ದಾನಿಗಳ ಸಹಾಯದಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬಹುದು: ನಾಗರಾಜ್

| Published : Aug 14 2025, 01:00 AM IST

ದಾನಿಗಳ ಸಹಾಯದಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬಹುದು: ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ದಾನಿಗಳು ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವುದರಿಂದ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆ ಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಮುಖಂಡ ಗಾಂಧಿ ಗ್ರಾಮದ ನಾಗರಾಜ್ ತಿಳಿಸಿದರು.

- ಗಾಂಧಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿ ವಿಶ್ವನಾಥ್ ನೀಡಿದ ಶಾಲಾ ಬ್ಯಾಗ್ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಾನಿಗಳು ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವುದರಿಂದ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆ ಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಮುಖಂಡ ಗಾಂಧಿ ಗ್ರಾಮದ ನಾಗರಾಜ್ ತಿಳಿಸಿದರು.ಮಂಗಳವಾರ ತಾಲೂಕಿನ ಕಡಹಿನಬೈಲು ಗ್ರಾಪಂ ಗಾಂಧಿಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿ ಗದ್ದೇಮನೆ ವಿಶ್ವನಾಥ ನೀಡಿದ ಉಚಿತ ಶಾಲಾ ಬ್ಯಾಗ್, ಟ್ರ್ಯಾಕ್ ಸೂಟ್ ಹಾಗೂ ಇತರ ಶಾಲಾ ಪರಿಕರಗಳನ್ನು ವಿಶ್ವನಾಥ್ ಅಭಿಮಾನಿ ಬಳಗದವರು ವಿತರಿಸಿದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದಾನಿ, ಉದ್ಯಮಿ ಗದ್ದೇಮನೆ ವಿಶ್ವನಾಥ್ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಹಾಯ ಹಸ್ತ ಚಾಚುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ಅತಿಥಿಯಾಗಿದ್ದ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಶಿಕ್ಷಣ ಬಹಳ ಮುಖ್ಯ. ಉತ್ತಮ ಶಿಕ್ಷಣದಿಂದ ಮಕ್ಕಳು ಜೀವನದಲ್ಲಿ ಮುಂದೆ ಬರುತ್ತಾರೆ. ದಾನಿ ವಿಶ್ವನಾಥ್ ದೂರ ದೃಷ್ಟಿ, ಉದಾತ್ತ ಚಿಂತನೆಯಿಂದ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಶಾಲಾ ಬ್ಯಾಗ್ ಹಾಗೂ ಇತರ ಪರಿಕರ ನೀಡುತ್ತಿದ್ದು ಅದನ್ನು ಅವರ ಅಭಿಮಾನಿ ಬಳಗದವರು ಮಕ್ಕಳಿಗೆ ತಲುಪಿಸುತ್ತಿದ್ದಾರೆ ಎಂದರು.ಮಡಬೂರು ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಬಿ.ಟಿ.ಪ್ರಕಾಶ್ ಮಾತನಾಡಿ, ಗದ್ದೇಮನೆ ವಿಶ್ವನಾಥ್ ಸರ್ಕಾರಿ ಶಾಲೆಯಲ್ಲೇ ಕಲಿತು ಜೀವನದಲ್ಲಿ ಮುಂದೆ ಬಂದಿದ್ದಾರೆ. ತಮ್ಮ ದುಡಿಮೆಯ ಹಣದಲ್ಲಿ ಶಿಕ್ಷಣ, ಧಾರ್ಮಿಕ ಕ್ಷೇತ್ರ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದಾರೆ. ಈಗಾಗಲೇ ತಾಲೂಕಿನ 6,500 ಮಕ್ಕಳಿಗೆ ಶಾಲಾ ಬ್ಯಾಗ್, ಸಮವಸ್ತ್ರ ವಿತರಿಸಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ದಾನಿ ಗದ್ದೇಮನೆ ವಿಶ್ವನಾಥ ಅವರ ಸಹೋದರ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ಗ್ರಾಪಂ ಸದಸ್ಯ ರವೀಂದ್ರ ವಹಿಸಿದ್ದರು. ಸಭೆಯಲ್ಲಿ ಬಾಳೆ ಗ್ರಾಪಂ ಉಪಾಧ್ಯಕ್ಷ ಮಧು, ಮುಖಂಡರಾದ ಹಂಚಿನ ಮನೆ ರಾಘವೇಂದ್ರ, ಅಜಂತ, ಹೊನ್ನೇಕೊಡಿಗೆ ಪ್ರಕಾಶ್, ಗಿರೀಶ ಗದ್ದೇಮನೆ, ಸಾರ್ಥಕ ಗೌಡ, ವೈಶಾಖ್, ನಿಶಾಂತ್, ತೀರ್ಥೇಶ್, ಎಸ್.ಡಿ.ಎಂ.ಸಿ ಸದಸ್ಯ ರಿಜಿಲೇಶ್, ಶಿಕ್ಷಕಿ ಶ್ರೀದೇವಿ ಇದ್ದರು. ನಂತರ ದಾನಿ ವಿಶ್ವನಾಥ್ ಅಭಿಮಾನಿ ಬಳಗದವರು ಭದ್ರಾ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಸಮವಸ್ತ್ರ ವಿತರಿಸಿದರು.