ಬ್ಯಾಡಗಿ: ಭಾರತ ಸ್ವಾವಲಂಬಿ ರಾಷ್ಟ್ರವಾಗಬೇಕಾದರೆ, ಭವಿಷ್ಯದ ದಿನಗಳಲ್ಲಿ ದೇಶದಲ್ಲೆಡೆ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ, ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಚಿಂತನೆ ಅಳವಡಿಸುವ ವಾತಾವರಣ ಶಾಲೆಗಳಲ್ಲಿ ನಿರ್ಮಾಣವಾಗಬೇಕಾಗಿದೆ ಎಂದು ನವೋದಯ ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷ ಅಶೋಕ ಬಣಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರೆಯದೇ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ, ಸಾರ್ವಭೌಮತ್ವ ಪಡೆಯುವ ಉದ್ದೇಶದಿಂದ ವಿಶ್ವದೆಲ್ಲೆಡೆ ಬಹಳಷ್ಟು ರಾಷ್ಟ್ರಗಳು ಸ್ಪರ್ಧೇಗಿಳಿದಿವೆ, ನೂತನ ಅವಿಷ್ಕಾರಗಳಿಗಾಗಿ ಕೋಟಿಗಟ್ಟಲೇ ಹಣ ವ್ಯಯಿಸುತ್ತಿವೆ ಎಂದರು.

ಜಾಗತಿಕ ನಾಯಕತ್ವಕ್ಕಾಗಿ ಭಾರತದ ಯುವಕರನ್ನು ಸಬಲೀಕರಣಗೊಳಿಸಬೇಕಾಗಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ವೈಜ್ಞಾನಿಕ ಪ್ರಗತಿಯಲ್ಲಿ ಆಸಕ್ತಿ ಉತ್ತೇಜಿಸಲು ವಿವಿಧ ಚಟುವಟಿಕೆಗಳನ್ನು ಶಾಲೆಗಳಲ್ಲಿ ನಡೆಸುವುದು ಅನಿವಾರ್ಯವಾಗಿದೆ ಇದಕ್ಕಾಗಿ ಶಿಕ್ಷಕರು ಸಜ್ಜಾಗಬೇಕಾಗಿದೆ ಎಂದರು.

ವಿಜ್ಞಾನ ವಸ್ತು ಪ್ರದರ್ಶನದ ವೇಳೆ ಬೆಳಕು ಮತ್ತು ಉಷ್ಣ, ಕಾಂತಗಳು, ಮಳೆನೀರು ಕೊಯ್ಲು, ಪವನ ವಿದ್ಯುತ್ ಉತ್ಪಾದನೆ, ಸೌರಶಕ್ತಿ ಉತ್ಪಾದನೆ, ಚಂದ್ರಯಾನ, ಹಸಿಕಸ ಮತ್ತು ಒಣಕಸ ಬೇರ್ಪಡಿಸುವ ಕ್ರಿಯಾತ್ಮಕ ಮಾದರಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಆಡಳಿತಾಧಿಕಾರಿ ವಸಂತ ಕನ್ನಮ್ಮನವರ ನಿರ್ದೇಶಕ ವಿ.ಸಿ.ಹಾವೇರಿಮಠ ಹಾಗೂ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಎ.ಟಿ ಪೀಠದ ನಿರ್ವಹಿಸಿದರು. ಶಿಕ್ಷಕರಾದ ಶ್ರೀ ಚೇತನಸ್ವಾಮಿ ಹಿರೇಮಠ ಸಿ.ವಿ.ರಾಮನ್ ಕುರಿತು ಮಕ್ಕಳಿಗೆ ತಿಳಿಸಿದರು ಹಾಗೂ ವಿಜ್ಞಾನ ಶಿಕ್ಷಕ ಟಿ.ಎಲ್.ವೆಂಕಟೇಶ್ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.