ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇಡೀ ಜಗತ್ತಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆಯಲ್ಲಿ ವಿಶ್ವದಲ್ಲೇ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಆತಂಕ ವ್ಯಕ್ತಪಡಿಸಿದರು.ಇಲ್ಲಿನ ಶುಭಂ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಪ್ರೀತಮ್ ರವರ ‘ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಮೊದಲ ಸ್ಥಾನದಲ್ಲಿ ಚೀನಾ ಮತ್ತು ಮೂರನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. ಆಧುನಿಕ ಯುಗದಲ್ಲಿ ಮಧುಮೇಹ ಹೆಚ್ಚಿನ ಜನರನ್ನು ಭಾದಿಸುತ್ತಿದ್ದು, ಇಂದಿನ ಆಹಾರ ಪದ್ದತಿಯೇ ಇದಕ್ಕೆ ಮುಖ್ಯ ಕಾರಣ. ಈ ಕಾಯಿಲೆ ಯಾವುದರಿಂದ ಬರುತ್ತಿದೆ. ಆಹಾರ ಪದಾರ್ಥದಲ್ಲಿ ನಿಯಂತ್ರಣ ಮಾಡಿದರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು ಎಂಬ ಸರಳ ಸತ್ಯ ಈ ಪುಸ್ತಕದಲ್ಲಿದೆ ಎಂದು ತಿಳಿಸಿದರು.ಸಣ್ಣದರಲ್ಲೇ ದೊಡ್ಡ ಮಹತ್ವ ಅಡಗಿದೆ. ಸಕ್ಕರೆ ರೋಗ ಅತ್ಯಂತ ಕಡಿಮೆ ಇರುವ ಜಪಾನ್ ನಲ್ಲಿನ ಆಹಾರ ಪದ್ಧತಿ ತೀರಾ ಭಿನ್ನವಾಗಿದೆ. ಆ ತರಹದ ಪದ್ಧತಿ ನಮ್ಮ ದೇಶದಲ್ಲಿಲ್ಲ. ಈ ಪುಸ್ತಕದೊಳಗಿನ ಸತ್ಯ ಅರ್ಥ ಮಾಡಿಕೊಂಡರೆ ಸರಳವಾಗಿಯೇ ಸಕ್ಕರೆ ರೋಗ ಗೆಲ್ಲಬಹುದು. ಈ ಪುಸ್ತಕ ಜಗತ್ತಿನ ಎಲ್ಲ ಭಾಷೆಗಳಿಗೂ ತರ್ಜುಮೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ನಾನೂ ಕೂಡ ಸಕ್ಕರೆ ರೋಗದ ಶಿಕಾರಿ. ನನ್ನ ಕುಟುಂಬದಲ್ಲಿ 20ನೇ ವಯಸ್ಸಿಗೆ ಕಾಯಿಲೆ ಬರಿಸಿಕೊಂಡವರಿದ್ದಾರೆ. ದುಶ್ಚಟಗಳು ಮತ್ತು ನಿರ್ಲಕ್ಷ್ಯ ಕೂಡ ಸಕ್ಕರೆ ರೋಗಕ್ಕೆ ಬರಮಾಡಿಕೊಳ್ಳಲು ಕಾರಣವಾಗುತ್ತದೆ. ಇದೆಲ್ಲ ಮೀರಿ ಆಹಾರದಲ್ಲಿ ಕಾರ್ಬೋಹೈಡ್ರೇಡ್ ಕಡಿಮೆ ಮಾಡಿಕೊಂಡರೆ ಸಕ್ಕರೆ ರೋಗ ಹಿಮ್ಮೆಟ್ಟಿಸಬಹುದು. ಅದನ್ನೇ ಈ ಪುಸ್ತಕದಲ್ಲಿ ಸರಳವಾಗಿ ಹೇಳಲಾಗಿದೆ ಎಂದು ತಿಳಿಸಿದರು.ಇಂದಿನ ಕಾಲದಲ್ಲಿ ಅನೇಕರು ಒಂದಲ್ಲ ಒಂದು ರೋಗಕ್ಕೆ ತತ್ತಾಗುತ್ತಿದ್ದಾರೆ. ಎಳೆ ವಯಸ್ಸಿನಲ್ಲೇ ಮಧುಮೇಹದಂಥ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಬಹುತೇಕ ವೈದ್ಯ ಸಂಸ್ಥೆಗಳು ಹಣದ ಹಿಂದೆ ಬಿದ್ದಿವೆ. ಅನೇಕ ಜನರ ಪ್ರಾಣ ಅಪಾಯದಲ್ಲಿದೆ. ಅದನ್ನು ತಡೆಯುವ ಒಳ್ಳೆಯ ಕೆಲಸವನ್ನು ಡಾ.ಪ್ರೀತಂ ಮಾಡುತ್ತಿದ್ದಾರೆ. ಅವರ ತಂದೆಯವರ ಸೇವೆ ಕೂಡ ಶ್ಲಾಘನೀಯವಾಗಿತ್ತು ಎಂದು ಪ್ರಶಂಸಿಸಿದರು. ವೈದ್ಯ ಸಾಹಿತಿ ಡಾ.ವಿನಯಾ ಶ್ರೀನಿವಾಸ್ ಮಾತನಾಡಿ, ಸಕ್ಕರೆ ರೋಗ ಎಂದ ಕೂಡಲೇ ಅದನ್ನು ಗುಣಪಡಿಸಲು ಸಾಧ್ಯವೇ ಇಲ್ಲ ಎಂಬ ತಪ್ಪು ಕಲ್ಪನೆಗಳಿವೆ. ಡಾ.ಪ್ರೀತಂ ಸಕ್ಕರೆ ರೋಗದ ಪರಿಕಲ್ಪನೆ ಬದಲಾಗಿರೋದನ್ನು ಸಂಶೋಧಿಸುತ್ತಲೇ ಈ ಪುಸ್ತಕವನ್ನು ಬರೆದಿದ್ದಾರೆ. ಈ ಹಿಂದೆ ರೋಗಿಗಳಿಗೆ ಕೊಡುವ ಸಲಹೆಗಳನ್ನೇ ಬರೆಯಿರಿ ಎಂದಿದ್ದೆ. ಅದನ್ನೇ ಬರೆದು ಈಗ ಪುಸ್ತಕವಾಗಿಸಿದ್ದಾರೆ .ವಿಜ್ಞಾನ ನಿಂತ ನೀರಲ್ಲ. ಸಕ್ಕರೆ ಕಾಯಿಲೆ ಇಲ್ಲವಾಗಿಸಬಹುದೆಂಬ ಸತ್ಯವನ್ನು ಡಾ.ಪ್ರೀತಂ ಸರಳವಾಗಿ ಪುಸ್ತಕದಲ್ಲಿ ವಿವರಿಸಿದ್ದಾರೆ ಎಂದು ತಿಳಿಸಿದರು.ಪುಸ್ತಕದ ಲೇಖಕ ಡಾ.ಪ್ರೀತಂ ಮಾತನಾಡಿ, ಈ ಪುಸ್ತಕ ಬರೆಯಲು ಪ್ರೇರೇಪಣೆಯಾಗಿದ್ದು, ಡಾ.ವಿನಯಾ ಶ್ರೀನಿವಾಸ್ ಅವರು. ಅವರಿಂದಲೇ ಈಗ ಈ ಪುಸ್ತಕ ಮೂಡಿ ಬಂದಿದೆ. ಇದು ಅನುಭವದ ಹಾಗೂ ಸಂಶೋಧಿಸಿದ ಅಂಶಗಳ ಆಧಾರದ ಮೇಲೆ ಬರೆಯಲಾದ ಪುಸ್ತಕ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ಶಿವಪ್ರಕಾಶ್, ಪ್ರೊ.ಸಿರಾಜ್ ಅಹಮದ್, ಡಾ.ವಿನಯಾ ಶ್ರೀನಿವಾಸ್, ಆರ್.ಎಸ್.ಹಾಲಸ್ವಾಮಿ ಅವರನ್ನು ಅಭಿನಂದಿಸಲಾಯಿತು.