹಿನ್ನೆಲೆಯಲ್ಲಿ ಆ ಯುವಕ ತಾನು ಸಂಪಾದಿಸಿದ ಹಣ, ಚಿನ್ನ, ಹೊಲಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾನೆ. ಹಣವೂ ಹೋಯಿತು. ಗೌರವವೂ ಹೋಯಿತು. ಇದರೊದಿಗೆ ಹಣ ಕೊಡದೇ ಇರುವ ಇನ್ನೊಬ್ಬಾತನ ಮೇಲೆ ದುರುಳರು ಹಿಗ್ಗಾಮುಗ್ಗಾ ಹಲ್ಲೆ ಮಾಡಿ, ಆತನ ಆಸ್ತಿ ಬರೆಸಿಕೊಂಡಿದ್ದಾರೆ. ಇದು ಪೊಲೀಸರಿಗೆ ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ.
ವಿವಿಗಳಲ್ಲೂ ಮೀಟರ್ ಬಡ್ಡಿವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿಯೇ ಹೆಚ್ಚು ಮೀಟರ್ ಬಡ್ಡಿ ದಂಧೆ ಎನ್ನುವ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ಇದೆ ಎನ್ನುವುದು ಸತ್ಯ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿವಿ ಅಂತಹ ಶೈಕ್ಷಣಿಕ ಸಂಸ್ಥೆಗಳಲ್ಲೂ ಈ ಬಡ್ಡಿ ವ್ಯವಹಾರ ನಡೆಯುತ್ತಿದೆ ಎಂದರೆ ಅಚ್ಚರಿ ಏನಿಲ್ಲ. ಲಕ್ಷಗಟ್ಟಲೇ ಸಂಬಳ ಪಡೆಯುತ್ತಿರುವ ಪ್ರಾಧ್ಯಾಪಕರಿಗೆ ಬಡ್ಡಿ ಕೊಟ್ಟು ತಿಂಗಳ ಸಂಬಳದ ದಿನ ಬಡ್ಡಿ ವಸೂಲಿಗೆ ಹಾಜರಾಗುವ ಕುಳಗಳ ಸಂಖ್ಯೆ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಏನಿಲ್ಲ. ಇದರೊಂದಿಗೆ ವಿವಿಯಲ್ಲಿ ಕಾಯಂ ನೌಕರರು ಗುತ್ತಿಗೆ ನೌಕರರಿಗೆ ಬಡ್ಡಿ ಹಣ ನೀಡಿ ಅವರಿಂದ ವಸೂಲಿ ಮಾಡುವುದು ಸಹಜ ಪ್ರಕ್ರಿಯೆ. ಲಕ್ಷಗಟ್ಟಲೇ ಸಂಬಳ ಇದ್ದ ಪ್ರಾಧ್ಯಾಪಕರು ಬಡ್ಡಿ ತುಂಬಿ ಪಾರಾಗುತ್ತಾರೆ. ಆದರೆ, ವಾರದ ಬಡ್ಡಿ, ತಿಂಗಳ ಬಡ್ಡಿ ಹೆಸರಿನಲ್ಲಿ ಗುತ್ತಿಗೆ ನೌಕರರು ಪರದಾಡಿದ ಹಲವು ಘಟನೆಗಳಿವೆ. ಇಂತಹ ಪ್ರಕರಣಗಳು ಯಾವತ್ತೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತದೇ ಇರುವುದು ಸಹ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಕಡಿವಾಣ ಬೇಕುಜೂಜಾಟ ನಡೆಸುವವರು ಅವರೇ, ಬಡ್ಡಿ ಹಣ ನೀಡುವವರೇ ಅವರೇ. ಇನ್ನೊಂದು ಬೇಸರ ಸಂಗತಿ ಏನೆಂದರೆ, ಬಹುತೇಕ ಹೋಟೆಲ್ ಹಾಗೂ ಹೊಲವಾರಿ ಜೂಜಾಟ ನಡೆಸುವವರು ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಅವರ ಮೇಲೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ದುರಂತದ ಸಂಗತಿ. ಮೀಟರ್ ಬಡ್ಡಿ ದಂಧೆ ವ್ಯಕ್ತಿಯೊಬ್ಬನನ್ನು ಆರ್ಥಿಕವಾಗಿ ಮಾತ್ರ ಹಾಳು ಮಾಡದೇ ಆತನಿಗೆ ಕುಡಿತದ ಚಟ, ಗಾಂಜಾ ಸೇವನೆ ಕೂಡಿಕೊಂಡು ಆತನ ಇಡೀ ಜೀವನ ಹಾಳುಮಾಡುತ್ತಿದೆ. ಮೀಟರ್ ಬಡ್ಡಿಗೆ ಬೇಸತ್ತು ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೊಲೆಗಳೂ ನಡೆದಿವೆ. ಆದರೆ, ಯಾವುದು ದಾಖಲೆಯಾಗಿಲ್ಲ. ಹೀಗಾಗಿ ಮೀಟರ್ ಬಡ್ಡಿ ಕುಳಗಳು ರಾಜಾರೋಷವಾಗಿ ತಮ್ಮ ದಂಧೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಹಲವರ ಆಗ್ರಹ.