ಪುಂಡ ಆನೆ ಹಿಡುವ ಕಾರ್ಯಾಚರಣೆ ಸುಖಾಂತ್ಯ

| Published : Aug 04 2025, 11:45 PM IST

ಸಾರಾಂಶ

ನರಸಿಂಹರಾಜಪುರ, ಕಳೆದ 2 ವರ್ಷಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಪುಂಡ ಒಂಟಿ ಸಲಗವನ್ನು ಕೊನೆಗೂ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಸೋಮವಾರ ಸಂಜೆ ಸೆರೆ ಹಿಡಿದಿರುವುದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

- ಲಾರಿ ಮೂಲಕ ಸಕ್ರೆಬೈಲು ಬಿಡಾರಕ್ಕೆ ರವಾನೆ । ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಬೇಟಿ । ಗ್ರಾಮಸ್ಥರ ನಿಟ್ಟುಸಿರು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಳೆದ 2 ವರ್ಷಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಪುಂಡ ಒಂಟಿ ಸಲಗವನ್ನು ಕೊನೆಗೂ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಸೋಮವಾರ ಸಂಜೆ ಸೆರೆ ಹಿಡಿದಿರುವುದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಮಡಬೂರು ಗ್ರಾಮದ ಕುಪ್ಪೂರು ಮೇಲ್ಗಾಗದಲ್ಲಿ ಬರುವ ಮಲ್ಲಂದೂರು ಮೀಸಲು ಅರಣ್ಯದಲ್ಲಿ ಅಡಗಿ ಕುಳಿತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿದ್ದರು.ಸಕ್ರೆಬೈಲು ಆನೆ ಬಿಡಾರದಿಂದ 4 ಸಾಕಿದ ಆನೆ ಹಾಗೂ ಮಡಕೇರಿಯ ದುಬಾರೆ ಆನೆ ಬಿಡಾರದಿಂದ ಬಂದಿದ್ದ 3 ಸಾಕಿದ ಆನೆಗಳ ಸಹಕಾರದಿಂದ ಅರಣ್ಯ ಇಲಾಖೆಯವರು ಸೋಮವಾರ ಬೆಳಿಗ್ಗೆ 7 ಗಂಟೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಮುತ್ತಿನಕೊಪ್ಪ ಎಲಿಫಂಟ್ ಟಾಸ್ಕ್ ಪೋರ್ಸ್, ಆಲ್ದೂರು ಎಲಿಫಂಟ್ ಟಾಸ್ಕ್ ಪೋರ್ಸ್ , ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿಗಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದರು.

ಮಧ್ಯಾಹ್ನ 1.30ರ ಹೊತ್ತಿಗೆ ಒಂಟಿ ಸಲಗ ಇದ್ದ ಜಾಗ ತಲುಪಿದ ಸಾಕಿದ ಆನೆಗಳು ಪುಂಡ ಆನೆಯನ್ನು ಸುತ್ತುವರಿದಿದ್ದವು. ನಂತರ ಪಶು ವೈದ್ಯರ ಮಾರ್ಗದರ್ಶನದಲ್ಲಿ ಮತ್ತು ಬರುವ ಔಷಧಿಯನ್ನು ನುರಿತ ಶಾರ್ಟ್ ಶೂಟರ್ ನಿಂದ ಶೂಟ್ ಮಾಡಿಸಲಾಯಿತು. ಅರೆ ಪ್ರಜ್ಞಾವಸ್ಥೆಗೆ ತಲುಪಿದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸರಪಳಿ, ಹಗ್ಗಗಳಿಂದ ಕಟ್ಟಿ ಹಾಕಿದರು. ಕೆಲವು ಹೊತ್ತಿನ ನಂತರ ಕಾಡಿನಿಂದ ಮಡಬೂರು- ಹಾರೆಕೊಪ್ಪ ರಸ್ತೆಯವರೆಗೆ ಸಾಕಿದ 7 ಆನೆಗಳು, ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ಒಂಟಿ ಸಲಗವನ್ನು ಕರೆತರಲಾಯಿತು. ಕ್ರೇನ್ ಮೂಲಕ ಒಂಟಿ ಸಲಗವನ್ನು ಎತ್ತಿ ಲಾರಿಗೆ ಸ್ಥಳಾಂತರಿಸಲಾಯಿತು.

ಅಲ್ಲಿಂದ ಗಾಂಧಿ ಗ್ರಾಮದ ಮೈದಾನಕ್ಕೆ ತಂದು ಸಾಕಿದ ಆನೆಗಳಿಗೆ ಆಹಾರ ನೀಡಿ ಸ್ವಲ್ಪ ಹೊತ್ತು ವಿಶ್ರಾಂತಿ ನೀಡಿ ನಂತರ ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರಕ್ಕೆ ಒಂಟಿ ಸಲಗವನ್ನು ಕೊಂಡೊಯ್ಯಲಾಗಿದೆ.

-- ಬಾಕ್ಸ್ --

ಆನೆ ಕಾರ್ಯಾಚರಣೆ ಕಣ್ತುಂಬಿಕೊಂಡ ಜನ

ಕಳೆದ 2 ವರ್ಷಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ, ಇಬ್ಬರು ರೈತರನ್ನು ಬಲಿ ಪಡೆದು ಹಾಗೂ ನೂರಾರು ಎಕರೆ ತೋಟ ಗಳನ್ನು ಹಾಳು ಮಾಡಿದ್ದ ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆ ವೀಕ್ಷಿಸಲು ಆಗಮಿಸಿದ್ದ ಕಡಹಿನಬೈಲು, ನೇರ್ಲೆಕೊಪ್ಪ, ಗಾಂಧಿ ಗ್ರಾಮ, ಬಾಳೆ ಮನೆ, ಮಳಲಿ, ಮಡಬೂರು, ಮೆಣಸೂರು, ಗುಡ್ಡದಮನೆ, ದ್ವಾರಮಕ್ಕಿ, ಎಕ್ಕಡಬೈಲು, ಮಡಬೂರು, ಕುಪ್ಪೂರು, ಮುತ್ತಿನಕೊಪ್ಪ, ಶೆಟ್ಟಿಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

-- ಬಾಕ್ಸ್ --

ಸಕ್ರೆ ಬೈಲಿಗೆ ಆನೆ ರವಾನೆ

ಪುಂಡ ಆನೆಯನ್ನು ಹಿಡಿಯಲು ಸಾಕಿದ ಆನೆ ತಂದಿದ್ದ ಮಾವುತರು ಪಾತ್ರವೂ ಹೆಚ್ಚು ಮಹತ್ವವಾಗಿದ್ದು ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಯಾವುದೇ ಅವಘಡವಾಗದಂತೆ ಸಾಕಿದ ಆನೆಗಳನ್ನು ನೋಡಿಕೊಂಡ ಮಾವುತರಿಗೆ ಶಾಸಕ ಟಿ.ಡಿ.ರಾಜೇಗೌಡ ನಗದು ಪುರಸ್ಕಾರ ನೀಡಿ ಗೌರವಿಸಿದರು. ಸಕ್ರೆ ಬೈಲಿನ ಬಿಡಾರದಲ್ಲಿ ಆನೆಗಳ ಸಂಖ್ಯೆ ಕಡಿಮೆ ಇರುವು ದರಿಂದ ಈ ಪುಂಡ ಆನೆಯನ್ನು ಸಕ್ರೆ ಬೈಲಿಗೆ ನೀಡುವಂತೆ ಅಲ್ಲಿನ ಮಾವುತರು ಶಾಸಕ ಟಿ.ಡಿ.ರಾಜೇಗೌಡರಿಗೆ ಮನವಿ ಮಾಡಿದರು.

-- ಬಾಕ್ಸ್ --

ಅಧಿಕಾರಿಗಳಿಗೆ ಧನ್ಯವಾದ: ಟಿ.ಡಿ.ರಾಜೇಗೌಡ

ಕಳೆದ 2 ವರ್ಷದಿಂದ ಕಡಹಿನಬೈಲು, ಸೀತೂರು, ಮುತ್ತಿನಕೊಪ್ಪ, ಮೆಣಸೂರು ಗ್ರಾಮ ಪಂಚಾಯಿತಿ ವಿವಿಧ ಗ್ರಾಮಗಳಲ್ಲಿ ರೈತರ ಬೆಳೆದಿದ್ದ ಬೆಳೆಯನ್ನು ತಿಂದು ಇಬ್ಬರು ರೈತರನ್ನು ಸಾಯಿಸಿದ್ದ ಒಂಟಿ ಸಲಗವನ್ನು ಕೊನೆಗೂ ಸೆರೆ ಹಿಡಿಯಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೋಮವಾರ ಒಂಟಿ ಸಲಗ ಹಿಡಿಯುವ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು, ರೈತ ಸಂಘಗಳು ಒಂಟಿ ಆನೆ ಹಿಡಿಯುವಂತೆ ಮನವಿ ಮಾಡಿದ್ದರು. ನಾನು ಕೂಡಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆ ಇವರೊಂದಿಗೆ ಚರ್ಚೆ ನಡೆಸಿ ಈ ಭಾಗದ ರೈತರ ಸಮಸ್ಯೆ, ಗಂಭೀರತೆ ವಿವರಿಸಿದ್ದೆ.ಆನೆಯನ್ನು ಹಿಡಿಯು ವುದು ಸುಲಭದ ಮಾತಲ್ಲ. ಒಂದು ಆನೆಯನ್ನು ಹಿಡಿಯಲು ಲಕ್ಷಾಂತರ ರು. ಖರ್ಚು ಬರಲಿದೆ. ರೈತರು ಆನೆ ಹಿಡಿಯವ ಕಾರ್ಯಾಚರಣೆಯಲ್ಲಿ ಶಾಂತಿಯಿಂದ ಸಹಕಾರ ನೀಡಿದ್ದಾರೆ. ಕೊಪ್ಪ ಡಿಎಫ್.ಓ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.