ಸೌಲಭ್ಯ ಕಲ್ಪಿಸುವಲ್ಲಿ ಸಂಸ್ಥೆಗೆ ಹಿಂಜರಿಕೆಯಿಲ್ಲ: ಜಿ.ಟಿ. ಹೆಗಡೆ ತಟ್ಟೀಸರ

| Published : Sep 05 2025, 01:00 AM IST

ಸೌಲಭ್ಯ ಕಲ್ಪಿಸುವಲ್ಲಿ ಸಂಸ್ಥೆಗೆ ಹಿಂಜರಿಕೆಯಿಲ್ಲ: ಜಿ.ಟಿ. ಹೆಗಡೆ ತಟ್ಟೀಸರ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಯುತ ದರ, ತೂಕ ಒದಗಿಸುವುದಕ್ಕೆ ಸಂಘ ಕಟಿಬದ್ಧವಾಗಿದೆ.

ಶಿರಸಿ: ಸದಸ್ಯರಿಗೆ ನ್ಯಾಯ ಒದಗಿಸುವಲ್ಲಿ, ಸೌಲಭ್ಯ ಕಲ್ಪಿಸುವಲ್ಲಿ ಸಂಸ್ಥೆಗೆ ಹಿಂಜರಿಕೆಯಿಲ್ಲ. ನ್ಯಾಯಯುತ ದರ, ತೂಕ ಒದಗಿಸುವುದಕ್ಕೆ ಸಂಘ ಕಟಿಬದ್ಧವಾಗಿದೆ. ಈ ಬಾರಿ ಲಕ್ಷಕ್ಕೂ ಹೆಚ್ಚು ಕ್ವಿಂಟಲ್ ಮಹಸೂಲುಗಳು ಮಾರಾಟವಾಗಿ ದಾಖಲೆಯಾಗಿದೆ. ರೈತರಿಗೆ ಹೆಚ್ಚಿನ ದರ ಸಿಗಲಿ ಎಂಬ ಕಾರಣಕ್ಕೆ ಸಂಸ್ಥೆ ದಲಾಲಿಯ ಜತೆಗೆ ನೇರ ಖರೀದಿ ಮಾಡುತ್ತಿದೆ ಎಂದು ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಹೇಳಿದರು.

ಅವರು ಗುರುವಾರ ನಗರದ ಟಿಎಂಎಸ್ ಸಭಾಭವನದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.

ರೈತರು ಮಹಸೂಲುಗಳ ಮಾರಾಟ ಹೆಚ್ಚಾದ್ದರಿಂದ ಅವುಗಳ ದಾಸ್ತಾನು ಹಾಗೂ ವಿಕ್ರಿಗೆ ಜಾಗ ಸಾಲದಾಗಿದೆ. ಹೀಗಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಸುಮಾರು ಅರ್ಧಭಾಗ ಕಟ್ಟಡ ಮುಗಿದಿದೆ. ಮುಂದಿನ ಹಂಗಾಮಿನಲ್ಲಿ ಇದು ಬಳಕೆಗೆ ಸಿಗಬಹುದು. ಈ ಸೌಲಭ್ಯ ದೊರೆಯುವುದರಿಂದ ಇನ್ನು ನಾಲ್ಕೈದು ವರ್ಷ ಗೋದಾಮಿನ ಸಮಸ್ಯೆ ಆಗುವುದಿಲ್ಲ ಎಂದರು.

ಅಡಕೆ ಸಿಪ್ಪೆ ಬಳಕೆ ಹೇಗೆ ಮಾಡಬಹುದು ಎಂಬುದರ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ್ದೇವೆ. ಗೊಬ್ಬರ ತಯಾರಿಕೆಗೆ ಯೋಚಿಸಿದ್ದೇವು. ಆದರೆ ಸಿಪ್ಪೆ ಕೊಳೆಯದೇ ಇರುವುದರಿಂದ ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯಗಳಿದೆ. ಎರೆಗೊಬ್ಬರ ತಯಾರಿಕೆ ಮಾಡಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಯೋಚಿಸಿದ್ದೇವೆ. ಅಡಕೆ ಸಿಪ್ಪೆ ಬಳಕೆ ಬಗ್ಗೆ ಏನೆಲ್ಲ ಪ್ರಯೋಗ ಮಾಡಬಹುದು ಅದನ್ನು ಮಾಡಿ ರೈತರಿಗೆ ನೆರವಾಗುವ ಬಗ್ಗೆ ಪ್ರಯತ್ನ ಮಾಡುತ್ತೇವೆ. ಈ ಬಾರಿ ₹೧೦ ಲಕ್ಷಗಿಂತ ಹೆಚ್ಚಿನ ತೋಟಗಾರಿಕಾ ಸಸಿಗಳ ಮಾರಾಟ ಮಾಡಿದ್ದೇವೆ. ಈ ಮೂಲಕ ಉಪಬೆಳೆಗೆ ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.

ಮುಖ್ಯ ಕಾರ್ಯ ನಿರ್ವಾಹಕ ವಿನಯ ಹೆಗಡೆ ಮಂಡೆಮನೆ ಮಾತನಾಡಿ, ಸಂಸ್ಥೆಯ ಸ್ವಂತ ಬಂಡವಾಳ ₹೫೭.೫೨ಕೋಟಿ ಹೆಚ್ಚಾಗಿದೆ. ಸದಸ್ಯರ ಠೇವು ₹೧೦೧ ಕೋಟಿ ಆಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ₹೧೩.೨೦ಕೋಟಿ ಹೆಚ್ಚಳವಾಗಿದೆ ಎಂದರು.

ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ನಿರ್ದೇಶಕರಾದ ಜಿ.ಎಂ. ಹೆಗಡೆ ಹುಳಗೋಳ, ಎಂ.ಪಿ. ಹೆಗಡೆ ಕೊಟ್ಟೆಗದ್ದೆ, ಎನ್.ಡಿ. ಹೆಗಡೆ ಹಾಲೇರಿಕೊಪ್ಪ, ರವಿ ಹೆಗಡೆ ಹುಳಗೋಳ, ಚಾರುಚಂದ್ರ ಶಾಸ್ತ್ರಿ, ಮಂಜುನಾಥ ಭಟ್ಟ ಬಿಸ್ಲಕೊಪ್ಪ, ರಾಜಶೇಖರ ಗೌಡ, ರತ್ನಾಕರ ನಾಯ್ಕ, ಸೌಭಾಗ್ಯ ಹೆಗಡೆ, ಇಂದಿರಾ ಹೆಗಡೆ ಇದ್ದರು. ವ್ಯರ್ಥವಾಗುತ್ತಿರುವ ಅಡಕೆ ಸಿಪ್ಪೆಯನ್ನು ಯಾವುದಾದರೂ ರೀತಿಯಲ್ಲಿ ಬಳಕೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ.