2 ಕಿ.ಮೀ. ರಸ್ತೆ ಅಭಿವೃದ್ಧಿಗೆ 70 ಕೋಟಿ: ಸಚಿವ ಬೈರತಿ ಗರಂ

| Published : Nov 25 2023, 01:15 AM IST

2 ಕಿ.ಮೀ. ರಸ್ತೆ ಅಭಿವೃದ್ಧಿಗೆ 70 ಕೋಟಿ: ಸಚಿವ ಬೈರತಿ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

೨ ಕಿ.ಮೀ. ಉದ್ದದ ರಸ್ತೆಗೆ ೭೦ ಕೋಟಿ ರುಪಾಯಿ : ಸಚಿವ ಭೈರತಿ ಸುರೇಶ್ಶ್‌ ಗರಂ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಸ್ಮಾರ್ಟ್‌ ಸಿಟಿ ಅಡಿಯಲ್ಲಿ ನೇತ್ರಾವತಿ ನದಿ ತೀರದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವಾಟರ್‌ ಫ್ರಂಟ್‌ ಯೋಜನೆಯ 2.1 ಕಿ.ಮೀ. ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 70 ಕೋಟಿ ರು. ಖರ್ಚು ಮಾಡುವ ಯೋಜನೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಈ ಯೋಜನೆ ಪ್ರಸ್ತಾವನೆ ಮರು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ಸ್ಮಾರ್ಟ್‌ ಸಿಟಿ ಜನರಲ್ ಮ್ಯಾನೇಜರ್ ಅರುಣ್‌ ಪ್ರಭ, ವಾಟರ್‌ ಫ್ರಂಟ್‌ ಯೋಜನೆಯಡಿ ನದಿ ಕಿನಾರೆಯ 2.1 ಕಿಮೀ ವ್ಯಾಪ್ತಿಯಲ್ಲಿ ತಡೆಗೋಡೆ, ವಾಕಿಂಗ್‌ ಟ್ರ್ಯಾಕ್‌, ಯೋಗ ಸೆಂಟರ್‌, ಕಿಯಾಸ್ಕ್‌ಗಳನ್ನು ಮಾಡಲಾಗುತ್ತಿದ್ದು, ಶೇ.10ರಷ್ಟು ಕಾಮಗಾರಿ ಆಗಿದೆ, ಅದಕ್ಕಾಗಿ 70 ಕೋಟಿ ರು. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಬೈರತಿ, ಕೇವಲ 2.1 ಕಿ.ಮೀ. ಅಭಿವೃದ್ಧಿಗೆ 70 ಕೋಟಿ ರು. ಅಂದರೆ ಏನರ್ಥ? ಇದರ ಡಿಪಿಆರ್ ಮಾಡಿದ್ದು ಯಾರು? 100 ಅಡಿ ಅಗಲದ ರಸ್ತೆ ಮಾಡಿದರೂ ಇಷ್ಟು ಹಣ ಬೇಡ. ಇದಕ್ಕೆ ಐಡಿಯಾ ಕೊಟ್ಟವರು ಯಾರು? ಏನೇನು ಚಮತ್ಕಾರ ಮಾಡ್ತೀರೊ ಎಂದು ಹರಿಹಾಯ್ದರಲ್ಲದೆ, ಯೋಜನೆಯ ಸಂಪೂರ್ಣ ಮಾಹಿತಿ ತನಗೆ ಕೊಡಬೇಕು, ಇದು ಕಾರ್ಯಸಾಧ್ಯವೇ, ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇನೆ. ಅಲ್ಲಿಯವರೆಗೆ ಕಾಮಗಾರಿ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗರೆಗೆ ವಾಹನ ಸಂಚಾರದ ರಸ್ತೆ: ಸುಲ್ತಾನ್‌ ಬತ್ತೇರಿಯಿಂದ ಬೆಂಗರೆಗೆ ತೂಗು ಸೇತುವೆ ಮಾಡಲು ಉದ್ದೇಶಿಸಲಾಗಿತ್ತು. ನಂತರ ಸ್ಥಳೀಯ ಮೊಗವೀರರ ಬೇಡಿಕೆಯ ಮೇರೆಗೆ 49 ಕೋಟಿ ರು. ಅಂದಾಜು ವೆಚ್ಚದಲ್ಲಿ ವಾಹನ ಸಂಚಾರಯೋಗ್ಯ ರಸ್ತೆ ಸೇತುವೆ ಮಾಡಲು ಚಿಂತಿಸಲಾಗಿದೆ ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದರು. ರಸ್ತೆ ಸೇತುವೆಯನ್ನೇ ನಿರ್ಮಿಸುವುದು ಸೂಕ್ತ, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವ ಬೈರತಿ ಸುರೇಶ್‌ ಆದೇಶಿಸಿದರು.

ದ್ವೀಪ ಅಭಿವೃದ್ಧಿ ಪ್ರಸ್ತಾವನೆ ಬದಲು:

ನಾಯರ್‌ ಕುದ್ರು ದ್ವೀಪ ಅಭಿವೃದ್ಧಿಗೆ 49 ಕೋಟಿ ರು. ವೆಚ್ಚದಲ್ಲಿ ಓಪನ್‌ ಏರ್‌ ಥಿಯೇಟರ್‌, ವಾಟರ್‌ ಸ್ಪೋರ್ಟ್ಸ್‌ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸಿಆರ್‌ಝಡ್‌ ಅನುಮತಿ ದೊರಕಿಲ್ಲ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿ ತಿಳಿಸಿದರು. ಹೀಗೆ ಮಾಡಿದರೆ ಈ ಜನ್ಮದಲ್ಲಿ ಈ ಯೋಜನೆ ಪೂರ್ಣಗೊಳ್ಳದು. ಸಿಆರ್‌ಝಡ್‌ ಅನುಮತಿಯೂ ಸಿಗಲ್ಲ. ಪ್ರಸ್ತಾವನೆ ಬದಲಾವಣೆ ಮಾಡಿ ಕಳುಹಿಸಿ ಎಂದು ಸಚಿವರು ಸೂಚಿಸಿದರು.

ಸಮಗ್ರ ಅಭಿವೃದ್ಧಿ ಯೋಜನೆ ವಿಳಂಬ:10 ವರ್ಷಕ್ಕೊಮ್ಮೆ ಮಾಡಬೇಕಾಗಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) 15 ವರ್ಷ ಕಳೆದರೂ ಪೂರ್ಣವಾಗದೆ ಇರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಮಾರ್ಚ್‌ಗೆ ಪೂರ್ಣಗೊಳಿಸುವುದಾಗಿ ಮೂಡ ಆಯುಕ್ತ ಮನ್ಸೂರ್‌ ಅಲಿ ಹೇಳಿದರು. ಮುಗಿಸದೆ ಇದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಸಿದರು.

ಉರ್ವ ಮಾರುಕಟ್ಟೆ ನವೀಕರಣ: ಉರ್ವ ಮಾರುಕಟ್ಟೆಯನ್ನು 20 ಕೋಟಿ ರು. ಖರ್ಚು ಮಾಡಿ ನಿರ್ಮಿಸಿ ಹಲವು ವರ್ಷ ಕಳೆದರೂ ಇನ್ನೂ ವ್ಯಾಪಾರಿಗಳಿಗೆ ಯಾಕೆ ಹಂಚಿಕೆ ಮಾಡಿಲ್ಲ ಎಂದು ಸಚಿವರು ಪ್ರಶ್ನಿಸಿದರು. ಅಲ್ಲಿ ಗಾಳಿ- ಬೆಳಕಿನ ವ್ಯವಸ್ಥೆ ಇಲ್ಲ. ಹಾಗಾಗಿ ವ್ಯಾಪಾರಿಗಳು ಬರಲು ಕೇಳುತ್ತಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮಾರುಕಟ್ಟೆಯನ್ನು ಮತ್ತೆ ನವೀಕರಣ ಮಾಡಲು 4 ಕೋಟಿ ರು. ಅಗತ್ಯವಿದೆ ಎಂದಾಗ ಪ್ರಸ್ತಾವನೆ ಕಳುಹಿಸಲು ಸಚಿವ ಬೈರತಿ ಸೂಚಿಸಿದರು.

ಯುಜಿಡಿ ಮಿಸ್ಸಿಂಗ್‌ ಲಿಂಕ್‌ಗೆ 40 ಕೋಟಿ: ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಮಿಸ್ಸಿಂಗ್‌ ಲಿಂಕ್‌ ಸರಿಪಡಿಸಲು 40 ಕೋಟಿ ರು. ನೀಡಲು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕೆಲಸವನ್ನು ಸರಿಯಾಗಿ ಮಾಡಬೇಕು ಎಂದು ಸೂಚಿಸಿದರು.

ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಎಂಎಲ್ಸಿ ಮಂಜುನಾಥ ಭಂಡಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್‌, ಪಾಲಿಕೆ ಆಯುಕ್ತ ಆನಂದ್‌ ಇದ್ದರು.ಒತ್ತುವರಿ ತೆರವಿಗೆ ‘ಸ್ಪೆಷಲ್‌ ಡ್ರೈವ್‌’ನಗರದಲ್ಲಿ ಹಲವು ರಾಜಕಾಲುವೆಗಳು, ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಪಾಲಿಕೆ ಸದಸ್ಯ ವಿನಯರಾಜ್‌ ಸಚಿವರ ಗಮನ ಸೆಳೆದರು. ಇದು ಗಂಭೀರ ವಿಚಾರ. ಒತ್ತುವರಿ ತೆರವುಗೊಳಿಸಲು ಸ್ಪೆಷಲ್‌ ಡ್ರೈವ್‌ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಸಚಿವ ಬೈರತಿ ನಿರ್ದೇಶನ ನೀಡಿದರು.ಮುಖ್ಯ ಎಂಜಿನಿಯರ್‌ಗೆ ಗೆಟೌಟ್‌ ಎಂದ ಸಚಿವ!

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಚೀಫ್ ಎಂಜಿನಿಯರ್‌ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ‘ಗೆಟ್ ಔಟ್’ ಎಂದು ಸಭೆಯಿಂದ ಹೊರಹಾಕಿದ ಘಟನೆ ನಡೆಯಿತು. ಕೆಯುಐಡಿಎಫ್‌ಸಿ ಕಾಮಗಾರಿಗಳು ತೀವ್ರ ವಿಳಂಬಗತಿಯಲ್ಲಿ ನಡೆಯುತ್ತಿದೆ. ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಆಗುತ್ತಾ? ಎಂದು ಚೀಫ್‌ ಎಂಜಿನಿಯರ್‌ ಜಯರಾಮ್‌ ಅವರನ್ನು ಸಚಿವರು ಪ್ರಶ್ನಿಸಿದರಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಯರಾಮ್‌ ‘ಹಾಗಾದರೆ ನಾನು ರಿಸೈನ್ ಮಾಡ್ತೇನೆ’ ಎಂದರು. ಇದರಿಂದ ತೀವ್ರ ಕೆರಳಿದ ಸಚಿವ ಬೈರತಿ ಸುರೇಶ್‌, ಗೆಟ್ ಔಟ್ ಫ್ರಂ ಹಿಯರ್ ಎಂದು ಆಜ್ಞೆ ಮಾಡಿದರು. ಕೊನೆಗೆ ಅಧಿಕಾರಿ ಸಭೆಯಿಂದ ಹೊರನಡೆದರು. ಜಯರಾಮ್ ಅವರು ಕೆಯುಐಡಿಎಫ್‌ಸಿ ಚೀಫ್‌ ಎಂಜಿನಿಯರ್‌ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದಿದ್ದರು.