ಸಾರಾಂಶ
ಕನಕಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಜಿಲ್ಲೆಯ ಅಧಿಕಾರಿ ವರ್ಗ ರೈತರನ್ನು ಕಡೆಗಣಿಸಿದೆ ಎಂದು ಹಸಿರುಸೇನೆ ಹಾಗೂ ರೈತಸಂಘದ ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ಗದ್ದಿ ಆರೋಪಿಸಿದ್ದಾರೆ.
ಅವರು ಶನಿವಾರ ಪಟ್ಟಣದ ಎಪಿಎಂಸಿಯಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿ, ಶಿವರಾಜ ತಂಗಡಗಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರು ತಿಂಗಳು ಕಳೆದಿದ್ದು, ಕ್ಷೇತ್ರದ ರೈತರ ಸಂಕಷ್ಟದ ಕುರಿತು ಒಂದು ದಿನವೂ ಅಧಿವೇಶನದಲ್ಲಿ ಚರ್ಚಿಸಲಿಲ್ಲ. ಮಳೆಯಾಶ್ರಿತ ಪ್ರದೇಶವಾದ ಕನಕಗಿರಿ ತಾಲೂಕಿನ ರೈತರಿಗೆ ಸೂಕ್ತ ಬರ ಪರಿಹಾರ ಒದಗಿಸಲಿಲ್ಲ. ಸಚಿವರು ಅಧಿಕಾರಿಗಳೊಂದಿಗೆ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆಯೇ ವಿನಃ ರೈತರಿಗೆ ಪರಿಹಾರ, ಗೋಶಾಲೆ ಆರಂಭಿಸುವುದು, ಮೇವು ಕೇಂದ್ರ ತೆರೆಯುವುದರ ಕುರಿತು ಮಾತನಾಡುತ್ತಿಲ್ಲ ಎಂದು ದೂರಿದರು.ಕನಕಗಿರಿ ತಾಲೂಕು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು, ಇಲ್ಲಿ ಸರಿಯಾಗಿ ಸರ್ಕಾರಿ ಕಚೇರಿಗಳಿಲ್ಲ. ಕುಕನೂರು, ಕಾರಟಗಿ ತಾಲೂಕಿನಲ್ಲಿರುವ ಸೌಲಭ್ಯ ಮತ್ತು ಕಚೇರಿಗಳು ಕನಕಗಿರಿಯಲ್ಲಿಲ್ಲ. ಇಲ್ಲಿಯ ರೈತರು ನೀರಾವರಿಯಿಂದ ವಂಚಿತರಾಗಿದ್ದು, ಬರದಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯಾಗಿದೆ. ಇದೆಲ್ಲವೂ ಸಚಿವರ ಗಮನಕ್ಕಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೇವಲ ಪ್ರವಾಸ ಮತ್ತು ಅಧಿಕಾರಿಗಳ ಜತೆ ಸಭೆಗಳಿಗಷ್ಟೇ ಸೀಮಿತವಾಗಿರುವ ಸಚಿವರ ನಡೆ ರೈತ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಬಾಲಪ್ಪ ನಾಡಿಗೇರ, ವೆಂಕಟೇಶ ಮಲ್ಲಿಗೆವಾಡ, ಭೀಮನಗೌಡ ಜರ‍್ಹಾಳ, ಮರಿಸ್ವಾಮಿ ಹಿರೇಖೇಡ, ಹನುಮಂತಪ್ಪ ಬಂಡ್ರಾಳ, ಹನುಮೇಶ ಪೂಜಾರ, ಸಣ್ಣ ಶೇಖರಪ್ಪ ಗದ್ದಿ, ಮಂಜುನಾಥ ಮುಸಲಾಪೂರ, ಪ್ರವೀಣ್, ಮಾರುತಿ ನಾಯಕ, ಹನುಮಂತಪ್ಪ ಇತರರು ಇದ್ದರು.ಗ್ಯಾರಂಟಿ ಯೋಜನೆಗಳ ಬಗ್ಗೆ ಬಡಾಯಿ ಕೊಚ್ಚಿ ಕೊಳ್ಳುವವರು ರೈತ ವರ್ಗಕ್ಕೆ ನಮ್ಮ ಸರ್ಕಾರ ಏನು ಮಾಡಿದೆ ಎಂದು ಹೇಳಲಿ. ಕೆಲಸಕ್ಕೆ ಬಾರದ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯತ್ತ ಸಾಗಿದೆ. ಮೇವು ಸಂಗ್ರಹಕ್ಕೆ ನಾಲ್ಕು ತಿಂಗಳ ಹಿಂದೆಯೇ ಆದೇಶವಾಗಿದೆ. ಆದರೆ ಈವರೆಗೂ ಮೇವು ಸಂಗ್ರಹಿಸಿಲ್ಲ. ರೈತರ ಸಮಸ್ಯೆಗಳಿಗೆ ಸಚಿವ ತಂಗಡಗಿಯಿಂದ ಅಧಿಕಾರಿಗಳು ಕೂಡಾ ಸ್ಪಂದಿಸುತ್ತಿಲ್ಲ ಎಂದುರೈತ ಸಂಘದ ತಾಲೂಕಾಧ್ಯಕ್ಷ ಶರಣಪ್ಪ ಗದ್ದಿ ಹೇಳಿದರು.