ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ: ಕಾವೇರಿ ತವರು ಕೊಡಗು ಜಿಲ್ಲೆಯಲ್ಲೂ ಕೂಡಾ ಮುಂಗಾರು ಮಳೆ ಕೈಕೊಟ್ಟಿದ್ದು, ಕೃಷಿಗೆ ಭಾರಿ ಪೆಟ್ಟು ಬಿದಿದ್ದೆ. ಜೂನ್ ತಿಂಗಳು ಅರ್ಧ ಕಳೆದರೂ ಕೂಡ ಬಹುತೇಕ ತೋಟಗಳಲ್ಲಿ ಕಾಳು ಮೆಣಸು ಹೂವು ಅರಳದ ಪರಿಣಾಮ ಬೆಳೆಗಾರರು ಕಂಗಾಲಾಗಿದ್ದು, ಈ ಬಾರಿ ಫಸಲು ಕೊರತೆ ಎದುರಿಸುವ ಆತಂಕ ಉಂಟಾಗಿದೆ.ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ವಾರದಲ್ಲೇ ಕಾಳು ಮೆಣಸು ಹೂವುಗಳು ಅರಳುತ್ತದೆ. ಆದರೆ ಈ ಬಾರಿ ಬೇಸಿಗೆ ಮಳೆ ಕೊರತೆಯಿಂದ ಕಾಳು ಮೆಣಸು ಬಳ್ಳಿಗಳು ಸೊರಗಿ ಹೋಗಿವೆ. ಮುಂಗಾರು ಮಳೆಯೂ ಕೈಕೊಟ್ಟ ಕಾರಣ ಕಾಳುಮೆಣಸು ಹೂವು ಅರಳದೆ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳು 20 ಕಳೆದರೂ ಸಾಕಷ್ಟು ಪ್ರಮಾಣದ ಮಳೆಯಾಗಿಲ್ಲ. ಬೇಸಗೆ ಮಳೆ ಕೊರತೆ ಹಿನ್ನೆಲೆಯಲ್ಲಿ ಬೆಳೆಗಾರರು ಸ್ಪಿಕ್ಲರ್ ಗಳ ಮೂಲಕ ಕೃತಕವಾಗಿ ನೀರು ಸಿಂಪಡಿಸಿದ್ದರು. ಆದರೆ ಇದೀಗ ಜೂನ್ ತಿಂಗಳು ಮಳೆ ಸಮಯದಲ್ಲೂ ಸ್ಪ್ರಿಂಕ್ಲರ್ ಬಳಕೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿರುವುದರಿಂದ ಬೆಳೆಗಾರರಿಗೆ ಮತ್ತೊಮ್ಮೆ ಆರ್ಥಿಕತೆಗೆ ತೊಂದರೆ ಸಿಲುಕುವುದು ನಿಶ್ಚಿತ.

ಮಳೆಗಾಲದಲ್ಲಿ ಕಾಳುಮೆಣಸು ಬಳ್ಳಿಯಲ್ಲಿ ಎಲೆಗಳು ಅರಳುವ ಮೂಲಕ ಸಮೃದ್ಧವಾಗಿ ಹಸಿರಾಗಿರುತ್ತದೆ. ಪ್ರಸ್ತುತ ಮಳೆ ಕೊರತೆಯಿಂದ ಕಾಳು ಮೆಣಸು ಫಸಲು ಇನ್ನೂ ಅರಳದೆ ಬಳ್ಳಿ, ಎಲೆಗಳೆಲ್ಲ ಉದುರಿ ಹೋಗಿ ಬಾಡಿದ ಸ್ಥಿತಿಯಲ್ಲಿವೆ. ಮತ್ತೊಂದು ಕಡೆಯಲ್ಲಿ ಮಳೆ ಇಲ್ಲದೆ ಭೂಮಿಯಲ್ಲಿ ತೇವಾಂಶ ಕೊರತೆ ಉಂಟಾಗಿದ್ದು, ಹೊಸ ಮೆಣಸಿನ ಬಳ್ಳಿಗಳನ್ನು ನಾಟಿ ಮಾಡಲು ಕೂಡ ಸಮಸ್ಯೆ ಎದುರಾಗಿದೆ. ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಇಷ್ಟೊಂದು ಮಳೆ ಕೊರತೆ ಎದುರಿಸುತ್ತಿದ್ದೇವೆಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಳೆ ಕೊರತೆಯಿಂದ ಇಳುವರಿ ನಷ್ಟವಾಗುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಕೊಡಗಿನ ಕಾಫಿ ತೋಟಗಳಲ್ಲಿ ಸಿಲ್ವರ್ ಓಕ್ ಮರಗಳು ಅಥವಾ ಅಡಕೆ ಮರಗಳನ್ನು ಆಸರೆಯಾಗಿ ಬಳಸಿಕೊಂಡು ಮೆಣಸಿನ ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಈ ಬಳ್ಳಿಗಳಿಗೆ ಮಿತವಾದ ನೆರಳಿನ ಜೊತೆಗೆ ಬೇಸಿಗೆಯಲ್ಲಿ ನಿಯಮಿತವಾಗಿ ನೀರುಣಿಸುವುದು ಅತ್ಯಗತ್ಯ. ಆದರೆ ಈಗ ಮಳೆಗಾಲದಲ್ಲೇ ನೀರಿಲ್ಲ ಎಂಬುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. *

*ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕಾಳು ಮೆಣಸು ಹೂವು ಅರಳುತ್ತದೆ. ಆದರೆ ಮಳೆ ಬಾರದ ಹಿನ್ನೆಲೆಯಲ್ಲಿ ಕಾಳು ಮೆಣಸು ಹೂ ಅರಳುವುದು ವಿಳಂಬವಾಗಿ ಫಸಲು ನಷ್ಟವಾಗಲಿದೆ. ಪರಾಗ ಸ್ಪರ್ಶ ಕೂಡ ಸರಿಯಾಗಿ ಆಗುವುದಿಲ್ಲ. ಮಳೆ ಇಲ್ಲದ ಹಿನ್ನೆಲೆಯಲ್ಲಿ ಕಾಳು ಮೆಣಸು ಬಳ್ಳಿಗೆ ನೀರು ನೀಡುವುದು ಅವಶ್ಯ. ನೀರಿಲ್ಲದ ಪರಿಣಾಮ ಬಳ್ಳಿಗಳು ಬಾಡುತ್ತಿದೆ. ಇಳುವರಿ ಕೂಡ ಕಡಿಮೆಯಾಗುವ ಸಾಧ್ಯತೆಯಿದೆ. -ವೀರೇಂದ್ರ ಕುಮಾರ್, ವಿಜ್ಞಾನಿ, ಕೆವಿಕೆ ಗೋಣಿಕೊಪ್ಪ*ಈ ಬಾರಿ ಮಳೆ ಕೊರತೆಯಿಂದಾಗಿ ಕಾಳು ಮೆಣಸು ಫಸಲು ಹೂವು ಅರಳುವುದು ವಿಳಂಬ ಆಗಲಿದೆ. ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ವಾಡಿಕೆ ಮಳೆಯಾಗುತ್ತಿಲ್ಲ. ಇದರಿಂದ ಕಾಳು ಮೆಣಸು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಾರರು ಸದಾ ಸಮಸ್ಯೆ ಎದುರಿಸುವಂತಾಗಿದೆ. -ವಿಶ್ವನಾಥ್, ಉಪಾಧ್ಯಕ್ಷ, ಕೊಡಗು ಬೆಳೆಗಾರರ ಒಕ್ಕೂಟ