ಸಾರಾಂಶ
ಶಿರಸಿ: ಓದು ಮತ್ತು ಮಾಹಿತಿ ನೀಡುವುದರ ಮೂಲಕ ನಮ್ಮ ನಾಡಿನ ಸಂಸ್ಕೃತಿ, ಆಚಾರ-ವಿಚಾರ ಬಿಂಬಿಸುವುದು ಸರ್ಕಾರಿ ಶಾಲೆಗಳ ಮುಖ್ಯ ಧ್ಯೇಯವಾಗಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ.ಬಸವರಾಜ ಹೇಳಿದರು.
ಅವರು ಭಾನುವಾರ ಪಂಡಿತ ಶ್ರೀಪಾದ್ ರಾವ್ ಸ್ಮಾರಕ ರಂಗಮಂದಿರಲ್ಲಿ ಹಮ್ಮಿಕೊಂಡ ತಾಲೂಕಿನ ಸುಗಾವಿಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಬನವಾಸಿ ಎಂದರೆ ಮೊದಲು ನೆನಪಿಗೆ ಬರುವುದು ಆದಿ ಕವಿ ಪಂಪ ಮತ್ತು ಮಧುಕೇಶ್ವರ ದೇವಾಲಯ. ಸುಸಂಸ್ಕೃತರ ನಾಡಿನಲ್ಲಿ ಶಾಲೆಯು ಶತಮಾನೋತ್ಸವ ಪೂರೈಸಿದೆ ಎಂದರೆ ಇಡೀ ಊರಿಗೆ ಸಂಭ್ರಮ-ಸಡಗರ. ನಾವು ಇಂದು ವೈಜ್ಞಾನಿಕ ಯುಗದಲ್ಲಿದ್ದೇವೆ. ಆದರೆ ೧೧೪ ವರ್ಷದ ಹಿಂದೆ ಸೌಲಭ್ಯವಿಲ್ಲದ ಸಂದರ್ಭದಲ್ಲಿ ಹಿರಿಯರು ನಮ್ಮೂರಿಗೆ ಶಾಲೆ ಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಕನಸನ್ನು ಹೊತ್ತಿ ಮೊದಲು ೭ ಮಕ್ಕಳಿಂದ ಪ್ರಾರಂಭಿಸಿ, ನಂತರ ಸಾವಿರಾರು ವಿದ್ಯಾರ್ಥಿಗಳು ಕಲಿತ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಪ್ರತಿಯೊಬ್ಬರು ತಾವು ಕಲಿತ ಶಾಲೆಯ ಮೇಲೆ ಹೆಮ್ಮೆ ಮತ್ತು ಅಭಿಮಾನ ಹೊಂದಿರಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಶಾಲೆಗಳು ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆ ನೀಡಿವೆ ಎಂದ ಅವರು, ಮಲೆನಾಡಿ ಭಾಗದಲ್ಲಿ ಮಕ್ಕಳ ಸಂಖ್ಯೆ ಗಣನೀಯ ಕಡಿಮೆಯಾಗುತ್ತಿದೆ. ಅನೇಕ ಕಡೆಗಳಲ್ಲಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಶಿಕ್ಷಣ ಇಲಾಖೆಯು ಶಾಲೆಗಳಿಗೆ ಅನೇಕ ಕಲಿಕಾ ಪರಿಕರ ನೀಡಲು ಸಿದ್ದವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಲಕರಿಗೆ ಖಾಸಗಿ ಶಾಲೆಗಳತ್ತ ಹೆಚ್ಚು ವ್ಯಾಮೋಹ ಬಂದಿದೆ. ಖಾಸಗಿ ಶಾಲೆಗಳಿಗಿಂತ ಹೆಚ್ಚು ಸೌಲಭ್ಯಗಳು ಸರ್ಕಾರಿ ಶಾಲೆಗಳು ಹೊಂದಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.ಸುಗಾವಿ ಗ್ರಾಪಂ ಅಧ್ಯಕ್ಷೆ ಲಲಿತಾ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಧುಕೇಶ್ವರ ಚೆನ್ನಯ್ಯ, ಗ್ರಾಪಂ ಸದಸ್ಯ ಗಣೇಶ ಜೋಶಿ, ಊರಿನ ಹಿರಿಯ ಮುಖಂಡ ಜಯದೇವ ಶ್ರೀಪಾದ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಡಯಟ್ ಪ್ರಾಂಶುಪಾಲ ಎಂ.ಎಸ್. ಹೆಗಡೆ, ಪ್ರಾಂಶುಪಾಲ ಎ.ಎಸ್. ಲಕ್ಷ್ಮೀಶ, ಬನವಾಸಿ ವಲಯ ಸಂಯೋಜಕ ಸತೀಶ ಪಟಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಪಟಗಾರ, ವಲಯ ಸಂಪನ್ಮೂಲಕ ವ್ಯಕ್ತಿ ದೀಪಕ ಗೋಕರ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರ.ಎನ್ ಮತ್ತಿತರರು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಕಾಂತ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿಜಯಕುಮಾರ ರಾವ್ ಕಲ್ಗುಂಡಿಕೊಪ್ಪ ಸ್ವಾಗತಿಸಿದರು. ಶಿಕ್ಷಕ ಅಶೋಕಕುಮಾರ ಪಟಗಾರ ವರದಿ ವಾಚಿಸಿದರು.ಪ್ರತಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನುರಿತು ವಿಷಯವಾರು ಶಿಕ್ಷಕರನ್ನು ನೇಮಿಸಲಾಗಿದ್ದು, ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಾಗಬೇಕೆಂದು ಶಿಕ್ಷಣ ಇಲಾಖೆಯು ಬೆಳಗ್ಗೆ ಹಾಲಿನ ಜತೆ ರಾಗಿ ಮಾರ್ಟ್ ನೀಡುವ ಹೊಸ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ಶಿರಸಿ ಡಿಡಿಪಿಐ ಪಿ.ಬಸವರಾಜ ಹೇಳಿದರು.