ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮಖ
ಚಿತ್ರದುರ್ಗ: ಭಕ್ತಾದಿಗಳ ಉಸಾಬರಿಗೆ ಹೋಗದೆ, ಅನಿವಾಸಿ ಭಾರತೀಯರ ಮುಂದೆ ಕೈ ಚಾಚದೆ ಸರ್ಕಾರ ಕೊಟ್ಟ ದುಡ್ಡಲ್ಲೇ ಮುರುಘಾಮಠ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣ ಮಾಡಬಹುದಿತ್ತು. ಆದರೆ ಅಂತಹದ್ದೊಂದು ಅವಕಾಶವ ಕೈ ಚೆಲ್ಲಿ, ಎತ್ತರದ ಶ್ರೇಷ್ಟತೆ ವ್ಯಸನಕ್ಕೆ ಕಟ್ಟು ಬಿತ್ತಾ ಎಂಬ ಸಂದೇಹಗಳು ಮೂಡಿವೆ. ಸ್ವತಹ ಮುರುಘಾಠದ ಪೀಠಾಧಿಪತಿಗಳು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಇಂತಹದ್ದೊಂದು ಸಂಗತಿ ಬಯಲಾಗಿದೆ.2013 ಮಾ.1ರಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಮುರುಘಾಮಠದ ಪೀಠಾಧಿಪತಿಗಳು ಜಗಜ್ಯೋತಿ ಬಸವೇಶ್ವರರ ಏಕ ಶಿಲಾಮೂರ್ತಿ ಪ್ರಸ್ತಾವನೆ ಪರಿಷ್ಕರಿಸಿ ಕಂಚಿನ ಪ್ರತಿಮೆ ಸ್ಥಾಪಿಸಲು ಅಂದಾಜು ಪಟ್ಟಿ ತಯಾರಿಸಿ ತಾಂತ್ರಿಕ ಮಂಜೂರಾತಿ ನೀಡುವಂತೆ ಕೋರಲಾಗಿತ್ತು. ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಕಷ್ಟ ಸಾಧ್ಯವೆಂಬುದ ಪತ್ರದಲ್ಲಿ ಸೊಗಸಾಗಿ ನಿರೂಪಿಸಲಾಗಿತ್ತು. ರಾಜ್ಯ ಸರ್ಕಾರ ಮೊದಲು ಏಕಶಿಲಾ ಮೂರ್ತಿಗೆ 5 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಅದರಲ್ಲಿ 2 ಕೋಟಿ ರು. ಮೊತ್ತ ಮುರುಘಾಮಠಕ್ಕೆ ನೀಡಿತ್ತು. 13.42 ಕೋಟಿ ರು. ಮೊತ್ತದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಇದಾಗಿದ್ದು, 12 ವರ್ಷದ ಹಿಂದೆಯೇ ಅಂದರೆ 2011 ನ.11ರಂದು ಅನುಮೋದನೆ ನೀಡಿತ್ತು. ಏಕಶಿಲೆ ಲಭ್ಯವಾಗದ ಕಾರಣ ಕಂಚಿನ ಪ್ರತಿಮೆಗೆ ಪ್ರಸ್ತಾವನೆ ಪರಿಷ್ಕರಿಸಲಾಗಿತ್ತು.
ಏಕಶಿಲೆ ಏಕೆ ಸಿಗಲಿಲ್ಲ ಗೊತ್ತಾ: ಮುರುಘಾ ಮಠದ ಪೀಠಾಧಿಪತಿಗಳ ಪತ್ರದ ಅನುಸಾರ ಏಕಶಿಲಾ ಪುತ್ಥಳಿ ನಿರ್ಮಿಸಲು ಚಿಕ್ಕಬಳ್ಳಾಪುರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೊಯಿರಾ ಕಲ್ಲುಗಳಿಂದ ಮಾತ್ರ ಸಾಧ್ಯವಾಗುತ್ತದೆ. ಕೊಯಿರಾ ಕಲ್ಲು ತೆಗೆಯಲು ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಕೊಯಿರಾದ ಸುತ್ತಮುತ್ತಲಿನ ಗ್ರಾಮಗಳು ತಿಪ್ಪಗೊಂಡನಹಳ್ಳಿ ಜಲಾಶಯದ ವ್ಯಾಪ್ತಿಯಲ್ಲಿದ್ದು, ಈ ಪ್ರದೇಶದಲ್ಲಿ ಸರ್ಕಾರದ ಅಧಿಸೂಚನೆ ಪ್ರಕಾರ (2003ರ ನ.18ರ ಅನುಸಾರ) ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿದೆ. ಹಾಗಾಗಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶವಿಲ್ಲೆಂದು ಸ್ಪಷ್ಟಪಡಿಸಿದ್ದರು. ಈ ಒಂದು ಕಾರಣ ಮುಂದಿಟ್ಟುಕೊಂಡು ಏಕ ಶಿಲೆಯಿಂದ 154 ಅಡಿ ಎತ್ತರದ ಕಂಚಿನ ಪುತ್ಥಳಿ ಸ್ಥಾಪಿಸುವ ಉದ್ದೇಶ ಹೊಂದಿ 26 ಕೋಟಿ ರು. ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿಗೆ ಸರ್ಕಾರದಿಂದ ಅನೋಮೋದನೆ ಕೋರಲಾಗಿದೆ. ಅಚ್ಚರಿ ಎಂದರೆ ಪ್ರತಿಮೆಗೆ ಕಲ್ಲು ಎಲ್ಲಿ ಸಿಗುತ್ತದೆ ಎಂಬ ಕನಿಷ್ಟ ಆಲೋಚನೆಗಳ ಮಾಡದೆ ಈ ಮೊದಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತು.ಐದು ಕೋಟಿ ಸಾಕು: ಇದೇ ಪತ್ರದಲ್ಲಿ ಮುರುಘಾಮಠ ಸರ್ಕಾರದ ಗಮನಕ್ಕೆ ತರಲಾದ ಸಂಗತಿಯಲ್ಲಿ ವಾಸ್ತವದ ಅರಿವಿನ ವಿಷಯವೊಂದನ್ನು ಪ್ರಸ್ತಾಪಿಸಲಾಗಿದೆ. ಜಗಜ್ಯೋತಿ ಬಸವೇಶ್ವರರ ಏಕಶಿಲಾ ಮೂರ್ತಿಯ ಬದಲಾಗಿ ಕಂಚಿನ ಪುತ್ಥಳಿಯ ಸ್ಥಾಪಿಸಲು 26 ಕೋಟಿ ರುಪಾಯಿ ಪ್ರಸ್ತಾವನೆ ತಯಾರಿಸಿ ಸಲ್ಲಿಸಲಾಗಿದೆ. 26 ಕೋಟಿ ರುಪಾಯಿ ಮೊತ್ತದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ರು.ಐದು ಕೋಟಿ ಹೊರತು ಪಡಿಸಿ ಉಳಿದ ಮೊತ್ತವನ್ನು ಶ್ರೀಮಠ ಮತ್ತು ಭಕ್ತಾಧಿಗಳಿಂದಲೇ ಭರಿಸಲಾಗುವುದು. ಹಾಗಾಗಿ 26 ಕೋಟಿ ರುಪಾಯಿ ವೆಚ್ದ ಅಂದಾಜು ಪಟ್ಟಿಗೆ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಮುರುಘಾಮಠ ಬರೆದ ಪತ್ರದಲ್ಲಿ ವಿನಂತಿಸಿತ್ತು.
ಆ ನಂತರದ ಬೆಳವಣಿಗೆಯಲ್ಲಿ 154 ಅಡಿ ಎತ್ತರ ಕಂಚಿನ ಪ್ರತಿಮೆ ಮತ್ತೆ 323 ಅಡಿ ಎತ್ತರಕ್ಕೆ ಜಿಗಿದಿದೆ. ಮೊತ್ತ ಕೂಡಾ ಪರಿಷ್ಕರಣೆಯಾಗಿ 300 ಕೋಟಿ ರುಪಾಯಿ ತಲುಪಿದೆ. ಸರ್ಕಾರ ಈವರೆಗೆ ಮುರುಘಾಮಠಕ್ಕೆ 35 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದು ಶ್ರೀ ಮಠ ಮತ್ತು ಭಕ್ತಾಧಿಗಳಿಂದ ಎಷ್ಟು ಮೊತ್ತ ಭರಿಸಲಾಗಿದೆ ಎಂಬುದಕ್ಕೆ ಸ್ಪಷ್ಟತೆಗಳಿಲ್ಲ.ಅಂದಹಾಗೆ ಮುರುಘಾಮಠ ಈ ಮೊದಲು ಏಕಶಿಲೆಯಿಂದ 154 ಅಡಿ ಕಂಚಿನ ಪ್ರತಿಮೆಗೆ ಪರಿಷ್ಕೃತ ಅಂದಾಜು ಕೇವಲ 26 ಕೋಟಿ ರುಪಾಯಿ ಮಾತ್ರ ನಮೂದಿಸಿತ್ತು. ರಾಜ್ಯ ಸರ್ಕಾರ ಇದುವರೆಗೂ 35 ಕೋಟಿ ರು. ಬಿಡುಗಡೆ ಮಾಡಿದೆ. ಅಂದರೆ ಸರ್ಕಾರ ಬಿಡುಗಡೆ ಮಾಡಿದ ದುಡ್ಡಿನಲ್ಲಿಯೇ ಮುರುಘಾಮಠ 154 ಅಡಿ ಎತ್ತರದ ಪ್ರತಿಮೆ ನಿರ್ಮಿಸಿ ಆಶಯಗಳ ಈಡೇರಿಸಿಕೊಳ್ಳಬಹುದಿತ್ತು. ಅದು ಸಾಧ್ಯವಾಗದೇ ಹೋಗಿದೆ. ಎತ್ತರಕ್ಕೇರುವ ಶ್ರೇಷ್ಠತೆ ವ್ಯಸನಕ್ಕೆ ಮುಗಿಬಿದ್ದ ಪರಿಣಾಮ 25 ಕೋಟಿ ರು. ಸುರಿದರೂ ಕಾಮಗಾರಿ ಇನ್ನು ನೆಲ ಬಿಟ್ಟು ಮೇಲೆದ್ದಿಲ್ಲ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))