ಚಳ್ಳಕೆರೆ ನಗರದ ಎಚ್‌ಪಿಪಿಸಿ ಕಾಲೇಜು ಮೈದಾನಕ್ಕೆ ಡಿ.ಸುಧಾಕರ್ ಕ್ರೀಡಾಂಗಣ ಎಂಬುದಾಗಿ ಹೆಸರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಎಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜು ಮೈದಾನಕ್ಕೆ ಡಿ.ಸುಧಾಕರ್ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗಿದೆ.ಈ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿರುವು ದರಿಂದ ಈ ಹೆಸರು ಶಾಶ್ವತವಾಗಿ ಉಳಿಯಲಿದೆ. ಸರ್ಕಾರದ ಅನುದಾನದ ಜೊತೆಗೆ ಸ್ವಂತಕ್ಕೆ ಹಣ ಖರ್ಚು ಮಾಡಿದವರ ಹೆಸರನ್ನು ಇಟ್ಟಿದ್ದಾರೆ. 2004 ರಿಂದ 2008ರ ಅವಧಿಯಲ್ಲಿ ಅಂದಿನ ಪುರಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಅಂದಿನಿಂದ ಇಲ್ಲಿ ಐಷರಾಮಿ ವಿವಾಹಗಳು ನೆರವೇರಿವೆ. ಸ್ವತಃ ಡಿ.ಸುಧಾಕರ್ ತನ್ನ ಮಗಳ ವಿವಾಹವನ್ನು ಇದೇ ಕ್ರೀಡಾಂಗಣದಲ್ಲಿ ನೆರವೇರಿಸಿದ್ದರು. ಉಳಿದಂತೆ 2008ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ತಿಪ್ಪೇಸ್ವಾಮಿ ಅವರ ಮಗಳ ವಿವಾಹವನ್ನು ಇದೇ ಕ್ರೀಡಾಂಗಣದಲ್ಲಿ ನೆರವೇರಿಸಿದ್ದರು. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂದು ಹೋಗಿದ್ದರು. ಈಚೆಗೆ ಶಾಸಕ ಟಿ.ರಘುಮೂರ್ತಿ ಅವರ ಪುತ್ರಿಯ ವಿವಾಹವೂ ನೆರವೇರಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಸಚಿವರು ಶಾಸಕರು ಬಂದು ಹೋಗಿದ್ದರು. ಸುಧಾಕರ್ ನೆನಪಾಗಿ ಹೋದ ನಂತರವೂ ಚಳ್ಳಕೆರೆಯ ಎಚ್‌ಪಿಪಿಸಿ ಕಾಲೇಜಿನ ಸುಧಾಕರ್ ಕ್ರೀಡಾಂಗಣ ಶಾಶ್ವತವಾಗಿ ಉಳಿಯಲಿದೆ.*ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ: ಶೈಕ್ಷಣಿಕವಾಗಿ ಏನಾದರೂ ಮಾಡಬೇಕು. ಚಳ್ಳಕೆರೆಯಂತಹ ಹಿಂದುಳಿದ ತಾಲೂಕಿನ ಜನರಿಗೆ ಶಿಕ್ಷಣ ಕೊಡಬೇಕು ಎಂಬ ಮಹತ್ವಾಕಾಂಕ್ಷಿಯಾಗಿದ್ದ ಸುಧಾಕರ್ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಶಿಕ್ಷಣ ಪ್ರೇಮಿಯಾಗಿಯೂ ಖ್ಯಾತಿ ಗಳಿಸಿದ್ದರು. ನಗರದ ಗೊರ್ಲಕಟ್ಟೆ ರಸ್ತೆಯಲ್ಲಿ ಬೃಹತ್ ಕಟ್ಟಡ ನಿರ್ಮಿಸಿದ್ದ ಇವರು ಇದರ ಅಡಿಯಲ್ಲಿ ತನ್ನ ಚಿಕ್ಕಪ್ಪ ಮಾಜಿ ಶಾಸಕ ಎನ್.ಜಯಣ್ಣ ಅವರ ಹೆಸರಿನಲ್ಲಿ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯ, ಎನ್.ಜಯಣ್ಣ ನರ್ಸಿಂಗ್ ಕಾಲೇಜ್, ಎನ್.ಜಯಣ್ಣ ಡಿಇಡಿ ಕಾಲೇಜು ಸೇರಿದಂತೆ ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೂ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಿದ್ದರು. ಇದರಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ಪ್ರತಿವರ್ಷವೂ ಇಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವದಲ್ಲಿ ಡಿ.ಸುಧಾಕರ್ ಕಡ್ಡಾಯವಾಗಿ ಭಾಗವಹಿಸುತ್ತಿದ್ದರು. ಇಂತಹ ಶಾಲಾ ಆವರಣದಲ್ಲಿ ಇನ್ನು ಮುಂದೆ ಸುಧಾಕರ್ ನೆನಪು ಛಾಯೆ ಆವರಿಸಲಿದೆ.