ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ವಾತಂತ್ರ‍್ಯ ಸಿಕ್ಕಂದಿನಿಂದ ಈ ಭಾಗದ ಅನೇಕ ಗಣ್ಯರು ಸಚಿವರಾಗಿ ಸೇವೆ ಸಲ್ಲಿಸಿದ್ದರೂ, ಈ ಬಾರಿ ಬಸವಂತಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಶನಿವಾರ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು, ಬಸವಂತಪ್ಪ, ಬಿ.ದೇವೇಂದ್ರಪ್ಪ ಹಾಗೂ ಶಿವಗಂಗಾ ಬಸವರಾಜ್ ಸೇರಿದಂತೆ ಹಲವರು ಒಟ್ಟಾಗಿ ಚರ್ಚಿಸುತ್ತಿದ್ದೆವು. ಬಸವಂತಪ್ಪ ನಿಮಗೆ ಖಂಡಿತ ಅದೃಷ್ಟ ಒಲಿದು ಸಚಿವ ಸ್ಥಾನ ಸಿಗುತ್ತದೆ ಎಂದು ನಾವು ಹೇಳುತ್ತಿದ್ದೆವು. ಇಂದು ಆ ಅದೃಷ್ಟ ಬಸವಂತಪ್ಪರಿಗೆ ಒಲಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಸದೀಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ರವೀಂದ್ರನಾಥ್, ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ನಾಗಮ್ಮ ಕೇಶವಮೂರ್ತಿ ಅವರಂತಹ ಹಿರಿಯ ನಾಯಕರು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಈ ಬಾರಿ ಗಾಂಧಿವಾದಿ ತತ್ವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಬಸವಂತಪ್ಪ ಅವರಿಗೆ ಈ ಮಹತ್ವದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಐತಿಹಾಸಿಕ ಸಾಧನೆಗೆ ಕ್ಷೇತ್ರದ ಮತದಾರ ಪ್ರಭುಗಳು, ಕ್ಷೇತ್ರದ ಜನತೆ ಹಾಗೂ ಪಕ್ಷದ ವರಿಷ್ಠರೇ ಮುಖ್ಯ ಕಾರಣ ಎಂದರು.

ನಾವು ಮೂರು ಬಾರಿ ಗೆದ್ದ 33 ಜನ ಶಾಸಕರು ಒಟ್ಟಾಗಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಈ 33 ಜನರಲ್ಲಿ ಯಾರಾದರೂ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಿ ಎಂದು ಕೇಳಿದ್ದೇವೆಯೇ ವಿನಃ ನನಗೇ ಕೊಡಿ ಎಂದು ನಾನು ಎಲ್ಲೂ ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು.


ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ನಮ್ಮ ಜಿಲ್ಲೆಗೆ ಈ ಬಾರಿ ಇಬ್ಬರು ಸಚಿವರನ್ನು ನೀಡುವ ಮೂಲಕ ಸರ್ಕಾರ ಜಿಲ್ಲೆಯ ಜನತೆಗೆ ಮಹತ್ತರ ಕೊಡುಗೆ ನೀಡಿದೆ. ಯಾವ ಜಿಲ್ಲೆಗೂ ಸಿಗದ ಆದ್ಯತೆ ನಮ್ಮ ಜಿಲ್ಲೆಗೆ ಸಿಕ್ಕಿದೆ. ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕೆ.ಎಸ್. ಬಸವಂತಪ್ಪ ಇಬ್ಬರಿಗೂ ಸಚಿವ ಸ್ಥಾನ ಸಿಕ್ಕಿರುವುದು ಸಮಸ್ತ ಜಿಲ್ಲೆಯ ಜನತೆಗೆ ಸಿಕ್ಕ ಭಾಗ್ಯ. ಇಬ್ಬರು ಸಚಿವರನ್ನು ನೀಡಿದ್ದಕ್ಕಾಗಿ ಸರ್ಕಾರಕ್ಕೆ ಹಾಗೂ ಹೈಕಮಾಂಡ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

ಬಸವಂತಪ್ಪನವರು ನಿರಂತರವಾಗಿ ಬಡವರ ಪರವಾಗಿ ಹೋರಾಟ ನಡೆಸುತ್ತಾ ಬಂದವರು. ಒಂದೇ ಒಂದು ದಿನವೂ ವಿಶ್ರಮಿಸದೇ ಪಕ್ಷ ಸಂಘಟನೆಗಾಗಿ ಓಡಾಡಿದ್ದಾರೆ. ಅವರ ಶ್ರಮಕ್ಕೆ ಇಂದು ಸಚಿವ ಸ್ಥಾನ ದೊರೆತಿದೆ. ಮಾಯಕೊಂಡ ಕ್ಷೇತ್ರದ ಶಾಸಕರಾಗಿ ಹಾಗೂ ಸಚಿವರಾಗಿ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾಯಕೊಂಡ ಕ್ಷೇತ್ರದಲ್ಲಿ ಇನ್ನು ಸಾಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಪ್ರಸ್ತಾಪಿಸಿದ ಮುಖಂಡರು, ಬಸವಂತಪ್ಪ ಅವರಿಗೆ ಉತ್ತಮ ಆರೋಗ್ಯ, ಆಯುಸ್ಸು ನೀಡಲಿ ಹಾಗೂ ಅವರು ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಇತರರು ಇದ್ದರು.

- - -

* ಬೈಕ್-ಕಾರ್ ರ‍್ಯಾಲಿ ಮೂಲಕ ಸಚಿವರಿಗೆ ಅದ್ಧೂರಿ ಸ್ವಾಗತ

ದಾವಣಗೆರೆ: ನೂತನ ಸಚಿವರಾಗಿ ಪ್ರಥಮ ಬಾರಿಗೆ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.ಶನಿವಾರ ದಾವಣಗೆರೆ ಜಿಲ್ಲೆ ಗಡಿ ಭಾಗದ ನೀರ್ಥಡಿ ಗ್ರಾಮದ ಗೇಟ್ ಬಳಿ ಸಚಿವರಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಚಿವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಇದೇ ವೇಳೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಹಾರಗಳನ್ನು ಹಾಕಿ ಸಚಿವರನ್ನು ಅಭಿನಂದಿಸಿದರು. ಬೆಂಗಳೂರಿನಿಂದ ಜಿಲ್ಲೆಯ ಗಡಿ ಭಾಗವಾದ ನೀರ್ಥಡಿ ಗೇಟ್‌ವರೆಗೆ ಆಗಮಿಸಿದ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಮಾರ್ಗದುದ್ದಕ್ಕೂ ವಿವಿಧೆಡೆ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಅಭಿನಂದಿಸಿದರು.ನೀರ್ಥಡಿ ಗ್ರಾಮದ ಗೇಟ್ ಬಳಿಯಿಂದ ಬೈಕ್ ಹಾಗೂ ಕಾರುಗಳ ಬೃಹತ್ ರ‍್ಯಾಲಿ ಮೂಲಕ ಸಚಿವರನ್ನು ಹೆಬ್ಬಾಳು ಟೋಲ್ ಬಳಿ ಕರೆತರಲಾಯಿತು. ಕಾರ್ಯಕರ್ತರು, ಆನಗೋಡು ಗ್ರಾಮದಲ್ಲಿಯೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಿದರು.

ಬಳಿಕ ಕೆ.ಎಸ್.ಬಸವಂತಪ್ಪ ಅವರು ಶ್ರೀ ಮರಳಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನೇರ್ಲಿಗೆ, ಸುಲ್ತಾನಿಪುರ, ಕೊಡಗನೂರು ಕ್ರಾಸ್, ದಿಂಡದಹಳ್ಳಿ ಹಾಗೂ ದೊಡ್ಡಮಾಗಡಿ ಮಾರ್ಗವಾಗಿ ರ‍್ಯಾಲಿ ಮಾಯಕೊಂಡ ತಲುಪಿತು. ಮಾಯಕೊಂಡದ ಕೆಪಿಎಸ್ ಶಾಲಾ ಆವರಣದಲ್ಲಿ ನೂತನ ಸಚಿವರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.

- - -

-8ಕೆಡಿವಿಜಿ39: ದಾವಣಗೆರೆ ತಾ. ಮಾಯಕೊಂಡದಲ್ಲಿ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಇತರರು ಉದ್ಘಾಟಿಸಿದರು.-8ಕೆಡಿವಿಜಿ40: ದಾವಣಗೆರೆ ತಾ.ಮಾಯಕೊಂಡದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿದರು.

-8ಕೆಡಿವಿಜಿ41: ದಾವಣಗೆರೆ ತಾ.ಮಾಯಕೊಂಡದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಅವರ ಅಭಿಮಾನಿಗಳು ಬೃಹತ್ ಗಾತ್ರದ ಹಾರವನ್ನು ಹಾಕಿ ಅಭಿನಂದಿಸಿದರು.