ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಜಿಬಿಎ ವ್ಯಾಪ್ತಿಯ ಸಾರ್ವಜನಿಕ ಮೂಲಸೌಕರ್ಯಗಳ ಸಮಸ್ಯೆಗಳ ಕುರಿತು ಐದು ನಗರ ಪಾಲಿಕೆಗಳು ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಶೇ.50ಕ್ಕಿಂತ ಹೆಚ್ಚು ದೂರುಗಳು ಗುಂಡಿ ಸೇರಿದಂತೆ ರಸ್ತೆ ನಿರ್ವಹಣೆ ಸಂಬಂಧಿಸಿದಂತೆ ಸಲ್ಲಿಕೆಯಾಗುತ್ತಿವೆ.

ಇದು ರಸ್ತೆಗಳ ನಿರ್ವಹಣೆಯಲ್ಲಿ ಪಾಲಿಕೆಗಳು ವಿಫಲವಾಗುತ್ತಿವೆ ಎಂಬುದರ ಸೂಚಕವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಏಕೆಂದರೆ, ನಗರದ ಅನೇಕ ಮುಖ್ಯ ರಸ್ತೆಗಳು, ಅಡ್ಡ ರಸ್ತೆಗಳಲ್ಲಿ ಬರೀ ಗುಂಡಿಗಳೇ ಕಾಣಿಸುತ್ತವೆ. ಸ್ವಯಂ ಪ್ರೇರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಯತ್ನವನ್ನು ಜಿಬಿಎ ಮಾಡುತ್ತಿಲ್ಲ. ಸ್ಥಳೀಯರು ದೂರು ನೀಡಿದಾಗ ಮಾತ್ರ ಗುಂಡಿ ಮುಚ್ಚಲಾಗುತ್ತದೆ. ಅದು ಕೂಡ ಅವೈಜ್ಞಾನಿಕವಾಗಿರುವ ಕಾರಣ ವಾಹನಗಳ ಸಂಚಾರದಿಂದ ಕೆಲವೇ ದಿನಗಳಲ್ಲಿ ಗುಂಡಿಗಳು ಮತ್ತೆ ಬಾಯ್ಬಿಡುತ್ತಿವೆ ಎಂಬ ದೂರುಗಳಿವೆ.

ಉತ್ತರ ಪಾಲಿಕೆ:


ಕಳೆದ ಆರು ತಿಂಗಳಲ್ಲಿ ಉತ್ತರ ನಗರ ಪಾಲಿಕೆಯಿಂದ 28 ಫೋನ್‌ ಇನ್ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 1,267 ಕರೆಗಳನ್ನು ಸ್ವೀಕರಿಸಲಾಗಿದ್ದು, 1,626 ಅಹವಾಲುಗಳು ಸಲ್ಲಿಕೆಯಾಗಿವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ದೂರುಗಳು ರಸ್ತೆ ಗುಂಡಿಗಳದ್ದಾಗಿವೆ. ಉಳಿದ ಐದು ಪಾಲಿಕೆಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಸರಾಸರಿ ಒಂದೂವರೆ ಸಾವಿರ ಅಹವಾಲುಗಳಲ್ಲಿ ಅರ್ಧಕ್ಕಿಂತ ಹೆಚ್ಚು ದೂರುಗಳು ರಸ್ತೆ ಗುಂಡಿ, ನಿರ್ವಹಣೆ ಸಂಬಂಧಿಸಿದಂತೆ ಸಲ್ಲಿಕೆಯಾಗಿವೆ.

ರಸ್ತೆಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ:

ಏ.3ರಂದು ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ 63 ದೂರುಗಳಲ್ಲಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆಯೇ 29 ದೂರುಗಳಿವೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು, ಆದ್ಯತೆ ಆಧಾರದಲ್ಲಿ ಕೆಲಸಗಳನ್ನು ವೇಗಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವಂತೆ ಉತ್ತರ ನಗರ ಪಾಲಿಕೆ ಆಯುಕ್ತ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಐಐಎಂಬಿ ಬಳಿ ರಸ್ತೆ ಅದ್ವಾನ, ಧೂಳುಮಯ:

ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಐಐಎಂಬಿ ಎದುರು ಮೆಟ್ರೋ ನಿಲ್ದಾಣದ ಬಳಿಯ ರಸ್ತೆ ಸಂಪೂರ್ಣ ಹಾಳಾಗಿದೆ. ಧೂಳು ತುಂಬಿದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪರದಾಡುತ್ತಿವೆ. ಈ ವಿಡಿಯೋವನ್ನು ದಿ ಸ್ಟ್ರೀಟ್ ಫಿಕ್ಸರ್ಸ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ.

ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ಹಾಗೂ ದೊಡ್ಡ ಬಜೆಟ್ ಇರುವ ಪಾಲಿಕೆಯಿರುವ ಶ್ರೀಮಂತ ನಗರವಾಗಿರುವ ಬೆಂಗಳೂರಿನ ಬಹುತೇಕ ಕಡೆ ಉತ್ತಮ ರಸ್ತೆಗಳು ಕಾಣಿಸುವುದಿಲ್ಲ. ಅದರಲ್ಲೂ ಈ ರಸ್ತೆಯಲ್ಲಿ ಏಳುವ ಧೂಳು ಮರುಭೂಮಿಯ ಬಿರುಗಾಳಿಯಂತಿರುತ್ತದೆ. ಗುಂಡಿಗಳು ಚಂದ್ರನ ಮೇಲಿನ ಕುಳಿಗಳಂತಿವೆ. ಒಂದು ವೇಳೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದರೂ ಎಷ್ಟು ವಾರಗಳವರೆಗೆ ಕಾಮಗಾರಿ ನಡೆಸುತ್ತಾರೆ? ಕಳೆದ 15 ತಿಂಗಳಿಂದ ರಸ್ತೆ ದುಸ್ಥಿತಿಯಲ್ಲಿದೆ. ಇದು ಹಗಲು ರಾತ್ರಿ ದುಡಿಯುವ ಐಟಿ ಮತ್ತು ಇತರ ಕ್ಷೇತ್ರಗಳ ಉದ್ಯೋಗಿಗಳಿಗೆ ಮಾಡುವ ಅವಮಾನ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ ಟಿಕೆಟ್‌ಗಾಗಿ ಸರತಿ ಸಾಲಲ್ಲಿ ಕಾಯುವ ಜನಪ್ರತಿನಿಧಿಗಳಿಗೆ ಇಂತಹ ಸಮಸ್ಯೆಗಳು ಕಾಣುವುದಿಲ್ಲವೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.