ಸರ್ಕಾರದ ಮಟ್ಟದಲ್ಲಿ ಅನುದಾನ ತರುವಾಗ ಹೆಚ್ಚಿನ ಶ್ರಮ ಹಾಕಬೇಕು.
ಮಾಗೋಡು ಜಲಪಾತ ರಸ್ತೆಯ ಸೇತುವೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಕ್ಷೇತ್ರದ ಸರ್ವಾಂಗೀಣ ಪ್ರಗತಿ ನಮ್ಮ ಜವಾಬ್ದಾರಿ. ವಿಸ್ತಾರವಾದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಒಂದೇ ಬಾರಿ ಮುಗಿಯುವುದಿಲ್ಲ. ಹಂತ ಹಂತವಾಗಿ ಅನುದಾನ ನೀಡಬೇಕಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಅನುದಾನ ತರುವಾಗ ಹೆಚ್ಚಿನ ಶ್ರಮ ಹಾಕಬೇಕು. ನಮ್ಮ ಶ್ರಮದ ಬಗ್ಗೆ ಜನರಲ್ಲಿ ಕೃತಜ್ಞತಾಭಾವ ಇಲ್ಲದೇ ಹೋದರೆ ಸಹಜವಾಗಿ ಬೇಸರ ಉಂಟಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಮೊಟ್ಟೆಗದ್ದೆ ಬಳಿ ಮಾಗೋಡ ಜಲಪಾತ ರಸ್ತೆಯಲ್ಲಿ ₹೬೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆ ಉದ್ಘಾಟಿಸಿ ಮಾತನಾಡುತ್ತಿದ್ದರು.ಮಾಗೋಡ ಜಲಪಾತ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿಗೆ ಮೂಲ ಸೌಕರ್ಯ ಕಲ್ಪಿಸುವುದು ಪ್ರವಾಸೋದ್ಯಮ ದೃಷ್ಟಿಯಿಂದ ತೀರಾ ಅಗತ್ಯ. ಮೊಟ್ಟೆಗದ್ದೆಯಿಂದ ಮಾಗೋಡ ಜಲಪಾತದವರೆಗೆ ಹಾಗೂ ಹೆಬ್ಬಾರಮನೆಯಿಂದ ಜೇನುಕಲ್ಲುಗುಡ್ಡದವರೆಗಿನ ರಸ್ತೆ ದುರಸ್ತಿಗೆ ಅನುದಾನವನ್ನು ಶೀಘ್ರವಾಗಿ ನೀಡುವ ಭರವಸೆ ನೀಡಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ ಮಾತನಾಡಿ, ಎರಡು ವರ್ಷಗಳ ಹಿಂದೆ ಜೋರಾದ ಮಳೆಯಿಂದಾಗಿ ಈ ಭಾಗದಲ್ಲಿ ಸಿಡಿ, ಪೈಪ್ ಲೈನ್ ಕೊಚ್ಚಿಕೊಂಡು ಹೋಗಿತ್ತು. ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು ನೂತನ ಸೇತುವೆಗೆ ಅನುದಾನ ನೀಡಿ, ಪ್ರವಾಸಿಗರ ಓಡಾಟಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎಂದರು.ಹಿರಿಯರಾದ ಸುಬ್ರಾಯ ಭಾಗ್ವತ ಹೆಬ್ಬಾರಮನೆ ಮಾತನಾಡಿದರು.
ಉತ್ತಮ ಸೇತುವೆ ನಿರ್ಮಾಣಕ್ಕೆ ಕಾರಣರಾದ ಶಾಸಕರನ್ನು ಗ್ರಾಮಸ್ಥರು ಗೌರವಿಸಿದರು.ಹಿರಿಯ ವೈದಿಕ ನಾರಾಯಣ ಭಟ್ಟ ಮೊಟ್ಟೆಗದ್ದೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಪ್ರಮುಖರಾದ ಜಿ.ಎಸ್. ಭಟ್ಟ, ನಾಗೇಶ ಹೆಗಡೆ ಬಾಳೆಗದ್ದೆ, ಗುತ್ತಿಗೆದಾರ ಕುಪ್ಪಯ್ಯ ಪೂಜಾರಿ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವೆಂಕಟರಮಣ ಭಟ್ಟ ಕುಂಭತ್ತಿ ಸ್ವಾಗತಿಸಿದರು. ಮಂಜುನಾಥ ಭಟ್ಟ ಮೊಟ್ಟೆಗದ್ದೆ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್. ಭಟ್ಟ ನಿರ್ವಹಿಸಿದರು.