ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ತಲುಪಿಸುವ ಉದ್ದೇಶದಿಂದ ಸ್ಥಾಪನೆಯಾದ ಕೆಎಲ್‌ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ಕೆಎಲ್‌ಇ ಸಂಸ್ಥಾಪನಾ ದಿನಾಚರಣೆಯಲ್ಲಿ ಲೋಕಾಪುರ ಹೀರೆಮಠದ ಶ್ರೀ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ತಲುಪಿಸುವ ಉದ್ದೇಶದಿಂದ ಸ್ಥಾಪನೆಯಾದ ಕೆಎಲ್‌ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಂಸ್ಥೆಯ ಈ ಸಾಧನೆಗೆ ಸಪ್ತ ಋಷಿಗಳ ಕೊಡುಗೆ ಅಪಾರ ಎಂದು ಲೋಕಾಪುರ ಹೀರೆಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ನಗರದ ಜ. ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿಯ ಎಲ್ಲ ಕೆಎಲ್‌ಇ ಅಂಗಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 111ನೇ ಕೆಎಲ್‌ಇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜದ ಸುವ್ಯವಸ್ಥೆ ಮತ್ತು ಪ್ರಗತಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಸಂಸ್ಥೆಗಳ ಪೈಕಿ ಕೆಎಲ್‌ಇ ಸಂಸ್ಥೆ ವಿಶಿಷ್ಟ ಸ್ಥಾನ ಹೊಂದಿದೆ. ಬಡವರಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಅಂದು ಕೆಲವೇ ಸಂಸ್ಥೆಗಳೊಂದಿಗೆ ಆರಂಭವಾದ ಕೆಎಲ್‌ಇ ಇಂದು ಬೃಹತ್ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಸಾಧನೆ ಮತ್ತು ಶ್ರೇಷ್ಠತೆ ಶ್ಲಾಘನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಎಲ್. ಪಾಟೀಲ ಅವರು ಕೆಎಲ್‌ಇ ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸಿ ಪುಷ್ಪನಮನ ಸಲ್ಲಿಸಿದರು. ಡಾ. ನೇತ್ರಾವತಿ ಗಬ್ಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರು, ಎಚ್‌ಡಿ ಪದವಿ ಪಡೆದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕೆಎಲ್‌ಇ ಸಂಸ್ಥೆಯ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸತೀಶ ಕೆ. ಪ್ರಾರ್ಥಿಸಿದರು. ಡಾ. ಗುರು ಪಾಟೀಲ ಪರಿಚಯಿಸಿದರು. ಪದವಿಪೂರ್ವ ಪ್ರಾಚಾರ್ಯ ಡಾ. ಡಿ.ಕೆ. ಮಾಘಮೂಡೆ ಸ್ವಾಗತಿಸಿದರು. ಪ್ರೊ. ನಾಗವೇಣಿ ಕೆ. ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರೀತಿ ಪಾಟೀಲ ವಂದಿಸಿದರು.