ವಯೋನಿವೃತ್ತಿಯಾದ ಭದ್ರಾ ಮೇಲ್ದಂಡೆಯ ಕಾರ್ಯಪಾಲಕ ಎಂಜಿನಿಯರ್ ಬಾರಿಕರ ಚಂದ್ರಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಂತ್ರಜ್ಞಾನ ಮುಂದುವರಿದಷ್ಟು ಸವಾಲುಗಳು ಜಾಸ್ತಿ. ಇವುಗಳ ಸಮಚಿತ್ತದಿಂದ ನಿಭಾಯಿಸಿಕೊಂಡು ಹೋಗಬೇಕೆಂದು ಭದ್ರ ಮೇಲ್ದಂಡೆ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಬಾರಿಕರ ಚಂದ್ರಪ್ಪ ಹೇಳಿದರು.

ನಗರದ ಭದ್ರಾ ಮೇಲ್ಡಂಡೆ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಂಜಿನಿಯರ್‌ಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಎಂಜಿನಿಯರ್‌ಗಳಿಗೆ ಅನೇಕ ಸಮಸ್ಯೆ, ಸವಾಲುಗಳಿರುತ್ತವೆ. ನನ್ನ 32 ವರ್ಷಗಳ ಸೇವಾ ಅವಧಿಯಲ್ಲಿ ಮೇಲಾಧಿಕಾರಿಗಳ, ಸಹೋದೋಗ್ಯಿಗಳ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ 18 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಂಜಿನಿಯರಗಳು ವೃತ್ತಿಯಲ್ಲಿ ಕೆಲವೊಮ್ಮೆ ಕಷ್ಟ ಎದುರಿಸಬೇಕಾಗುತ್ತದೆ. ಕಲಿಯುವುದು ತುಂಬಾ ಇದೆ. ಇಳಕಲ್, ಅಜ್ಜಂಪುರ, ತುಂಗಭದ್ರಾದಲ್ಲಿ ಕೆಲಸ ಮಾಡಿದ್ದೇನೆ. ನೀರು ನಿರ್ವಹಣೆ ದೊಡ್ಡ ಸವಾಲಿನ ಕೆಲಸ. ಭದ್ರಾ ಯೋಜನೆಯಿಂದ ಹೊಳಲ್ಕೆರೆ ತಾಲೂಕಿನ 30 ಕೆರೆಗಳಿಗೆ ನೀರು ಬರುವುದಿದೆ. ಬಾಗಲಕೋಟೆಯಲ್ಲಿ ನಾನು ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದೆ. ದೇವರು ಅವಕಾಶ ಕೊಟ್ಟ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದೆ. 118 ವರ್ಷಗಳ ಇತಿಹಾಸವಿರುವ ಹಿರಿಯೂರಿನ ವಾಣಿವಿಲಾಸ ಸಾಗರದಿಂದ 30 ಸಾವಿರ ಎಕರೆಗೆ ನೀರು ಒದಗಿಸುತ್ತಿದ್ದೇವೆ. ಗಾಯತ್ರಿ ಜಲಾಶಯವೂ ಇದೆ. ಎಂಜಿನಿಯರ್‌ಗಳ ತಂತ್ರಜ್ಞಾನವನ್ನು ಮೀರಿಸುವ ರೀತಿಯಲ್ಲಿ ಈ ಡ್ಯಾಂ ಕಟ್ಟಲಾಗಿದೆ. ಉಳಿಸಿಕೊಳ್ಳುವುದು ಎಂಜಿನಿಯರ್‌ಗಳ ಕೆಲಸ. ಕೆನಾಲ್ ನೆಟ್‍ವರ್ಕ್ ಪೂರ್ ಇದೆ. ಅಷ್ಟೆ ಸವಾಲು ಕೂಡ ನಮ್ಮ ಮುಂದಿದೆ ಎಂದು ಹೇಳಿದರು.

ನಮ್ಮದು ಕೂಡು ಕುಟುಂಬ, ಕೃಷಿ ಜೀವನಕ್ಕೆ ಆಧಾರ. ಆಗ ಶಿಕ್ಷಣಕ್ಕೆ ಆದ್ಯತೆ ಕಮ್ಮಿಯಿತ್ತು. ಅಂತಹ ಕಷ್ಟದ ಕಾಲದಲ್ಲಿ ನಮ್ಮ ಸಹೋದರರು ನನ್ನ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ನಮ್ಮ ಕಾಲದ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಕುಟುಂಬದಲ್ಲಿ ಒಗ್ಗಟ್ಟಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರು ಎಲ್ಲರೂ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ನನ್ನ ಯಶಸ್ಸಿನ ಹಿಂದೆ ಮಡದಿಯ ಸಹಕಾರವಿದೆ ಎಂದು ಸ್ಮರಿಸಿದರು.

ಸಹಾಯಕ ಎಂಜಿನಿಯರ್ ಹರ್ಷ ಮಾತನಾಡಿ, 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಾರಿಕರ ಚಂದ್ರಪ್ಪನವರು ಸದಾ ನಗುಮುಗದಿಂದ ಇರುತ್ತಿದ್ದರು. ಸಿಬ್ಬಂದಿಯೊಂದಿಗೆ ಎಂದಿಗೂ ಕಟುವಾಗಿ ವರ್ತಿಸಲಿಲ್ಲ. ಎಂತಹ ಸಮಸ್ಯೆಗಳಿದ್ದರು ಸಮಾಧಾನದಿಂದ ಹೇಳಿ ಕೆಲಸ ತೆಗೆದುಕೊಳ್ಳುತ್ತಿದ್ದರು. ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.

ಎಂಜಿನಿಯರ್ ಪುಷ್ಪ ಮಾತನಾಡಿ, ಸರಳ, ಸಜ್ಜನಿಕೆ, ಶಾಂತ ಸ್ವಭಾವದವರಾಗಿದ್ದ ಬಾರಿಕರ ಚಂದ್ರಪ್ಪನವರು ಸಿಬ್ಬಂದಿಗಳನ್ನು ಸದಾ ಗೌರವದಿಂದ ಕಾಣುತ್ತಿದ್ದರು. ಅವರ ಕೈಕೆಳಗೆ ನಾವುಗಳು ಖುಷಿಯಿಂದ ಕೆಲಸ ಮಾಡುತ್ತಿದ್ದೆವು. ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು.

ಈ ವೇಳೆ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ, ತಾಂತ್ರಿಕ ಸಹಾಯಕ ಮನು ಹಾಗೂ ಬಾರಿಕರ ಚಂದ್ರಪ್ಪನವರ ಪತ್ನಿ ಶಾಂತಲ ವೇದಿಕೆಯಲ್ಲಿದ್ದರು. ಭದ್ರಾ ಮೇಲ್ದಂಡೆ ಯೋಜನೆಯ ಉಪ ವಿಭಾಗದ ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿಯವರು, ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಬಾರಿಕರ ಚಂದ್ರಪ್ಪನವರ ಕುಟುಂಬದವರು ಮತ್ತು ಅಭಿಮಾನಿಗಳು ಇದ್ದರು.