ಕನ್ನಡಪ್ರಭ ವಾರ್ತೆ ಶನಿವಾರಸಂತೆ
2ನೇ ಶತಮಾನದಲ್ಲಿ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯ ಬಣ್ಣಿಸಬೇಡ ಎಂದು ಬಸವಾದಿ ಶರಣರು ಹೇಳಿದ ವಚನವೇ ಸ್ವಾತಂತ್ರ್ಯಾ ನಂತರ ಸಂವಿಧಾನವನ್ನು ರಚಿಸಲು ಮೂಲ ಆಧಾರವಾಯಿತು. 12ನೇ ಶತಮಾನದ ವಚನಗಳು ಇಂದಿಗೂ ಪ್ರಸ್ತುತ ಎಂದು ಉಪನ್ಯಾಸಕ ಕೆ.ಪಿ. ಜಯ ಕುಮಾರ್ ನುಡಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಸದಾಶಿವ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ಕಿರಿಕೊಡ್ಲಿ ಮಠ, ಕೊಡ್ಲಿಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸದಾಶಿವ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ್ಯ ಮಾಗನೂರು ಬಸಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ದತ್ತಿ ಉಪನ್ಯಾಸ ನೀಡಿ ಮಾತನಾಡಿದರು.
ಶರಣರ ವಚನಗಳು ಅವು 12ನೇ ಶತಮಾನದಲ್ಲಿ ರಚಿತವಾಗಿದ್ದರೂ ಅವು ಇಂದಿಗೂ ಪ್ರಸ್ತುತ. ಅದರಲ್ಲಿನ ಪ್ರತಿಯೊಂದು ವಚನವು ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದರು.ಕಾರ್‍ಯಕ್ರಮ ಉದ್ಘಾಟನೆ ಮಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್‍ಯದರ್ಶಿ ಎಸ್ ಐ ಮುನೀರ್ ಅಹ್ಮದ್ ಅವರು ಮಾತನಾಡಿ, ಕನ್ನಡ ಜನ ಜೀವನದಲ್ಲಿ ಜಾಗೃತಿ ಉಂಟು ಮಾಡಿ, ಕೊಳೆಯನ್ನು ತೊಳೆದು ಹಸನ್ಗೊಳಿಸಿ, ಅರಿವನ್ನು ಮೂಡಿಸಿ ಜನರ ಬದುಕಿಗೆ ಬೆಲೆಯನ್ನು ತಂದು ಕೊಟ್ಟಂತಹ ವಚನಕಾರರು ತಮ್ಮ ಬಹಳಷ್ಟು ವಚನಗಳಲ್ಲಿ ಅರಿವಿನ ಅನಂತ ಪದಗಳನ್ನು ತೆರೆದು ತೋರಿಸಿದ್ದಾರೆ. ಇಂತಹ ವಚನಗಳನ್ನು ರಚಿಸಿದ ಮೊದಲ ಶ್ರೇಯಸ್ಸು, ದೇವರ ದಾಸಿಮಯ್ಯ ಅಥವಾ ಜೇಡರ ದಾಸಯ್ಯ ಅವರಿಗೆ ಸಲ್ಲಬೇಕು. ಎಲ್ಲ ವಚನಕಾರ ರಚಿಸಿದ ವಚನಗಳು ಸಾರ್ವಕಾಲಿಕ 12ನೇ ಶತಮಾನದ ವಚನಗಳು ನಮ್ಮ ಬದುಕಿಗೆ ದಾರಿದೀಪ ಎಂದರು.
ದತ್ತಿ ದಾನಿ ಎಂ.ಬಿ. ಸಂಗಮೇಶ್ವರ ಗೌಡ ಅವರನ್ನು ಪ್ರತಿನಿಧಿಸಿದ ದಾವಣಗೆರೆಯ ಉಪನ್ಯಾಸಕರಾದ ಶಾಂತಕುಮಾರ್ ಅವರು ಮಾತನಾಡಿ, ಮಾಗನೂರು ಬಸಪ್ಪನವರು ವೃತ್ತಿಯಲ್ಲಿ ವ್ಯಾಪಾರಿಗಳಾಗಿದ್ದರು. ಆದರೆ ಅವರು ಅಂದಿನ ಕಾಲದಲ್ಲಿ ಸಲ್ಲಿಸಿದ ಸೇವೆ ಅಂದಿನ ಕಾಲದ ಜನರ ಬದುಕನ್ನು ಹಸನಾಗಿಸಿತ್ತು. ಹಲವಾರು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದ ಬಸಪ್ಪನವರು ವಿದ್ಯೆಯೇ ಮಾನವನ ಅಭಿವೃದ್ಧಿಗೆ ಮೂಲ ಎಂಬುದನ್ನು ಕಂಡುಕೊಂಡಿದ್ದರು ಎಂದರು.
ಆಶೀರ್ವಚನ ನೀಡಿ, ಶರಣ ಸಾಹಿತ್ಯ ಸಂಸ್ಕೃತಿಯನ್ನು ಇಂದಿನ ಏಳಿಗೆಗೆ ಪರಿಚಯ ಮಾಡಿಕೊಡುತ್ತಿರುವ ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಬಸವಾದಿ ಶರಣರ ವಚನಗಳನ್ನು ಅಳವಡಿಸಿಕೊಂಡರೆ ಎಲ್ಲರ ಬದುಕು ಹಸನಾಗುತ್ತದೆ ಎಂದರು.
ದತ್ತಿಯ ಆಶಯದಂತೆ ಶರಣ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರಕರಾಗಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರ್ವರಿಗೂ ಸಾರುತ್ತಿರುವ ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಸದಾಶಿವ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಂದ್ರಶೇಖರ್ ನಿರೂಪಿಸಿದರು.