ಸಾರಾಂಶ
ಹಾವೇರಿ (ಶಿಗ್ಗಾಂವಿ): ಭಾರತ ದೇಶ ಹಾಗೂ ಹಿಂದೂ ಧರ್ಮ ಸುರಕ್ಷತೆಗಾಗಿ ನಾವೆಲ್ಲ ಜಾತಿ, ಮತ ಎನ್ನದೇ ಹಿಂದೂಗಳೆಲ್ಲ ಒಟ್ಟಾಗಿ ಇರಬೇಕು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಮತ ನೀಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಶಿಗ್ಗಾಂವಿ ತಾಲೂಕಿನ ಎನ್.ಎಂ. ತಡಸ ಗ್ರಾಮದಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿ ಮಾತನಾಡಿ, ರಾಜ್ಯ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದು ನೋಡಿದ್ದೀರಿ, ಲೋಕಸಭೆ ಚುನಾವಣೆಯಲ್ಲಿ ಕೇವಲ ೫೦-೬೦ ಸೀಟು ಕಡಿಮೆ ಆದ ಕಾರಣ ಒಂದು ಕಾಯ್ದೆ ತಿದ್ದುಪಡಿ ಮಾಡಲು ಕಷ್ಟ ಆಗಿದೆ.
ನಾವು ಅವರನ್ನು ಅಣ್ಣ, ತಮ್ಮಂದಿರು ಎಂದು ತಿಳಿದುಕೊಂಡಿದ್ದೇವೆ. ಆದರೆ, ಅವರ ಧರ್ಮದಲ್ಲಿ ಬೇರೆ ಧರ್ಮದವರನ್ನು ಅಣ್ಣ, ತಮ್ಮ ಎನ್ನುವ ಮಾತೇ ಇಲ್ಲ. ೨೦೧೯ರಲ್ಲಿ ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ನಮ್ಮ ದೇಶದಲ್ಲಿ ಎಷ್ಟು ವಕ್ಫ್ ಆಸ್ತಿ ಇದೆ ಎಂದು ಕೇಳಿದ್ದರು. ಆಗ ಐದುಲಕ್ಷ ಎಕರೆ ಎಂದು ಹೇಳಿದ್ದರು. ಈಗ ೯.೫ ಲಕ್ಷ ಎಕರೆ ಎನ್ನುತ್ತಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಂಸದರ ಒತ್ತಡದಿಂದ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಲು ಸಂಸತ್ತಿನ ಜಂಟಿ ಸದನ ಸಮಿತಿ ರಚನೆ ಮಾಡಿದ್ದಾರೆ.
ಕಾಂಗ್ರೆಸ್‌ನವರು ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಶಿಗ್ಗಾಂವಿ ಸವಣೂರಿನಲ್ಲಿ ನವಾಬರಿದ್ದರು, ನಿಮ್ಮೆಲ್ಲ ಆಸ್ತಿ ವಕ್ಫ್ ಪಾಲಾಗುತ್ತದೆ. ನಿಮ್ಮಲ್ಲಿನ ಜಾತಿ ಒಳ ಪಂಗಡ ಬಿಟ್ಟು ಒಗ್ಗಟ್ಟಾಗಿ, ನಮ್ಮ ಪಂಚಮಸಾಲಿ ಸಮುದಾಯಕ್ಕೆ ಬೊಮ್ಮಾಯಿ ೨ಡಿ ಮೀಸಲಾತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅದನ್ನು ಜಾರಿ ಮಾಡುತ್ತಿಲ್ಲ. ಮೀಸಲಾತಿ ನೀಡುವಂತೆ ಡಿಸೆಂಬರ್‌ನಲ್ಲಿ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ಸಮೇತ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ ಎಂದು ಎಚ್ಚರಿಸಿದರು.
ಲೋಕಸಭೆ ಚುನಾವಣೆಯಲ್ಲಿ 300 ಸ್ಥಾನ ಕೊಟ್ಟಿದ್ದರೆ ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದಂತೆ, ವಕ್ಫ್ ಕಾಯಿದೆ ತಿದ್ದುಪಡಿ ಮಾಡಲು ಅನುಕೂಲವಾಗುತ್ತಿತ್ತು. ೩೭೦ ರದ್ದತಿಯಿಂದ ಜಮ್ಮು ಕಾಶ್ಮೀರದಲ್ಲಿ ಮೀಸಲಾತಿ ಸಿಕ್ಕಿದೆ. ಐವರು ದಲಿತರು ವಿಧಾನಸಭೆ ಪ್ರವೇಶಿಸುವಂತಾಗಿದೆ. ಅಲ್ಲಿ ಗ್ರಾಮ ಪಂಚಾಯಿತಿಯಿಂದ ಎಲ್ಲ ಹಂತದಲ್ಲೂ ದಲಿತರಿಗೆ ಮೀಸಲಾತಿ ದೊರೆಯಲಿದೆ ಎಂದು ಹೇಳಿದರು.
ಸಿದ್ದು ಮುಸ್ಲಿಮರಾಗಿ ಹುಟ್ಟುತ್ತಾರಂತೆ: ಹಾಲುಮತದ ಸಮುದಾಯ ಉತ್ತರ ಕರ್ನಾಟಕದಲ್ಲಿ ಶ್ರೇಷ್ಠತೆ ಹೊಂದಿದೆ. ನಾವು ಯಾವುದೇ ಶುಭ ಕಾರ್ಯ ಮಾಡಲು ಹಾಲುಮತದವರಿಂದ ಪೂಜೆ ಮಾಡಿಸುತ್ತೇವೆ. ಅಂತಹ ಶ್ರೇಷ್ಠ ಸಮುದಾಯದಲ್ಲಿ ಹುಟ್ಟಿದ ಸಿದ್ದರಾಮಯ್ಯ ಆ ಸಮುದಾಯಕ್ಕೆ ಕಳಂಕ ತರುತ್ತಿದ್ದಾರೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹಾಜರಿದ್ದರು.