ಸಾರಾಂಶ
ಕನ್ನಡ ಕ್ರಿಯಾ ವೇದಿಕೆ ವಿದ್ಯಾರ್ಥಿ ಘಟಕ ಉದ್ಘಾಟನೆ, ರಾಜ್ಯೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ ಕೊಪ್ಪಳಆಯಾ ರಾಜ್ಯದ ಮಾತೃ ಭಾಷೆಯಲ್ಲಿಯೇ ಒಂದರಿಂದ ಹತ್ತನೆಯ ತರಗತಿಯವರಿಗೆ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಅಗತ್ಯವಿದ್ದು, ಈ ದಿಸೆಯಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಕನ್ನಡ ವಿಭಾಗ ಆಯೋಜನೆ ಮಾಡಿದ್ದ ಕನ್ನಡ ಕ್ರಿಯಾ ವೇದಿಕೆ ವಿದ್ಯಾರ್ಥಿ ಘಟಕ ಉದ್ಘಾಟನೆ ಮತ್ತು ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮಾತೃಭಾಷೆ ಶಿಕ್ಷಣ ಬಲಶಾಲಿಯಾದದ್ದು, ಅದರಲ್ಲೇ ಮಕ್ಕಳು ಕಲಿತರೆ ವಿಷಯ ಚೆನ್ನಾಗಿ ಅರ್ಥವಾಗುತ್ತದೆ. ಹಾಗಾಗಿ ಎಲ್ಲ ರಾಜ್ಯಗಳು ಈ ದಿಶೆಯಲ್ಲಿ ಆಲೋಚಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಮನಸ್ಸು ಕೊಟ್ಟು ಓದಬೇಕು. ಓದಿದ್ದು ಮನನವಾದರೆ ಅವರ ಭವಿಷ್ಯ ಚೆನ್ನಾಗಿ ಇರಬಲ್ಲದು.
ಕಲೆ, ಸಾಹಿತ್ಯ ಮತ್ತು ಸಂಗೀತ ಇಲ್ಲದೇ ಇರುವ ನಮ್ಮ ಮನಸ್ಸು ಜಡವಾಗಿರುತ್ತದೆ. ಸಾವಿತ್ರಿ ಬಾ ಪುಲೆಯವರು ದೇಶದಲ್ಲಿ ಮೊದಲು ಬಾರಿಗೆ ಮಹಿಳೆಯರಿಗೆ ಶಿಕ್ಷಣ ಕೊಟ್ಟಿದ್ದಾರೆ. ಈ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಸುಲಭವಾಗಿ ಶಿಕ್ಷಣ ದೊರೆತಿಲ್ಲ. ಭಾರತದ ಎಲ್ಲ ಭಾಷೆಗಳು ನಶಿಸುತ್ತಿವೆ. ಜಾಗತಿಕರಣದಿಂದ ಇಂಗ್ಲಿಷ್ ಭಾಷೆಗೆ ಹೆಚ್ಚು ಮನ್ನಣೆ ಬಂದಿದೆ. ಭಾರತದ ಎಲ್ಲ ಭಾಷೆಗಳು ಇಂಗ್ಲಿಷ್ನಿಂದ ಕಷ್ಟ ಅನುಭವಿಸುತ್ತವೆ. ಕನ್ನಡ ಭಾಷೆ ಬಹಳ ಪ್ರಾಚೀನವಾದ ಭಾಷೆ. ಕನ್ನಡ ವೈಚಾರಿಕತೆ ಭಾಷೆ, ಕನ್ನಡ ವಿಜ್ಞಾನ ಭಾಷೆ. ಇದು ದಕ್ಷಿಣ ಭಾರತದ ದ್ರಾವಿಡ್ ಭಾಷೆಗಳಲ್ಲಿ ಒಂದು. ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ನಾವೆಲ್ಲರೂ ದೇಶೀ ಭಾಷೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.ಶಿಕ್ಷಣ ಪ್ರೇಮಿ ಬಿ.ಜಿ. ಕರಿಗಾರ ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ ಇತರ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರು ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಮಾತನಾಡಿದರು.ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಸುಮಿತ್ರ, ಶುಭ, ಶಿವಪ್ರಸಾದ್ ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ, ವಿರೂಪಾಕ್ಷಪ್ಪ, ಮುತ್ತಾಳ ಹಾಗೂ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾವೇರಿ, ನೇತ್ರಾ ಮತ್ತು ಸಬಿಹಾ ಪ್ರಾರ್ಥಿಸಿದರು. ಗೀತಾ ಭಜಂತ್ರಿ ಸ್ವಾಗತಿಸಿದರು. ಗಂಗಮ್ಮ ವಂದಿಸಿ, ಭೂಮಿಕಾ ಹೂಗಾರ ನಿರೂಪಿಸಿದರು.