ನಾಡಿದ್ದು ಅಂ.ರಾ. ಪ್ರಜಾಪ್ರಭುತ್ವ ದಿನಾಚರಣೆ: ಮಹದೇವಪ್ಪ

| Published : Sep 13 2025, 02:04 AM IST

ನಾಡಿದ್ದು ಅಂ.ರಾ. ಪ್ರಜಾಪ್ರಭುತ್ವ ದಿನಾಚರಣೆ: ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದಿಂದ ‘ನನ್ನ ಮತ, ನನ್ನ ಹಕ್ಕು’ ಘೋಷವಾಕ್ಯದ ಅಡಿ ಸೆ.15ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದಿಂದ ‘ನನ್ನ ಮತ, ನನ್ನ ಹಕ್ಕು’ ಘೋಷವಾಕ್ಯದ ಅಡಿ ಸೆ.15ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಗೌರವ ಆಹ್ವಾನಿತರಾಗಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಮತ್ತು ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹಾಗೂ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಗೌರವ ಉಪಸ್ಥಿತಿ ಇರಲಿದೆ. ಶಾಸಕ ರಿಜ್ವಾನ್‌ ಅರ್ಷದ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರು, ಸಂಸದರು, ಶಾಸಕರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಮತದಾರರ ಪಾತ್ರವನ್ನು ಒತ್ತಿ ಹೇಳುವ ಹಾಗೂ ಮತದಾನ ಕೇವಲ ಹಕ್ಕು ಮಾತ್ರವಲ್ಲ, ಅದೊಂದು ಹೊಣೆಗಾರಿಕೆ ಎಂಬ ಸಂದೇಶ ಪಸರಿಸುವ ಉದ್ದೇಶದಿಂದ ಈ ಬಾರಿ ನನ್ನ ಮತ, ನನ್ನ ಹಕ್ಕು ಘೋಷವಾಕ್ಯದಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ನಾಗರಿಕ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶವನ್ನೂ ಹೊಂದಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.

ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮ:

ಸೆ.15ರಂದು ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಪ್ರತಿ ಜಿಲ್ಲೆಗಳಲ್ಲಿ ಸೈಕಲ್‌ ಜಾಥಾ ನಡೆಯಲಿದೆ. ಪ್ರಜಾಪ್ರಭುತ್ವ ಮತ್ತು ಏಕತೆಯ ಸಂದೇಶ ಸಾರಲು ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿನ ವರೆಗೆ ಬೈಕ್‌ ಜಾಥಾ ನಡೆಯಲಿದೆ. ರಾಜ್ಯದ ಎಲ್ಲಾ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ, ಛಾಯಾಚಿತ್ರ ಸ್ಫರ್ಧೆ, ಭಾಷಣ ಸ್ಫರ್ಧೆ, ಸರ್ಕಾರಿ ಕಚೇರಿಗಳು ಮತ್ತು ಸಮುದಾಯ ಸ್ಥಳಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪ್ರತಿಭಾನ್ವಿತರಿಗೆ 6 ಕೋಟಿ ರು. ಪ್ರೋತ್ಸಾಹಧನ:

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕೆಸೆಟ್‌, ನೀಟ್‌, ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಗಳಿಸಿದ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದ 1 ಸಾವಿರ ಪ್ರತಿಭಾನ್ವಿತ ಕೆಆರ್‌ಇಐಎಸ್‌ ಪಿಯು ವಿದ್ಯಾರ್ಥಿಗಳಿಗೆ 6 ಕೋಟಿ ರು. ವೆಚ್ಚದಲ್ಲಿ ನೇರ ನಗದು ವರ್ಗಾವಣೆ ಮೂಲಕ ಪ್ರೋತ್ಸಾಹ ಧನ ವಿತರಿಸಲಾಗುವುದು ಎಂದು ಹೇಳಿದರು.

ಚರ್ಚೆಗಳು, ಸಂಗೀತ ಮತ್ತು ಯುವ ಧ್ವನಿಗಳ ಮೂಲಕ ಸಂವಿಧಾನ ಕುರಿತು ಸಂದೇಶ ನೀಡಲು ‘ಡೆಮಾಕ್ರಸಿ ರೇಡಿಯೋ’ ಎಂಬ ಅಂತರ್ಜಾಲ ಆಧಾರಿತ ಹೊಸ ರೇಡಿಯೋ ವೇದಿಕೆಗೆ ಚಾಲನೆ ನೀಡಲಾಗುವುದು. ಅಂತೆಯೇ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಪರಿಶಿಷ್ಟ ಜಾತಿಯ ಯುವಕರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವರು ತಿಳಿಸಿದರು.