ಸಾರಾಂಶ
17ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ । ಅಧ್ಯಕ್ಷೀಯ ಭಾಷಣ
ಕನ್ನಡಪ್ರಭ ವಾರ್ತೆ ಉಡುಪಿಹೊಸ ತಲೆಮಾರಿನವರು ಸಾಹಿತ್ಯ ಪುಸ್ತಕಗಳನ್ನು ಓದದೇ ಇರುವುದಕ್ಕೆ ಹಿರಿಯರೂ ಕಾರಣ ಎಂದು ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ ಹೇಳಿದರು.
ಅವರು ಬುಧವಾರ ಕೃಷ್ಣಮಠದ ರಾಜಾಂಗಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ 17ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.ಈಗ ಯಾರಿಗೂ ಪುಸ್ತಕವೇ ಬೇಡ, ಓದುವ ಹವ್ಯಾಸ ಯಾರಿಗೂ ಇಲ್ಲ, ಈ ಕಾಲದಲ್ಲಿ ಮೊಬೈಲ್ ಪುಸ್ತಕದ ಸ್ಥಾನವನ್ನು ಆಕ್ರಮಿಸಿಕೊಂಡಿದೆ ಎಂದೆಲ್ಲ ಹೇಳಲಾಗುತ್ತಿದೆ. ಓದುವ ವಾತಾವರಣವೇ ಇಲ್ಲ ಎಂಬುದು ಎಲ್ಲರ ಆಕ್ಷೇಪಣೆಯಾಗಿದೆ. ಆದರೆ ಇದಕ್ಕೆ ಹೊಸತಲೆಮಾರಿನವರು ಮಾತ್ರ ಕಾರಣರಲ್ಲ, ಹಳೆತಲೆಮಾರಿನವರೂ ಕಾರಣ ಎಂದರು.
ಕಿರಿಯರು ಓದುವ ವಾತಾವರಣವನ್ನು ಹಿರಿಯರು ನಿರ್ಮಾಣ ಮಾಡುತ್ತಿಲ್ಲ, ಹಿರಿಯರು ಮಕ್ಕಳು ಇಷ್ಟಪಟ್ಟು ಓದುವುದಕ್ಕೆ ಬಿಡದೇ ಇಂತಹದ್ದನ್ನೆ ಓದು, ಇದನ್ನ ಮಾತ್ರವೇ ಓದು ಎಂದು ನಿರ್ಬಂಧಿಸುತ್ತಿದ್ದಾರೆ. ಅಂಕಗಳನ್ನು ಪಡೆಯುವ ಗುರಿ ತೋರಿಸಿ ಮನಸ್ಸಂತೋಷವನ್ನೂ ಮನಃಸಂತೋಷವನ್ನೂ ನಿರಾಕರಿಸುತಿದ್ದಾರೆ. ಮಕ್ಕಳು ತಮ್ಮ ಪರಿಸರ, ಸಮಾಜದ ಪರಿಚಯವೂ ಇಲ್ಲದಂತೆ ಬಂಧಿಸುತಿದ್ದಾರೆ, ಕೌಟುಂಬಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಂತೆ, ತಮ್ಮವರೆಂಬ ಯಾರ ಪರಿಚಯವೂ ಆಗದಂತೆ ಕಟ್ಟಿ ಹಾಕುತಿದ್ದಾರೆ, ಬೇಕು ಬೇಡದ್ದನ್ನೆಲ್ಲಾ ತಂದು ಕೊಟ್ಟು ಶ್ರಮಸಂಸ್ಕೃತಿಯ ಪರಿಚಯವೇ ಆಗದಂತೆ ತಡೆಯುತಿದ್ದಾರೆ, ಈ ಎಲ್ಲ ಮೂಲಕ ಹೊಸತಲೆಮಾರಿನಲ್ಲಿ ಸಾಹಿತ್ಯಾಸಕ್ತಿ ಮೂಡದಂತೆ ಮಾಡುತಿದ್ದಾರೆ ಎಂದವರು ಕಳವಳ ವ್ಯಕ್ತಪಡಿಸಿದರು.ಅಭಿಮಾನವಷ್ಟೇ ಸಾಲದು:
ತಾಯಿನುಡಿ, ಮಾತೃಭಾಷೆ ಎಂದು ಘೋಷಣೆ ಕೂಗಿದರೆ ಭಾಷೆಯ ಉದ್ಧಾರವಾಗುವುದಿಲ್ಲ. ಕೇವಲ ಭಾಷಾಭಿಮಾನದಿಂದಲೂ ಸಾಹಿತ್ಯಾಭಿವೃದ್ಧಿಯಾಗುವುದಿಲ್ಲ. ಸತತ ಚಿಂತನೆ ಮತ್ತು ವಿಷಯ ಅಧ್ಯಯನದಿಂದ ಉತ್ತಮ ಸಾಹಿತ್ಯ ರಚನೆ ಸಾಧ್ಯ ಎಂದ ಅಧ್ಯಕ್ಷರು, ಎಸ್.ಎಲ್.ಭೈರಪ್ಪ ಅವರು ತಮ್ಮ ಸಾಮಾಜಿತ ಕಾದಂಬರಿ ರಚನೆಗೆ ಮೊದಲು ಎಷ್ಟು ಗಂಭೀರಾಧ್ಯಯನ ನಡೆಸುತ್ತಾರೆ ಎಂಬುದನ್ನು ಉದಾಹರಿಸಿದರು.ಇಂಗ್ಲಿಷ್ ಮತ್ತು ಸಂಸ್ಕೃತ:
ಕನ್ನಡಿಗರು ನಾವೇ ನಮ್ಮತನವನ್ನು ಬಿಡುತಿದ್ದೇವೆ, ಆಂಗ್ಲರು ನಮ್ಮನ್ನಾಳುವಾಗ ನಮ್ಮತನವನ್ನು ನಾವು ಬಿಟ್ಟಿರಲಿಲ್ಲ, ಅವರು ಬಿಟ್ಟುಹೋಗಿ ಬಹಳ ವರ್ಷಗಳಾದವು, ಆದರೆ ಅವರ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿರುವ ನಾವು, ನಮ್ಮತನವನ್ನು ಬಿಟ್ಟು ಇಂಗ್ಲಿಷ್ ಭಾಷೆಗೆ ಗೌರವ ಕೊಡುತಿದ್ದೇವೆ, ಕನ್ನಡಕ್ಕೆ ಅನಾದರ ತಿರಸ್ಕಾರ ತೋರುತ್ತಿದ್ದೇವೆ ಎಂದು ಪಾದೆಕಲ್ಲು ಬೇಸರಿಸಿದರು.ಭಾರತದ ಸಾಂಸ್ಕೃತಿಕ ಏಕತೆಯನ್ನು ತಿಳಿಯದ ಕೆಲವರು ಸಂಸ್ಕೃತವು ಕನ್ನಡದ ಮೇಲೆ ದಬ್ಬಾಳಿಕೆ ಮಾಡುತ್ತಿದೆ, ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಸಂಸ್ಕೃತ ಕನ್ನಡದ ಹೆತ್ತತಾಯಿಯಲ್ಲದಿದ್ದರೂ ಸಾಕುತಾಯಿಯಾಗಿದ್ದಾಳೆ. ಸಂಸ್ಕೃತ ಕನ್ನಡಕ್ಕೆ ಪ್ರೇರಕ, ಪೋಷಕ ಮತ್ತು ಗುರುವಾಗಿದೆ ಎಂದು ಬಿ.ಎಂ.ಶ್ರೀಕಂಠಯ್ಯ ಹೇಳಿದ್ದಾರೆ. ಸಂಸ್ಕೃತದ ತಾಯ್ತನದಿಂದ ಹಲವು ಗುಣಾಂಶಗಳನ್ನುಕನ್ನಡ ತಾಯಿ ಸಹಜವಾಗಿಯೇ ಸ್ವೀಕರಿಸಿ ಹೆಮ್ಮೆಪಟ್ಟುಕೊಂಡಿದ್ದಾಳೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷರ ಆಶಯಗಳು:ಮಠದಲ್ಲೋ ಇನ್ನೆಲ್ಲೋ ಇರುವ ಹಸ್ತಿಪ್ರತಿಗಳ ಅಧ್ಯಯನ, ಪುಸ್ತಕ ರೂಪದಲ್ಲಿ ಮುದ್ರಣವಾಗಬೇಕು, ಪ್ರಾದೇಶಿಕ ಇತಿಹಾಸದ ಅಧ್ಯಯನಗಳಾಗಬೇಕು, ಸಾಹಿತ್ಯ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು, ಸಮಾಜಕ್ಕೆ ಒಳಿತು, ಓದುವ, ಬರೆಯುವ, ಸದಭಿಪ್ರಾಯ ಮತ್ತು ಸದ್ವಿಷಯಗಳನ್ನು ಹಂಚುವ ಕೆಲಸ ಸಮಾಜದಲ್ಲಿ ಸದಾ ನಡೆಯುತ್ತಿರಬೇಕು ಎಂದು ಪಾದೆಕಲ್ಲು ಆಶಿಸಿದರು.