ಅಸ್ಪೃಶ್ಯತೆ ಭಯಯಿಂದ ಶೋಷಿತರು ಹೋರಬರಬೇಕು

| Published : Feb 16 2025, 01:46 AM IST

ಸಾರಾಂಶ

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮನಸ್ಸು ಪ್ರತಿಯೊಬ್ಬರಲ್ಲೂ ಇರಬೇಕು. ಅದು ಬಿಟ್ಟು ಒಬ್ಬರನ್ನು ಇನ್ನೊಬ್ಬರು ತುಳಿಯುವ ಕೆಲಸ ಆಗಬಾರದು.ಅನಿಷ್ಠ ಪದ್ದತಿಗಳನ್ನು ದೂರ ಮಾಡಿ, ಎಲ್ಲರು ಒಂದೇ ಎಂಬ ಮನೋಭಾವ ಮೂಡಬೇಕು, ಸಮಾಜ ಸುಧಾರಣೆ ಕಾರ್ಯ ಮಾಡುವುದು ಸುಲಭವಲ್ಲ. ಬಹಳಷ್ಟು ಸಂಕಷ್ಟ ಎದುರಾಗುತ್ತವೆ.

ಕನ್ನಡಪ್ರಭ ವಾರ್ತೆ ಕೋಲಾರಅಸ್ಪೃಶ್ಯತೆ, ಮೌಢ್ಯತೆ ಬಗ್ಗೆ ಶೋಷಿತ ಸಮುದಾಯಗಳಲ್ಲಿ ಇರುವ ಭಯ ಹೋದಾಗ ಮಾತ್ರ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅರಿವು ಭಾರತ ವತಿಯಿಂದ ಸಮಾಜ ಸುಧಾರಣೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಒಳ-ಹೊರಗು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಸಮಾಜ ಸುಧಾರಣೆ ಸುಲಭವಲ್ಲ

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮನಸ್ಸು ಪ್ರತಿಯೊಬ್ಬರಲ್ಲೂ ಇರಬೇಕು. ಅದು ಬಿಟ್ಟು ಒಬ್ಬರನ್ನು ಇನ್ನೊಬ್ಬರು ತುಳಿಯುವ ಕೆಲಸ ಆಗಬಾರದು.ಅನಿಷ್ಠ ಪದ್ದತಿಗಳನ್ನು ದೂರ ಮಾಡಿ, ಎಲ್ಲರು ಒಂದೇ ಎಂಬ ಮನೋಭಾವ ಮೂಡಬೇಕು, ಸಮಾಜ ಸುಧಾರಣೆ ಕಾರ್ಯ ಮಾಡುವುದು ಸುಲಭವಲ್ಲ. ಬಹಳಷ್ಟು ಸಂಕಷ್ಟ ಎದುರಾಗುತ್ತವೆ ಎಂದರು. ಸಂವಿಧಾನ ರಚನೆಯಿಂದ ಸಾಕಷ್ಟು ಮಂದಿ ಎಚ್ಚರಗೊಂಡು ಜೀವನ ನಡೆಸುತ್ತಿದ್ದಾರೆ. ಶೋಷಿತ ಸಮುದಾಯಗಳಲ್ಲಿ ಇರುವ ಭಯ ಹೋಗಬೇಕು, ಅದ್ದರಿಂದಲೇ ನಾನು ನಾಲ್ಕು ಬಾರಿ ಶಾಸಕನಾದರು ರಾಹುಕಾಲದಲ್ಲೆ ನಾಮಪತ್ರ ಸಲ್ಲಿಸಿದೆ. ಅಮಾವಾಸ್ಯೆ ದಿನ ಗೃಹ ಪ್ರವೇಶ ಮಾಡಿದೆ, ಬದಲಾವಣೆ ಕಾಣಲು ಮಾನವ ಬಂಧುತ್ವ ವೇದಿಕೆ ಕಟ್ಟಲಾಗಿದೆ ಎಂದು ಹೇಳಿದರು. ಮನಪರಿವರ್ತನೆ ಮಾಡಬೇಕು

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಅಸ್ಪೃಶ್ಯತೆ, ಮೌಢ್ಯಚಾರಕ್ಕೆ ಸಂಬಂಧವಿದ್ದು, ಇದನೆಲ್ಲ ಸುಧಾರಣೆ ಕಾಣಲು ಸಾಧ್ಯವಿಲ್ಲ. ಪ್ರೀತಿಯ ಮೂಲಕ ಮನ ಪರಿವರ್ತನೆ ಮಾಡಿ ಬದಲಾವಣೆ ಕಾಣಬೇಕು ಎಂದು ಎಚ್ಚರಿಸಿದರು.ಜಿಲ್ಲೆಯಲ್ಲಿ ೧೦ ವರ್ಷಗಳ ಹಿಂದೆ ಗೃಹ ಪ್ರವೇಶ ಕಾರ್ಯಕ್ರಮ ಶುರುವಾಗಿ ಅದು ಈಗ ಅರಿವು ಭಾರತ ಸಂಘಟನೆಯಾಗಿ ರೂಪತಾಳಿ ಚಳವಳಿಯಾಗಿ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಯಾರು ನಿಲ್ಲಸಲಾಗದು. ಮಾನವೀಯ ಪರಿವರ್ತನೆಯು ರಾಜ್ಯವಲ್ಲದೆ ದೇಶಾದ್ಯಂತ ಆಗುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು. ಸಂವಿಧಾನ ಉಳಿಸಿಕೊಳ್ಳಬೇಕು

ಈಗಿನ ಸಂದರ್ಭದಲ್ಲಿ ಸಂವಿಧಾನಕ್ಕೆ ಧಕ್ಕೆ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಸ್ಪೃಶ್ಯತೆ ಕಿತ್ತುಹಾಕುವ ಬಗ್ಗೆ ಧ್ವನಿ ಕೇಳುತ್ತಿಲ್ಲ, ಸಂವಿಧಾನವನ್ನು ಉಳಿಸಿಕೊಂಡಾಗ ಮಾತ್ರ ಅಸ್ಪೃಶ್ಯತೆ ನಿವಾರಣೆ, ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿ, ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಎಚ್ಚರಿಸಿದರು.ಅಸ್ಪೃಶ್ಯತೆಗೆ ಅನೇಕ ಸಕಾರಣಗಳಿದ್ದು, ಮೌಢ್ಯಚಾರ ಪ್ರಮುಖ ಕಾರಣವಾಗಿದೆ, ಮೂಲಭೂತ ತತ್ವ ಅಡಿಯಲ್ಲಿ ಹಕ್ಕುಗಳ ಜತೆಗೆ ಕರ್ತವ್ಯದ ಬಗ್ಗೆಯೂ ಚರ್ಚೆ ಆಗಬೇಕು. ನಂಬಿಕೆ, ಮೂಡನಂಬಿಕೆಗಳು ಬೇರೆ, ಕೆಲ ನಂಬಿಕೆಗಳು ಸಂತ್ವಾನ, ಸಮಾಧಾನ ಹೇಳುತ್ತವೆ. ಯಾವುದು ಧಮನಕಾರಿಯೋ, ಘನತೆಗೆ ವಿರುದ್ಧವೋ ಅದು ಮೂಡನಂಬಿಕೆಗಳು. ಮೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಅಸ್ಪೃಶ್ಯತೆ ಸಾಮಾಜಿಕ ಪಿಡುಗುಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ಅಸ್ಪೃಶ್ಯತೆ ಸ್ವಾತಂತ್ರ್ಯ ಪೂರ್ವದಿಂದಲೂ ಆಚರಣೆಯಲ್ಲಿದ್ದು, ಇದೊಂದು ಸಾಮಾಜಿಕ ಪಿಡುಗು ಆಗಿದೆ. ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದನ್ನು ಕಾನೂನಿನಿಂದ ನಿಮೂರ್ಲನೆ ಮಾಡಲು ಸಾಧ್ಯವಿಲ್ಲ, ಮಾನವೀಯ ಪರಿವರ್ತನೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಅಸ್ಪೃಶ್ಯತೆ ನಿಮೂರ್ಲನೆ ಕಾರ್ಯಕ್ರಮ ಮನೆಮನೆಯ ಕಾರ್ಯಕ್ರಮ ಚಳವಳಿಯಾಗಿ ರೂಪುಗೊಂಡಿದೆ. ಇಂತಹ ಸಮಾಜ ಮುಖಿ ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಸಂವಿಧಾನ ಇಲ್ಲದಿದ್ದರೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.ಎಲ್ಲ ವರ್ಗಗಳೂ ಇರುವ ತಂಡ

ಅರಿವು ಭಾರತ ಮುಖ್ಯಸ್ಥ ಡಾ.ಶಿವಪ್ಪ ಅರಿವು ಮಾತನಾಡಿ, ತಂಡದಲ್ಲಿ ಎಲ್ಲಾ ಸಮುದಾಯದ ಮುಖಂಡರು ಇದ್ದು, ಸಮಾನತೆಯನ್ನು ಸಾರುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಪತ್ರಕರ್ತ ಕೆ.ನರಸಿಂಹಮೂರ್ತಿ, ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಟಿ.ವಿಜಯಕುಮಾರ್ ಮತ್ತಿತರರು ಇದ್ದರು.