ಬಲಿಷ್ಠ ರಾಷ್ಟ್ರದ ನಿರ್ಮಾಣವೇ ಸಂಘದ ಧ್ಯೇಯ: ಸುಧೀರ ಘೋರ್ಪಡೆ

| Published : Oct 03 2025, 01:07 AM IST

ಸಾರಾಂಶ

ಆರ್ಎಸ್ಎಸ್ ನೂರು ವರ್ಷಗಳ ಹಿಂದೆ ಒಂದು ಶಾಖೆಯಿಂದ ಪ್ರಾರಂಭವಾದ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ಮುಂಡರಗಿ: ಭಾರತ ಮಾತೆಯ ಕೀರ್ತಿಯನ್ನು ಇಡೀ ವಿಶ್ವದಲ್ಲಿ ಪಸರಿಸಬೇಕಾದರೆ, ರಾಷ್ಟ್ರಕ್ಕಾಗಿ ಸಮರ್ಪಣಾ ಭಾವದಿಂದ ಸೇವೆ ಮಾಡುವುದು ಅಗತ್ಯವಾಗಿದೆ. ಇದರ ಜತೆ ಜತೆಗೆ ಪಂಚ ಪರಿವರ್ತನೆ ಮೂಲಕ ಬಲಿಷ್ಠ ರಾಷ್ಟ್ರದ ನಿರ್ಮಾಣದ ಧ್ಯೇಯವನ್ನು ಸಂಘ ಅನುಸರಿಸಿಕೊಂಡು ಬಂದಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರ ಘೋರ್ಪಡೆ ಹೇಳಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂಡರಗಿ ಶಾಖೆಯಿಂದ ಗುರುವಾರ ನಡೆದ ವಿಜಯದಶಮಿ ಉತ್ಸವದ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ನೂರು ವರ್ಷಗಳ ಹಿಂದೆ ಒಂದು ಶಾಖೆಯಿಂದ ಪ್ರಾರಂಭವಾದ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಶತಾಬ್ದಿ ವರ್ಷದಲ್ಲಿ ಸಂಘ ಕಾರ್ಯದ ವಿಸ್ತರಣೆ ಮತ್ತು ದೃಢೀಕರಣ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಪುನರ್ ಜಾಗೃತಿಯ ಗುರಿಯೊಂದಿಗೆ ಮುನ್ನಡೆಯಲಿದೆ ಎಂದು ಹೇಳಿದರು.

ಭಾರತೀಯ ಕುಟುಂಬ ವ್ಯವಸ್ಥೆಯ ಮೌಲ್ಯಗಳ ರಕ್ಷಣೆ, ಸ್ವದೇಶಿ ಮೂಲ ಸ್ವತತ್ವದ ಸಾಕಾರತೆ, ಪರಿಸರ ಕಾಳಜಿ ಮತ್ತು ಸಂರಕ್ಷಣೆಗೆ ನಮ್ಮ ಬದ್ಧತೆ, ಉತ್ತಮ ನಾಗರಿಕರಾಗುವತ್ತ ನಾಗರಿಕ ಕರ್ತವ್ಯಗಳ ಭಾವದಿಂದ ವ್ಯವಹರಿಸಿದರೆ ನಮ್ಮ ಸಾಮಾಜಿಕ ಬದುಕು ನೆಮ್ಮದಿಯ ನೆಲೆ ಬೀಡಾಗಲಿದೆ. ದೇಶ, ಧರ್ಮ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸಮಾಜದಲ್ಲಿ ರಾಷ್ಟ್ರಭಕ್ತಿ ಬೀಜ ಬಿತ್ತುತ್ತಾ ಹಿಂದೂ ಸಮಾಜ ಗಟ್ಟಿಯಾಗಿ ಬೆಳೆಯಲು ಸಂಘ ಜನರನ್ನು ಸಂಘಟಿಸಿ ರಾಷ್ಟ್ರದ ಅಭ್ಯುದಯ ಹಾಗೂ ಶಕ್ತಿಯ ಪರಿಣಾಮವಾಗಿ ಭಾರತ ವಿಶ್ವ ಗುರುವಾಗಿ ಬೆಳೆಯುತ್ತದೆ ಎಂದರು.

ತಾಲೂಕು ಸಂಘಚಾಲಕ ಸಂಜೀವ ರಿತ್ತಿ ಉಪಸ್ಥಿತರಿದ್ದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಆನಂದಗೌಡ ಪಾಟೀಲ, ಎಸ್.ಎಸ್. ಗಡ್ಡದ, ವಾಸುದೇವ ಅರ್ಕಸಾಲಿ, ಅವಿನಾಶ ಗೊಡಕಿಂಡಿ, ವೀರಣ್ಣ ತುಪ್ಪದ, ಗುರುರಾಜ ಜೋಶಿ, ಜ್ಯೋತಿ ಹಾನಗಲ್, ಪ್ರಭಾವತಿ ಬೆಳವಣಿಕಿಮಠ, ಮಂಜುನಾಥ ಇಟಗಿ, ಶ್ರೀನಿವಾಸ ಕಟ್ಟಿಮನಿ, ಹನುಮಂತ ಅಕ್ಕಸಾಲಿ, ಚಂದ್ರು ಹಿರೇಮಠ, ನಾಗರಾಜ ಪತ್ತಾರ, ನಾರಾಯಣ ಮಹೇಂದ್ರಕರ್, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ವಿನಯ ಗಂಧದ ಉಪಸ್ಥಿತರಿದ್ದರು. ಶೇಖರಗೌಡ ಪಾಟೀಲ ಸ್ವಾಗತಿಸಿದರು, ಬಸವರಾಜ ಹಕ್ಕಂಡಿ ವಂದಿಸಿದರು.