ಹನುಮಸಾಗರ: ನವದಂಪತಿ ಒಬ್ಬರನ್ನೊಬ್ಬರು ಅರಿತುಕೊಂಡು ಸುಖ ಸಂಸಾರ ನಡೆಸಬೇಕು ಎಂದು ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಹೇಳಿದರು.

ಸಮೀಪದ ಬಾದಿಮನಾಳ ಗ್ರಾಮದ ಕನಕ ಗುರುಪೀಠದಲ್ಲಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಾದಿಮನಾಳ ಕನಕ ಗುರುಪೀಠದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.ಕೆಲ ಬಡವರಿಗೆ ಮಕ್ಕಳ ಮದುವೆ ಮಾಡುವುದು ಭಾರವಾದ ಕೆಲಸವಾಗಿರುತ್ತದೆ. ಈ ತರಹದ ಸಾಮೂಹಿಕ ವಿವಾಹ ಬಡವರಿಗೆ ಅನುಕೂಲ.ದುಂದುವೆಚ್ಚದ ಮದುವೆಗೆ ಮಾಡಿದ ಸಾಲ ತೀರಿಸಲು ಅನೇಕರು ಎರಡ್ಮೂರು ವರ್ಷ ಬೇರೆಡೆ ವಲಸೆ ಹೋಗಿ ಕೆಲಸ ಮಾಡುತ್ತಾರೆ.ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವವರು ಪುಣ್ಯವಂತರು. ಸತಿಪತಿ ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು.ಅವರ ಮಾರ್ಗದರ್ಶನದಲ್ಲಿ ಸುಖವಾಗಿ ಬದುಕಬೇಕು ಎಂದರು.

ಏಳು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಬಾದಿಮನಾಳ ಕನಕ ಗುರುಪೀಠದ ಪೀಠಾಪತಿ ಶಿವಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.ಹಾಲುಮತ ಸಮೂದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ, ಎಚ್.ಎಸ್.ಸೋಂಪೂರ, ಮಹಾಂತೇಶ ಗಣವರಿ, ಎಚ್.ಎಂ.ಗೌಡರ, ಕಳಕನಗೌಡ ಗೌಡ್ರು, ಅಶೋಕ ವಾಲಿಕಾರ, ರವಿ ಪರಸಾಪೂರ,ಆನಂದ ಡೊಳ್ಳಿನ, ಸಕ್ರಪ್ಪ ಡೊಳ್ಳಿನ, ಶ್ರೀಮಠದ ಅರ್ಚಕ ಶಂಕ್ರಪ್ಪ ಡೊಳ್ಳಿನ ಇತರರಿದ್ದರು.