ಮುಂದಿನ ಸಿಎಂ ವಿಜಯೇಂದ್ರ ಆಗಿರಬೇಕು: ರೇಣು

| Published : Jul 30 2025, 12:45 AM IST

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯಬೇಕು. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಅ‍ವರೇ ಮುಖ್ಯಮಂತ್ರಿಯೂ ಆಗಬೇಕೆಂಬುದು ತನ್ನ ಮನದಾಳದ ಬಯಕೆಯಾಗಿದೆ. ಅಲ್ಲದೇ, ನಾಡಿನ ಬಿಜೆಪಿ ಕಾರ್ಯಕರ್ತರ ಹೆಬ್ಬಯಕೆಯೂ ಇದಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ಹೊನ್ನಾಳಿ ಪಟ್ಟಣದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರು- ಕಾರ್ಯಕರ್ತರ ಸಭೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯಬೇಕು. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಅ‍ವರೇ ಮುಖ್ಯಮಂತ್ರಿಯೂ ಆಗಬೇಕೆಂಬುದು ತನ್ನ ಮನದಾಳದ ಬಯಕೆಯಾಗಿದೆ. ಅಲ್ಲದೇ, ನಾಡಿನ ಬಿಜೆಪಿ ಕಾರ್ಯಕರ್ತರ ಹೆಬ್ಬಯಕೆಯೂ ಇದಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮಲ್ಲಿನ ಅನೇಕ ತಪ್ಪುಗಳಿಂದಾಗಿ ರಾಜ್ಯದ ಅಧಿಕಾರವನ್ನು ಚಿನ್ನದ ತಟ್ಟೆಯಲ್ಲಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಂತಾಗಿದೆ. ಇದು ಬಿಜೆಪಿಯವರ ಸ್ವಯಂಕೃತ ಅಪರಾಧವಾಗಿದೆ. ಚುನಾವಣೆ ಪೂರ್ವದಲ್ಲಿ ಅವೈಜ್ಞಾನಿಕ 5 ಗ್ಯಾರಂಟಿಗಳ ಭರವಸೆ ನೀಡಿ ಜನರನ್ನು ದಾರಿತಪ್ಪಿಸಿ ಕಾಂಗ್ರೆಸ್ ಇಂದು ಅಧಿಕಾರಕ್ಕೆ ಬಂದಿದೆ ಎಂದು ಜರಿದರು.

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ 1 ವಿದ್ಯುತ್ ಟಿ.ಸಿ.ಗೆ ರೈತರು ₹38 ಸಾವಿರ ಕಟ್ಟಿದರೆ ಸಾಕಾಗಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಹಣ ₹3 ಲಕ್ಷವಾಗಿದೆ. ₹20 ಮೊತ್ತದ ಛಾಪಾ ಕಾಗದ ಇದೀಗ ₹500 ಆಗಿದೆ. ಗೊಬ್ಬರ, ಬೀಜ ಸೇರಿದಂತೆ ಅನೇಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೊಸದಾಗಿ ಬಹುಮಹಡಿಗಳ ಕಟ್ಟಡಗಳಿಗೆ ಶೇ.1ರಷ್ಟು ಸೆಸ್ ವಿಧಿಸಲು ಸರ್ಕಾರ ಹೊರಟಿದೆ. ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿರುವುದೇ ಹೆಚ್ಚಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಸರ್ಕಾರದ ಮಾಜಿ ಸಚೇತಕ ಡಾ.ಶಿವಯೋಗಿ ಸ್ವಾಮಿ, ರಾಜ್ಯ ಪ್ರದಾನ ಕಾರ್ಯದರ್ಶಿ ಪಿ.ರಾಜೀವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಒಬಿಸಿ ಮೋರ್ಚಾ ಉಪಾಧ್ಯಕ್ಷ ಕುಬೇರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅರಕರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮಾರುತಿ ನಾಯ್ಕ ಇನ್ನಿತರ ಮುಖಂಡರು ಇದ್ದರು.

- - -

(ಟಾಪ್‌ ಕೋಟ್‌)

ಸಂಘಟನೆ ಎಂಬುದು ಚುನಾವಣೆಗಳಲ್ಲಿ ನಮ್ಮ ಪಕ್ಷ ಗೆಲ್ಲಲು ಒಂದು ಪ್ರಬಲ ಅಸ್ತ್ರವಾಗಿದೆ. ಇದನ್ನು ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರೂ ಅರ್ಥ ಮಾಡಿಕೊಂಡು ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು.

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - -

-29ಎಚ್.ಎಲ್.ಐ1.ಜೆಪಿಜಿ:

ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.