ಜನಮನ ಸೆಳೆದ ನಗರಸಭೆ ಜನಸ್ಪಂದನ

| Published : Nov 09 2024, 01:15 AM IST / Updated: Nov 09 2024, 01:16 AM IST

ಸಾರಾಂಶ

The Municipal Assembly that attracted attention was Janaspandan

- ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ನಾಗರಿಕರ ಕುಂದುಕೊರತೆ ಜನಸ್ಪಂದನ ಸಭೆ । ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸಿದ ಅಧ್ಯಕ್ಷರು

--------

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರಸಭೆಗೆ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ 73 ಲಕ್ಷ ರು.ಗಳ ಕರ ವಸೂಲಿ ಮೂಲಕ ನಗರಸಭೆಗೆ ಆದಾಯ ಹಾಗೂ ಹದಗೆಟ್ಟ ರಸ್ತೆಗಳ ರಿಪೇರಿ ಸೇರಿದಂತೆ ''''ನಗರಸಭೆ ನಡೆ, ವಾರ್ಡ್‌ ಕಡೆ'''' ಅಭಿಯಾನದ ಮೂಲಕ ಚರಂಡಿ ಸ್ವಚ್ಛತೆ, ಕುಡಿಯುವ ನೀರು, ಮೂಲ ಸೌಕರ್ಯಗಳ ವಿಚಾರವಾಗಿ ಮುತುವರ್ಜಿ ವಹಿಸುವಲ್ಲಿ ಲಲಿತಾ ಅನಪುರ, ಜನಸ್ಪಂದನ ಮೂಲಕ ಜನಮನ ಸೆಳೆದರುನಾಗರಿಕರ ಕುಂದುಕೊರತೆಗಳ ಆಲಿಸಲು, ಮೇ 8 ರಿಂದ ''''ಜನಸ್ಪಂದನ'''' ಹಮ್ಮಿಕೊಳ್ಳುವುದಾಗಿ ''''ಕನ್ನಡಪ್ರಭ'''' ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದ ಅವರು, ಈ ಕಾರ್ಯಕ್ರಮದ ಆಯೋಜನೆ ಮೂಲಕ ನೂರಾರು ಜನರ ಅಹವಾಲುಗಳನ್ನು ಆಲಿಸಿ, ಪರಿಹಾರಕ್ಕೆ ಮುಂದಾಗಿದ್ದಾರೆ.

ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ನೇತೃತ್ವದಲ್ಲಿ ನಿಗದಿಯಂತೆ ಬೆಳಗ್ಗೆ 11ಕ್ಕೆ ಜನಸ್ಪಂದನ ಸಭೆ ಆರಂಭಗೊಂಡಿತು. ಯಾದಗಿರಿ ನಗರದ 31 ವಾರ್ಡ್‌ಗಳಿಂದ ನೂರಾರು ಜನರು ಆಗಮಿಸಿ, ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್, ಗುಣಮಟ್ಟದ ರಸ್ತೆಗಳು, ವಿಳಂಬವಾಗುತ್ತಿರುವ ನಗರಸಭೆಯಲ್ಲಿನ ಸಾರ್ವಜನಿಕ ಕೆಲಸಗಳು ಶೀಘ್ರ ಆಗಬೇಕೆಂಬ ಬೇಡಿಕೆಗಳು ಸೇರಿದಂತೆಯೇ ವಿವಿಧ ಹತ್ತಾರು ಸಮಸ್ಯೆಗಳನ್ನು ಹೊತ್ತು ತಂದ ಜನರ ಅಹವಾಲಗಳನ್ನು ಸ್ವೀಕರಿಸಿದ ಅವರು, ತಕ್ಷಣದಲ್ಲೇ ಬಗೆಹರಿಯಬಹುದಾದ ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು.

ನಗರದ ಅನೇಕ ವಾರ್ಡ್‌ಗಳಲ್ಲಿ ಇಂದಿಗೂ ಶುದ್ಧ ಕುಡಿವ ನೀರು ಸರಬರಾಜು ಆಗುತ್ತಿಲ್ಲ, ಕಸ ವಿಲವಾರಿ ನಿತ್ಯವು ಕೆಲವಡೆ ನಡೆಯುತ್ತಿಲ್ಲ, ವಿದ್ಯುತ್ ಸರಬರಾಜಿನಲ್ಲಿ ಅನೇಕ ತೊಂದರೆಯಾಗುತ್ತಿದೆ. ನಗರದ ಒಳರಸ್ತೆಗಳು ಹದಗೆಟ್ಟು ಹೋಗಿವೆ. ಬೀದಿನಾಯಿ ಮತ್ತು ಬೀದಿ ದನಗಳ ಹಾವಳಿ ಹೆಚ್ಚಾಗಿವೆ. ಅನೇಕ ಬಡಾವಣೆಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ವಿಪರಿತವಿದೆ. ಹೀಗೆ ಸಮಸ್ಯೆಗಳ ಆಗರವೇ ಹೊತ್ತ ತಂದ ಸಾರ್ವಜನಿಕರು, ಅಧ್ಯಕ್ಷರಿಗೆ ಈ ಎಲ್ಲ ಬೇಡಿಕೆ ಈಡೇರಿಸುವಂತೆ ಜನರು ಮನವಿ ಮಾಡಿದರು.

ತರಕಾರಿ ವ್ಯಾಪಾರಿಗಳು ತಮಗೆ ಆಗುತ್ತಿರುವ ಮಾರಾಟ ಸಮಸ್ಯೆ ವಿವರಿಸಿ, ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ತಮ್ಮನ್ನು ಕೆಲಸ ಮಾಡಲು ಬಿಡದೆ ತೊಂದರೆ ನೀಡಲಾಗುತ್ತಿದೆ ಎಂದು ಬೈಲು ಪತ್ತಾರ ಸಮಾಜದವರು ಹೇಳಿದಾಗ ಕೂಡಲೇ, ಅವರಿಗಿರುವ ಸಮಸ್ಯೆ ಕೇಳಿ ಬಗೆಹರಿಸುವಂತೆ ಪೌರಾಯುಕ್ತರಿಗೆ ಅಧ್ಯಕ್ಷರು ಸೂಚಿಸಿದರು.

ನಗರದ ಅನೇಕ ಕಡೆ ಜಾಗ ಒತ್ತುವರಿಯಾದ ಬಗ್ಗೆ ಅನೇಕರು ಅರ್ಜಿ ಸಲ್ಲಿಸಿದರು. ಅವುಗಳನ್ನು ಪರಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.‌ ಕೆಟ್ಟಿರುವ ಬೋರ್‌ವೆಲ್‌ ದುರಸ್ತಿ ಮಾಡಿಸುವಂತೆ ಅನೇಕರು ಗಮನಕ್ಕೆ ತಂದಾಗ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆಟ್ಟಿರುವ ಬೋರ್‌ವೆಲ್‌ ಪಟ್ಟಿ ಮಾಡಿ ಕೂಡಲೇ ದುರಸ್ತಿ ಮಾಡಿಸುವಂತೆ ಹೇಳಿದರು.

ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಕಲುಷಿತ ನೀರು ರಸ್ತೆಗೆ ಹರಿದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಮಲ್ಲಮ್ಮಳ ಮನವಿಗೆ ನಿತ್ಯವೂ ಶುಚಿ ಕೆಲಸ ಮಾಡಬೇಕೆಂದು ಅಧ್ಯಕ್ಷರು ಹೇಳಿದರು.

ಜನಸ್ಪಂದನ ಸಭೆಯಲ್ಲಿ ಉಪಾಧ್ಯಕ್ಷೆ ರುಕಿಯಾ ಬೇಗಂ, ಸದಸ್ಯರಾದ ಹಣಮಂತ ಇಟಗಿ, ಮಂಜುನಾಥ ದಾಸನಕೇರಿ, ಇಸ್ಮಾಯಿಲ್, ಪೌರಾಯುಕ್ತ ರಜನಿಕಾಂತ ಶೃಂಗೇರಿ ಇದ್ದರು.

.......ಕೋಟ್‌.........

ಒಟ್ಟು 35 ದೂರುಗಳು ಬಂದಿದ್ದು, 300ಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗವಹಿಸಿ ಮನವಿ ಸಲ್ಲಿಸಿದ್ದಾರೆ. ಜನಸ್ಪಂದನದಲ್ಲಿ ನಗರಸಭೆ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರ ಸಂಪೂರ್ಣವಿದೆ. ಜನರೂ ನಗರ ಅಭಿವೃದ್ಧಿಗೆ ಸಹಕರಿಸಬೇಕು.

ಕು. ಲಲಿತಾ ಅನಪುರ, ಅಧ್ಯಕ್ಷರು, ನಗರಸಭೆ ಯಾದಗಿರಿ.

------

ಫೋಟೊ: 8ವೈಡಿಆರ್‌13

ಯಾದಗಿರಿ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರು ನಾಗರಿಕರ ಕುಂದುಕೊರತೆಗಳ ಅಹವಾಲುಗಳ ಆಲಿಸುವ ಜನಸ್ಪಂದನ ಸಭೆ ನಡೆಸಿದರು. ಮಹಿಳೆಯೊಬ್ಬರು ಅವರ ಬಡಾವಣೆಯಲ್ಲಿನ ದೂರುಗಳನ್ನು ಸಲ್ಲಿಸಿದರು.

-----

ಫೋಟೊ:8ವೈಡಿಆರ್‌14 : ಯಾದಗಿರಿ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರು ನಾಗರಿಕರ ಕುಂದುಕೊರತೆಗಳ ಅಹವಾಲುಗಳ ಆಲಿಸುವ ಜನಸ್ಪಂದನ ಸಭೆ ನಡೆಸಿದರು.