ಮಕ್ಕಳ ಪ್ರತಿಭೆ ಗುರುತಿಸಿ: ರವಿರಾಜ ಅಂಕೋಲೆಕರ್

| Published : Nov 09 2024, 01:15 AM IST

ಸಾರಾಂಶ

ಮಕ್ಕಳು ಚಿಕ್ಕವರಾಗಿದ್ದ ಸಂದರ್ಭದಲ್ಲಿಯೇ ಪೋಷಕರು ಮತ್ತು ಶಿಕ್ಷಕರು ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಮೂಲಕ ಅವರಲ್ಲಿನ ಕೌಶಲ್ಯ ಮತ್ತು ಅಭಿರುಚಿಗೆ ತಕ್ಕಂತೆ ವೇದಿಕೆ ಕಲ್ಪಿಸಿದಲ್ಲಿ, ಅವರು ಮುಂದಿನ ದಿನಗಳಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವ್ಯಕ್ತಿಗಳಾಗಿ ಹೊರಹೊಮ್ಮುವರು.

ಕಾರವಾರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ತಿಳಿಸಿದರು.ಶುಕ್ರವಾರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಚಿಕ್ಕವರಾಗಿದ್ದ ಸಂದರ್ಭದಲ್ಲಿಯೇ ಪೋಷಕರು ಮತ್ತು ಶಿಕ್ಷಕರು ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಮೂಲಕ ಅವರಲ್ಲಿನ ಕೌಶಲ್ಯ ಮತ್ತು ಅಭಿರುಚಿಗೆ ತಕ್ಕಂತೆ ವೇದಿಕೆ ಕಲ್ಪಿಸಿದಲ್ಲಿ, ಅವರು ಮುಂದಿನ ದಿನಗಳಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವ್ಯಕ್ತಿಗಳಾಗಿ ಹೊರಹೊಮ್ಮುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಲಿದ್ದಾರೆ ಎಂದರು.ಜಿಪಂ ಉಪ ಕಾರ್ಯದರ್ಶಿ(ಆಡಳಿತ) ನಾಗೇಶ ರಾಯ್ಕರ್, ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಿಕ್ಕ ಅವಕಾಶವನ್ನು ಎಲ್ಲ ವಿದ್ಯಾರ್ಥಿಗಳು ಬಳಸಿಕೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವಂತೆ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್, ಹಿರಿಯ ಸಹಾಯಕ ನಿರ್ದೇಶಕಿ ಡಾ. ಲಕ್ಷ್ಮೀದೇವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ನಿರ್ಣಾಯಕರಾದ ಕೆ. ಜಾನ್ ಬೆಲ್, ಅನೀಲ್ ಮಡಿವಾಳ, ವಿನುತಾ ಪಡ್ನೇಕರ, ಕೃಷ್ಣಾನಂದ ಗುರವ ಮತ್ತಿತರರು ಇದ್ದರು.ಗಿರಿಜಾ ವೈದ್ಯ ಪ್ರಾರ್ಥಿಸಿದರು. ಕಲ್ಪನಾ ರಶ್ಮಿ ಕಲಾಲೋಕ ನೃತ್ಯ ಶಾಲೆಯ ಪ್ರಾಂಶುಪಾಲ ಸೂರ್ಯಪ್ರಕಾಶ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸೊಸೈಟಿ ಇವರ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಿರಸಿ ಜಿಲ್ಲಾ ಹೋರಾಟ ಸಮಿತಿ ಇಬ್ಭಾಗವಾಗಿಲ್ಲ: ಉಪೇಂದ್ರ

ಶಿರಸಿ: ಶಿರಸಿ ಜಿಲ್ಲಾ ಹೋರಾಟದ ಜವಾಬ್ದಾರಿಯನ್ನು ನಾನು ಯಾರಿಗೂ ಹಸ್ತಾಂತರಿಸಿಲ್ಲ. ಹೋರಾಟ ಸಮಿತಿ ಭದ್ರವಾಗಿದ್ದು, ನನ್ನ ಅಧ್ಯಕ್ಷತೆಯಲ್ಲಿಯೇ ಹೋರಾಟ ಮುಂದುವರಿಯುತ್ತದೆ ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆಯಾಗಿ ಹಲವು ಸಮಿತಿಗಳು ರಚನೆಯಾಗಿರುವುದು ಗಮನಕ್ಕೆ ಬಂದಿದೆ. ಆದರೆ ಈಗಿರುವ ಶಿರಸಿ ಜಿಲ್ಲಾ ಹೋರಾಟ ಇಬ್ಭಾಗವಾಗಿಲ್ಲ. ನನ್ನ ಅಧ್ಯಕ್ಷತೆಯಲ್ಲೇ ಮುಂದಿನ ದಿನಗಳಲ್ಲಿ ಹೋರಾಟ ನಡೆಯಲಿದೆ ಎಂದರು.ಅನಂತಮೂರ್ತಿ ಹೆಗಡೆಗೆ ಯಾವುದೇ ಉಸ್ತುವಾರಿಯನ್ನು ಕೊಟ್ಟಿಲ್ಲ. ಅವರು ಕಟ್ಟಿಕೊಂಡಿರುವ ಸಮಿತಿಯು ಹೆಚ್ಚಿನ ಹೋರಾಟ ಮಾಡುವುದಾದರೆ ನಾವು ಸಹಕಾರ ನೀಡುತ್ತೇವೆ. ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲಾ ಹೋರಾಟ ಸಮಿತಿ ಬಹಿರಂಗವಾಗಿ ಪ್ರತಿಭಟನೆ ಹೋರಾಟಗಳನ್ನು ಮಾಡದಿದ್ದರೂ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ಇನ್ನು ಮುಂದೆಯೂ ಹೋರಾಟ ಮಾಡುತ್ತೇವೆ. ಜಿಲ್ಲೆಯಾಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದರು.

ಘಟ್ಟದ ಮೇಲಿನ ಜನಪ್ರತಿನಿಧಿಗಳು ಶಿರಸಿ ಜಿಲ್ಲೆಗಾಗಿ ವಿಧಾನಸಭೆಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತಿದರೆ ಶಿರಸಿ ಜಿಲ್ಲೆಯಾಗುತ್ತದೆ. ಆದರೆ ಅವರಿಂದ ಆ ಕೆಲಸ ಆಗುತ್ತಿಲ್ಲ. ಇದೇ ಕಾರಣದಿಂದ ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆ ಬಾಕಿ ಉಳಿದಿದೆ ಎಂದರು‌‌.ಅನಂತ ಮೂರ್ತಿ ಹೆಗಡೆಯವರು ಕಟ್ಟಿಕೊಂಡ ಸಮಿತಿಗೆ ನಮ್ಮ ಹೋರಾಟ ಸಮಿತಿಯಲ್ಲಿರಿರುವವರೂ ಹೋಗಿದ್ದಾರೆ. ಹೋಗುವವರು ಹೋಗಲಿ ಬರುವವರು ಬರುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಆದರ್ಶ ನಾಯ್ಕ, ರೋಹಿತ್ ನಾಯ್ಕ ಇದ್ದರು.