ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷಿ ವಿಜ್ಞಾನಿಗಳು ಪ್ರಯೋಗಾಲಯಗಳಿಗೆ ಸೀಮಿತರಾಗದೇ ತಾವು ಕೈಗೊಂಡ ಸಂಶೋಧನೆಗಳ ಪಲಿತಾಂಶಗಳನ್ನು ರೈತರ ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಒಂದು ಹೊಸ ಯೋಜನೆಯನ್ನು ಹಮ್ಮಿಕೊಂಡು ಗ್ರಾಮಕ್ಕೆ ವಿಜ್ಞಾನಿಗಳನ್ನು ಕರೆಸಿ, ಪರಸ್ಪರ ಚರ್ಚಿಸಿ, ಕೃಷಿಯಲ್ಲಿ ಪರಿಹಾರೋಪಾಯಗಳನ್ನು ಕಂಡುಹಿಡಿಯುವ ಪ್ರಯತ್ನ ಇದಾಗಿದೆ ಎಂದು ಕೃಷಿ ವಿವಿ, ಧಾರವಾಡದ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.ಕೊಲ್ಹಾರ ತಾಲೂಕಿನ ಕುಬಕಡ್ಡಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ ಹಾಗೂ ಗೋವಿನಜೋಳ ಅಭಿವೃದ್ಧಿ ಯೋಜನೆ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರ ಸಹಯೋಗದಲ್ಲಿ ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಗೋವಿನಜೋಳ ಸಮಗ್ರ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೃಷಿ ವಿಶ್ವವಿದ್ಯಾಲಯವು ಮೂರು ಅಂಗಗಳನ್ನು ಹೊಂದಿದ್ದು, ಅದರಂತೆ ಬೋಧನೆಯಲ್ಲಿ ಕೃಷಿ ಪದವೀದರರನ್ನು ತಯಾರು ಮಾಡುವ ಕಾರ್ಯ, ಸಂಶೋಧನೆ ಮೂಲಕ ವಿವಿಧ ತಳಿಗಳ ಅಭಿವೃದ್ಧಿ, ಬೇಸಾಯ ಪದ್ಧತಿ ಕೆಲಸ ಮತ್ತು ವಿಸ್ತರಣೆ ಮೂಲಕ ರೈತರಿಗೆ ನೇರವಾಗುವ ಕಾರ್ಯವನ್ನು ಮಾಡುತ್ತಿದೆ ಎಂದರು.ಕೃಷಿ ವಿಜ್ಞಾನ ಕೇಂದ್ರವು ಕುಬಕಡ್ಡಿ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿ ಎಲ್ಲ ತಾಂತ್ರಿಕತೆಗಳನ್ನು ಇಲ್ಲಿ ಹಮ್ಮಿಕೊಂಡಿದ್ದು, ಉತ್ತಮ ಬೆಳವಣಿಗೆಯಾಗಿದೆ. ವಿಶ್ವವಿದ್ಯಾಲಯದಲ್ಲಿ ರೈತ ಉತ್ಪಾದಕ ಸಂಸ್ಥೆ ಸದಸ್ಯರಿಗೆ ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಸಂಶೋಧನಾ ನಿರ್ದೇಶಕ ಡಾ.ಬಿ.ಡಿ. ಬಿರಾದಾರ ಮಾತನಾಡಿ, ರೈತರು ಬೇಸಾಯದಲ್ಲಿ ಲಾಭ ಗಳಿಸಲು ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮೊದಲನೆಯದಾಗಿ ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಎರಡನೆಯದಾಗಿ ಭೂಮಿಯನ್ನು ಹದಗೊಳಿಸಿ ತಯಾರಿಸಿಕೊಳ್ಳಬೇಕು. ಹಂಗಾಮಿಗೆ ಅನುಸಾರವಾಗಿ ಬೆಳೆ ಆಯ್ಕೆ, ತಳಿ ಆಯ್ಕೆ, ಬೀಜ ಆಯ್ಕೆ, ಬೀಜೋಪಚಾರ ಇತ್ಯಾದಿ ಕಾರ್ಯಗಳನ್ನು ಹಮ್ಮಿಕೊಂಡಲ್ಲಿ ಶೇ.70ರಷ್ಟು ಕೃಷಿ ಕಾರ್ಯ ಕೈಗೊಂಡಂತಾಗುತ್ತದೆ ಎಂದರು.ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ ಮಾತನಾಡಿ, ರೈತರು ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬೆಳೆದಿದ್ದು, ಅವರು ಅಗಲುಸಾಲು ಪದ್ಧತಿಯಲ್ಲಿ ಬಿತ್ತಬೇಕು. ಈಗಾಗಲೇ ಬಿತ್ತನೆ ಕೈಗೊಂಡ ರೈತರು ಅಡಿಗೆ ಒಂದರಂತೆ ಬಿಟ್ಟು ಉಳಿದ ಸಸಿಗಳನ್ನು ಕೀಳಬೇಕು. 40 ದಿನಗಳಾದ ನಂತರ ಕುಡಿ ಚಿವುಟಬೇಕು. ತೇವಾಂಶ ಕಾಯ್ದುಕೊಳ್ಳಲು 2ರಿಂದ 3ಸಾರಿ ಎಡೆ ಹೊಡೆದು ಬೋದು ಏರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್. ಅಂಗಡಿ ಮಾತನಾಡಿ, ರೈತರು ವಿವಿಧ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕು. ಒಂದೇ ಬೆಳೆ ಬೆಳೆಯದೆ ಬೆಳೆ ಪರಿವರ್ತನೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯದ ತಜ್ಞರೊಂದಿಗೆ ನಿರಂತರ ಸಂಪರ್ಕವಿಟ್ಟಿಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಕಂಡಕೊಳ್ಳಬೇಕೆಂದರು.ಇದೇ ಸಂದರ್ಭದಲ್ಲಿ ಧಾರವಾಡ ಕೃಷಿ ವಿವಿ ಗೋವಿನ ಜೋಳ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಬೀಜ, ಸಸ್ಯ ಸಂರಕ್ಷಣೆ ಔಷಧಿ ವಿತರಿಸಲಾಯಿತು. ನಂತರ ರೈತರೊಂದಿಗೆ ನಡೆದ ಸಂವಾದಲ್ಲಿ ವಿಜ್ಞಾನಿಗಳಾದ ಡಾ.ಎಮ್.ಆರ್. ಕಾಚಾಪುರ, ಡಾ.ಪ್ರಸನ್ನ ಪಿ.ಎಮ್., ಡಾ.ಕಿರಣಸಾಗರ ಡಿ.ಸಿ., ಡಾ.ಶಿವರಾಜ ಕಾಂಬಳೆ, ಡಾ.ವಿಜಯಲಕ್ಷ್ಮಿ ಮುಂದಿನಮನಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾಧಿಕಾರಿ ಡಾ.ಎ. ಭೀಮಪ್ಪ, ಸಹ ಸಂಶೋಧನಾ ನಿರ್ದೇಶಕ ಡಾ.ಎ.ಎಸ್. ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ, ಡಾ.ಎಮ್.ಪಿ. ಪೋತದಾರ, ಪ್ರಧಾನ ಸಂಶೋಧಕ ಡಾ.ಎಸ್.ಆರ್. ಸಲಕೀನಕೊಪ್ಪ, ಹಿರಿಯ ವಿಜ್ಞಾನಿಗಳಾದ ಡಾ.ಎಸ್.ಎಮ್. ವಸ್ತ್ರದ, ಡಾ.ಶಿವಶಂಕರಮೂರ್ತಿ, ಪ್ರಗತಿಪರ ರೈತರಾದ ಗಿರೀಶ ತೆಲಗಿ, ಗುರನಗೌಡ ಬಿರಾದಾರ, ವಿ.ಜಿ. ಕುಲಕರ್ಣಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.