ಬಲಿಷ್ಠ ಭಾರತಕ್ಕೆ ಮುಂದಿನ ಪೀಳಿಗೆ ಕೊಡುಗೆ ನೀಡಬೇಕು: ಆತ್ಮಾನಂದ

| Published : Jun 16 2025, 02:59 AM IST

ಬಲಿಷ್ಠ ಭಾರತಕ್ಕೆ ಮುಂದಿನ ಪೀಳಿಗೆ ಕೊಡುಗೆ ನೀಡಬೇಕು: ಆತ್ಮಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಇಂದು 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ನಮ್ಮ ರಾಷ್ಟ್ರಕ್ಕೆ ಜತೆಯಾಗಿ ಉತ್ತಮ ಶಿಕ್ಷಣ ಪಡೆದು ದೇಶದ ಸತ್ಪ್ರಜೆಗಳಾಗಿ ಸಮಬಾಳು, ಸಮಪಾಲು ಎಂಬ ಧ್ಯೇಯದೊಂದಿಗೆ ದೇಶ ಕಟ್ಟುವ ಕಾರ್‍ಯದಲ್ಲಿ ತೊಡಗಬೇಕೆಂಬ ಚಿಂತನೆ ಬೆಳೆಸಿಕೊಳ್ಳಬೇಕು.

ಕನ್ನಡಪರಭ ವಾರ್ತೆ ಮಂಡ್ಯ

ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತಕ್ಕೆ ಮುಂದಿನ ಪೀಳಿಗೆ ಮತ್ತಷ್ಟು ಕೊಡುಗೆ ನೀಡುವತ್ತ ಗಮನ ಹರಿಸಬೇಕು ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಸಲಹೆ ನೀಡಿದರು.

ನಗರದ ಡಾ.ನಾ.ಸು.ಹರ್ಡಿಕರ್ ಭವನದಲ್ಲಿ ಭಾರತ ಸೇವಾದಳ, ಸೆಂಟ್ ಜಾನ್ಸ್ ಅಂಬುಲೆನ್ಸ್ ವತಿಯಿಂದ ನಡೆದ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಭಾರತ ಇಂದು 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ನಮ್ಮ ರಾಷ್ಟ್ರಕ್ಕೆ ಜತೆಯಾಗಿ ಉತ್ತಮ ಶಿಕ್ಷಣ ಪಡೆದು ದೇಶದ ಸತ್ಪ್ರಜೆಗಳಾಗಿ ಸಮಬಾಳು, ಸಮಪಾಲು ಎಂಬ ಧ್ಯೇಯದೊಂದಿಗೆ ದೇಶ ಕಟ್ಟುವ ಕಾರ್‍ಯದಲ್ಲಿ ತೊಡಗಬೇಕೆಂಬ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಪ್ರತಿಭಾ ಪುರಸ್ಕಾರದಿಂದ ಮಕ್ಕಳಿಗೆ ಸಾಧನೆ ಮಾಡಲು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಶೇ.90 ರಷ್ಟು ಅಂಕ ಪಡೆಯುವುದು ಉತ್ತಮ ಸಾಧನೆಯೇ ಸರಿ. ಜೊತೆಗೆ ಹಲವು ಸಂಘ ಸಂಸ್ಥೆಗಳು ಇಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ರುಘುನಾಥ್ ಅವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ, ಭಾರತ್ ಸೇವಾದಳದ ಅಧ್ಯಕ್ಷ ಬಿ.ಸಿ.ಶಿವಾನಂದ, ಕಾರ್‍ಯದರ್ಶಿ ಜಿ.ವಿ.ನಾಗರಾಜು, ಬೇಲೂರು ಸೋಮಶೇಖರ್, ಸಜ್ಜನ್ ಕೊಠಾರಿ, ಶ್ರೀಧರ್ ಇತರರು ಇದ್ದರು.

ವಿದ್ಯುತ್ ಕಂಬದ ಮೇಲೆ ಬಿದ್ದ ಒಣಗಿದ ಮರ: ಜನರು ಪ್ರಾಣಾಪಾಯದಿಂದ ಪಾರು

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಒಣಗಿದ ಮರ ವಿದ್ಯುತ್ ಕಂಬದ ಮೇಲೆ ಬಿದ್ದು, ಕಂಬ ಹಾನಿಗೊಂಡು ಶಾದಿ ಮಹಲ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಲವು ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ. ಘಟನೆಯಿಂದಾಗಿ ಶಾದಿ ಮಹಲ್ ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಹಳ ವರ್ಷಗಳಿಂದ ಒಣಗಿ ನಿಂತ ಮರಗಳನ್ನು ತೆರುವುಗೊಳಿಸಬೇಕೆಂದು ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸುವ ಸಂಬಂಧ ಹರಾಜು ಪ್ರಕ್ರಿಯೆ ನಡೆಸಿತ್ತು. ಆದರೆ, ಮರಗಳನ್ನು ಖರೀದಿಸಲು ಯಾರು ಮುಂದೆ ಬಾರದ ಕಾರಣ ತೆರವು ಕಾರ್ಯ ವಿಳಂಬವಾಗಿತ್ತು. ಪಟ್ಟಣದಲ್ಲಿ ಎರಡು ಮೂರು ದಿನಗಳಿಂದ ಬೀಳುತ್ತಿರುವ ಮಳೆ ಗಾಳಿಯಿಂದಾಗಿ ಒಣಗಿದ ಮರವೊಂದು ಭಾನುವಾರ ಮಧ್ಯಾಹ್ನ ಶಾದಿ ಮಹಲ್ ರಸ್ತೆಯ ವಿದ್ಯುತ್ ಕಂಬವೊಂದರ ಮೇಲೆ ಮುರಿದು ಬಿದ್ದಿದೆ. ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದ ಮೇಲೆ ಬಿದ್ದ ಮರವನ್ನು ತೆರವುಗೊಳಿಸುವ ಮೂಲಕ ಕಂಬದ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ.