ಸಾರಾಂಶ
- ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸಕನ್ನಡಪ್ರಭ ವಾರ್ತೆ, ತರೀಕೆರೆ
ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನೀಡಿದ ದಾನಿಗಳ ಹೆಸರು ಅವರು ಮಾಡಿರುವ ಕಾಯಕದಿಂದ ಜೀವಂತವಾಗಿರುತ್ತದೆ. ರಂಗೇನಹಳ್ಳಿ ಗ್ರಾಮದ ಹಳ್ಳಿಕೇರಿ ಬಸಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಅವರ ಹೋರಾಟದ ಪ್ರತಿಫಲವಾಗಿ ನಾವೆಲ್ಲರೂ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದು ಡಾ.ಎಚ್. ಎಮ್ . ಮರಳ ಸಿದ್ದಯ್ಯ ಪಟೇಲ್ ಹೇಳಿದರು.ಸರ್ಕಾರಿ ಪ್ರೌಢಶಾಲೆ ರಂಗೇನಹಳ್ಳಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಹೋರಾಟಗಾರರಾದ ಬಸಪ್ಪನವರ ಹೆಸರಲ್ಲಿ ಅವರ ಮಗ ಶ್ರೀಕಂಠ ಮೂರ್ತಿಯವರು ದತ್ತಿ ನೀಡಿದ್ದಾರೆ ಎಂದು ತಿಳಿಸಿದರು. ರವಿ ದಳವಾಯಿ ಮಾತನಾಡಿ, ದತ್ತಿ ದಾನಿಗಳ ಹೆಸರಲ್ಲಿ ದತ್ತಿ ಉಪನ್ಯಾಸದ ಮೂಲಕ ಅವರ ಆಶಯವನ್ನು ಮುಂದಿನ ಪೀಳಿಗೆಗೆ ತಿಳಿಸಿ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರ ಪ್ರೇಮವನ್ನು ಮಕ್ಕಳಲ್ಲಿ ಮೂಡುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ರಾಷ್ಟ್ರಭಕ್ತಿಯಲ್ಲಿ ರಂಗೇನಹಳ್ಳಿಯ ಪಾತ್ರ ಎಂಬ ವಿಚಾರವಾಗಿ ಇಮ್ರಾನ್ ಅಹಮದ್ ಬೇಗ್ ಉಪನ್ಯಾಸ ನೀಡಿ ಭಗತ್ ಸಿಂಗ್ ರನ್ನು ನಾವು ನೋಡಿಲ್ಲ ಆದರೆ ಅವರ ದೇಶಪ್ರೇಮ ಎಲ್ಲರಿಗೂ ತಿಳಿದಿದೆ. ತನ್ನ 23ನೇ ವಯಸ್ಸಿನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ಹತ್ತಿಸಿ ನೇಣಿಗೆ ಕೊರಳು ಕೊಟ್ಟ ಧೀಮಂತ ನಾಯಕ. ಬ್ರಿಟಿಷರ ವಿರುದ್ಧ ಸಿಡಿದೆದ್ದ ಹೋರಾಟಗಾರ. ಸ್ವಾತಂತ್ರ್ಯ ಹೋರಾಟದಿಂದ ರಾಷ್ಟ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದರು. ಅದೇ ರೀತಿ ಹಳ್ಳಿಕೆರೆ ಬಸಪ್ಪನವರು ಇದೇ ಗ್ರಾಮದವರಾಗಿದ್ದು ಸ್ವಾತಂತ್ರ ಹೋರಾಟದಲ್ಲಿ ಧುಮುಕಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವರು ಮಾಡಿದ ಹೋರಾಟದ ಫಲವೇ ಆಗಿದೆ. ಅದೇ ರೀತಿ ಮರಿಯಪ್ಪಯ್ಯ ಪಟೇಲ ರವರು ನಾವು ನೀವು ಕುಳಿತಿರುವ ಮೂರುವರೆ ಎಕರೆ ಜಾಗವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.
ಕನ್ನಡ ಶ್ರೀ ಬಿ.ಎಸ್. ಭಗವಾನ್ ಮಾತನಾಡಿ, ಸ್ವಾತಂತ್ರ್ಯದ ಹೋರಾಟದಲ್ಲಿ ಮಹನೀಯರ ಬಲಿದಾನದಿಂದ ನಾವು ಇಂದು ಸ್ವಾತಂತ್ರ ಅನುಭವಿಸುತ್ತಿದ್ದೇವೆ. ಹಳ್ಳಿಕೇರಿ ಬಸಪ್ಪನವರು ಸ್ವಾತಂತ್ರ ಹೋರಾಟದ ಫಲವಾಗಿ ದೇಶದ ಉದ್ದಾರಕ್ಕೆ ತಮ್ಮ ಜೀವವನ್ನೇ ಮುಡಿಪಾಗಿಟ್ಟರು. ನಾವೆಲ್ಲರೂ ಅವರ ತತ್ವ ಆದರ್ಶ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಹಳ್ಳಿಗನ ಪತ್ರಗಳು ಎಂಬ ಪುಸ್ತಕವನ್ನು ಬರೆದು ಸಾಹಿತ್ಯದಲ್ಲೂ ಹೋರಾಟದ ಕಿಚ್ಚನ್ನು ಮೂಡಿಸಿದ್ದರು ಎಂಧರು.ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಶಿಸ್ತಿನಿಂದ ದೇಶಭಕ್ತಿ ಹೊರಹೊಮ್ಮುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದೇ ಶಿಕ್ಷಣದ ಉದ್ದೇಶ. ಅಂತಹ ಶಿಕ್ಷಣದ ಮೂಲಕ ದೇಶಭಕ್ತಿ. ದೇಶಪ್ರೇಮವನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ. ರಂಗೇನಹಳ್ಳಿಯಲ್ಲಿ ಅಂತಹ ಪ್ರತಿಭೆಗಳು ಈ ಶಾಲೆಯಿಂದ ಹೊರ ಹೊಮ್ಮಲಿ ಎಂದು ಹೇಳಿದರು. ಮುಖ್ಯೋಪಾಧ್ಯಾಯ ಎಂ. ಶ್ರೀನಿವಾಸ್ ಮಾತನಾಡಿದರು, ತ.ಮ . ದೇವಾನಂದ, ದೈಹಿಕ ಶಿಕ್ಷಕ ಬಸವರಾಜ್, ಶಿಕ್ಷಕಿ ಪುಷ್ಪಾ, ಕೆ.ಎಸ್ .ಶಿವಣ್ಣ. ಸುನಿತಾ ಕಿರಣ್, ಶ್ರೀಕಂಠ ಮೂರ್ತಿ, ಮುಹಿಬುಲ್ಲ. ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು.