ಸಾರಾಂಶ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿ ಕಲಹದಲ್ಲಿ ಸಂಬಂಧಿಯನ್ನೇ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಯಲ್ಲಿ ಮಂಗಳವಾರ ತೀರ್ಪು ನೀಡಿದೆ.
ದಾವಣಗೆರೆ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿ ಕಲಹದಲ್ಲಿ ಸಂಬಂಧಿಯನ್ನೇ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ದಾವಣಗೆರೆ ತಾಲೂಕಿನ ಗಿರಿಯಾಪುರದ ರುದ್ರೇಶ (28) ಕೊಲೆ ಅಪರಾಧಿ. ಗ್ರಾಮದ ಪರಶುರಾಮ ಹಾಗೂ ತಿಪ್ಪಣ್ಣ ಎಂಬ ಸಹೋದರರ ಮಧ್ಯೆ ಒಂದೂವರೆ ದಶಕದಿಂದ ಜಾಗದ ವಿಚಾರಕ್ಕೆ ಆಗಾಗ ಗಲಾಟೆ ಆಗುತ್ತಿತ್ತು. ಪರಶುರಾಮ 2016ರ ಆ.13ರಂದು ಹದಡಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪೂಜೆಗೆ ಹೋಗಿ ಬೈಕ್‌ನಲ್ಲಿ ಆರನೇಕಲ್ಲು ಗ್ರಾಮದ ಬಳಿ ಬರುತ್ತಿದ್ದರು. ಆಗ ಆರೋಪಿಗಳಾದ ತಿಪ್ಪಣ್ಣ ಹಾಗೂ ಆತನ ಮಗ ರುದ್ರೇಶ ಅಕ್ರಮ ಗುಂಪು ಕಟ್ಟಿಕೊಂಡು, ಕಾರಿನಲ್ಲಿ ಹಿಂದಿನಿಂದ ಬಂದು ಪರಶುರಾಮನ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಪರಶುರಾಮನ ಕುತ್ತಿಗೆ, ಕೈ-ಕಾಲುಗಳಿಗೆ ಆರೋಪಿ ರುದ್ರೇಶ ಮಚ್ಚಿನಿಂದ ಹೊಡೆದು, ಕೊಲೆ ಮಾಡಿದ್ದನು.ಪರಶುರಾಮನ ಪತ್ನಿ ಕರಿಬಸಮ್ಮ ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ಮಂಜುನಾಥ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ವಿಚಾರಣೆ ನಡೆಸಿ, ತೀರ್ಪು ನೀಡಿದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಕುಮಾರ ವಾದ ಮಂಡಿಸಿದ್ದರು.
- - -(-ಸಾಂದರ್ಭಿಕ ಚಿತ್ರ)