ಸಾರಾಂಶ
ಬಾಗಲಕೋಟೆ : ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಕಾರಣದಿಂದಾಗಿ ರಾಷ್ಟ್ರಪತಿಯಿಂದ ಪೌರ ಕಾರ್ಮಿಕರವರೆಗೂ ಎಲ್ಲರಿಗೂ ಒಂದೇ ಮತ ಎನ್ನುವ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಆರ್ಥಿಕ ಅಸಮಾನತೆಯಿಂದಾಗಿ ನಮ್ಮ ಗುಲಾಮಗಿರಿ ಬಂದಿದೆ. ಆರ್ಥಿಕ ಸಮಾನತೆ ಸಿಗದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಬಸವ ಜಯಂತಿ ನಿಮಿತ್ತ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ‘ಶರಣರ ಸಂಸ್ಕೃತಿ ವೈಭವ-2025’ ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಎಂದರೆ ಮಾತು. ಶರಣರ ವಚನಗಳು ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯ ಆಗಿದೆ. ಹಿಂದೆ ಶೂದ್ರರು ಸಂಸ್ಕೃತ ಕಲಿತರೆ ಅವರ ಕಿವಿಗೆ ಕಾದ ಸೀಸ ಹುಯ್ಯುವ ಶಿಕ್ಷೆ ಇತ್ತು. ಇದರಿಂದಲೇ ಭಾರತೀಯ ಶೂದ್ರ ಸಮುದಾಯದವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಶಿಕ್ಷಣ ಇಲ್ಲದ ಕಾರಣಕ್ಕೆ ಅಸಮಾನತೆ ಬೆಳೆಯಿತು ಎಂದು ಸಿಎಂ ವಿಶ್ಲೇಷಿಸಿದರು.
ಇವನಾರವ, ಇವನಾರವ ಎಂದು ವಚನ ಹೇಳೋದು, ಈ ಕಡೆ ಬಂದು ಅವನು ಯಾವ ಜಾತಿ ಎಂದು ಕೇಳೋದು ನಡೆಯುತ್ತಿದೆ. ಹೀಗಾದರೆ, ಬಸವಣ್ಣನವರ ಆಶಯದಂತೆ ಜಾತಿ ನಿರ್ಮೂಲನೆ ಆಗಲ್ಲ. ಜಾತಿಗೆ ಚಲನೆಯಿಲ್ಲ. ವರ್ಗಕ್ಕೆ ಚಲನೆ ಇದೆ. ಎಲ್ಲಾ ಜಾತಿಗಳಿಗೂ ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎಂದು ಹೇಳಿದರು.
ಬಸವಣ್ಣ ಅರ್ಥ ಆಗ್ಬೇಕು ಅಂದರೆ ಮೊದಲು ಕರ್ಮ ಸಿದ್ಧಾಂತ ಮತ್ತು ಹಣೆಬರಹ ಎನ್ನುವ ಮೌಢ್ಯವನ್ನು ಬಿಡುವ ಶಪಥ ಮಾಡಬೇಕು. ಆಚಾರವೇ ಸ್ವರ್ಗ-ಅನಾಚಾರವೇ ನರಕ ಎನ್ನುವ ಬಸವಣ್ಣನವರ ಮೌಲ್ಯ ಪಾಲಿಸುವ ಶಪಥ ಮಾಡಿ ನೋಡೋಣ. ಬಸವಣ್ಣನವರು ಬಹಳ ಸರಳವಾಗಿ ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ. ಇಷ್ಟು ಸರಳ ಮತ್ತು ಸುಂದರವಾದ ಮೌಲ್ಯವೇ ಧರ್ಮ ಎಂದು ಅವರು ವಿವರಿಸಿದರು.
ಗೋರುಚ ಅವರ ಸಮಿತಿ ವರದಿಯಂತೆ ಅನುಭಾವಿಗಳ ಅನುಭವ ಮಂಟಪ ಮಾಡುವ ಕೆಲಸ ಆಗಿದ್ದು ನಮ್ಮಿಂದ. ಇದನ್ನು ಈ ವರ್ಷವೇ ಪೂರ್ಣಗೊಳಿಸುತ್ತೇವೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಾವೇ. ಅಕ್ಕಮಹಾದೇವಿ ವಿಶ್ವವಿದ್ಯಾಲಯ ನಾಮಕಾರಣ ಮಾಡಿದ್ದು ನಾವೇ ಎಂದು ಅವರು ತಿಳಿಸಿದರು.
ಕನಕದಾಸರು, ಬಸವಣ್ಣ ಇಬ್ಬರೂ ಸಂಸ್ಕೃತದಲ್ಲಿ ಏನನ್ನೂ ಹೇಳಲಿಲ್ಲ. ಜನರ ಭಾಷೆಯಲ್ಲಿ, ಜನರಿಗೆ ಅರ್ಥ ಆಗುವ ರೀತಿ ಅತ್ಯಂತ ಸರಳವಾಗಿ ಧರ್ಮ ಮತ್ತು ಮೌಲ್ಯವನ್ನು ಸಾರಿದರು. ಯಾವ ಭಾಷೆಯನ್ನಾದರೂ ಕಲಿಯಿರಿ. ಆದರೆ, ಜನರಾಡುವ ಭಾಷೆಯಲ್ಲಿ ಮಾತನಾಡಿ, ಮೌಲ್ಯಗಳನ್ನು ವಿವರಿಸಿ ಎಂದರು. ಮಾತೃಭಾಷೆ, ತಾಯಿ ಭಾಷೆ, ನಮ್ಮ ನೆಲದ ಭಾಷೆಯಲ್ಲಿ ಬಸವಾದಿ ಶರಣರು ತಮ್ಮ ಅನುಭಾವಗಳನ್ನು ಜನರಿಗೆ ತಿಳಿಸಿದ್ದನ್ನು ಅವರು ವಿವರಿಸಿದರು.
ಮನುವಾದಿಗಳು ಬಸವತತ್ವದ ವಿರೋಧಿಗಳು. ಮನುಷ್ಯ ತತ್ವಕ್ಕೆ ವಿರುದ್ಧ ಇರುವವರು. ಮನುಷ್ಯತ್ವ ಪಾಲಿಸುವವರು ಬಸವವಾದಿಗಳು. ಆಯ್ಕೆ ನಿಮ್ಮದು. ಮನುವಾದಿಗಳು ಬೇಕೋ, ಬಸವವಾದಿಗಳು ಬೇಕೋ ನೀವೇ ನಿರ್ಧರಿಸಿ ಎಂದರು.
ಪ್ರಜಾಪ್ರಭುತ್ವ ಹುಟ್ಟಿದ್ದು ಇಂಗ್ಲೆಂಡ್ ನಲ್ಲಿ ಅಲ್ಲ. 900 ವರ್ಷಗಳ ಹಿಂದೆ ಸ್ಥಾಪಿತವಾದ ಅನುಭವ ಮಂಟಪವೇ ಮೊದಲ ಪ್ರಜಾಪ್ರಭುತ್ವ ಕೇಂದ್ರ. ಆರ್ಥಿಕ ಅಸಮಾನತೆ ಗುಲಾಮಗಿರಿ ಬೆಳೆಸುತ್ತದೆ. ಸ್ವಾಭಿಮಾನ ಅಳಿಸುತ್ತದೆ ಎಂದು ಹೇಳಿದರು.
ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಎಸ್.ಆರ್.ಗುಂಜಾಳ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಿವರಾಜ್ ತಂಗಡಗಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಬಸವಣ್ಣ ಭಾವಚಿತ್ರ ಭವ್ಯ ಮೆರವಣಿಗೆ
ಇದಕ್ಕೂ ಮೊದಲು, ಬಸವ ಜಯಂತಿ ನಿಮಿತ್ತ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಬುಧವಾರ ‘ಶರಣರ ಸಂಸ್ಕೃತಿ ವೈಭವ-2025’ ರ ಅಂಗವಾಗಿ ಬಸವಣ್ಣ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಜಾನಪದ ವಾಹಿನಿ ಕಲಾತಂಡಗಳೊಂದಿಗೆ ನಡೆದ ಭವ್ಯ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.
ಕೂಡಲಸಂಗಮ ದೇವಸ್ಥಾನದ ಆವರಣದಿಂದ ಸಭಾಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.