ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಬೆಳ್ಳಿ ಆಭರಣ ತಯಾರಿಸುವ ಫ್ಯಾಕ್ಟರಿಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣವನ್ನು ಭೇದಿಸಿರುವ ಪೊಲೀಸರು, 6 ಮಂದಿ ಅಂತರ ರಾಜ್ಯ ಡಕಾಯಿತರನ್ನು ಬಂಧಿಸಿದ್ದಾರೆ.ಗುಜರಾತ್ ರಾಜ್ಯದ ಪರಮೇಶ್ ಕುಮಾರ್ ಮಾಳಿ, ಕಿಶೋರ್ ಅ. ಕೆ ಜೈನ್, ದಿಲೀಪ್ ಕುಮಾರ್ ಪುರೋಹಿತ್, ಅರವಿಂದ್ ರಜಪೂತ್, ಹರೇಶ್ ಪುರೋಹಿತ್ ಮತ್ತು ಮಧ್ಯಪ್ರದೇಶದ ರವಿ ಅ. ಅರವಿಂದ್ ಸಿಂಗ್ ಠಾಕೂರ್ ಬಂಧಿತ ಆರೋಪಿಗಳು. ಮಧ್ಯಪ್ರದೇಶದ ಆದಿ ತೋಮರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.ಬಂಧಿತ ಆರೋಪಿಗಳಿಂದ 18.80 ಲಕ್ಷ ಮೌಲ್ಯದ 16 ಕೆ.ಜಿ. ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ 2 ಕಾರು, 1 ಪಿಸ್ತೂಲು, 9 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗುಜರಾತಿ ನಟೋರಿಯಸ್ ಗ್ಯಾಂಗ್ಕಳೆದ ಜುಲೈ 28 ರಂದು ರಾಕೇಶ್ ಕುಮಾರ್ ಅವರಿಗೆ ಸೇರಿದ ಬೆಳ್ಳಿ ಆಭರಣಗಳ ತಯಾರಿಸುವ ಫ್ಯಾಕ್ಟರಿಯಲ್ಲಿ ನಡೆದ ಪ್ರಕರಣವನ್ನು ಆರಂಭದಲ್ಲಿ ದರೋಡೆ ಎಂದು ತಿಳಿಯಲಾಗಿತ್ತು. ಈ ಪ್ರಕರಣದಲ್ಲಿ 7 ಜನ ಭಾಗಿಯಾಗಿರುವುದು ತಿಳಿದ ಡಕಾಯಿತಿ ಪ್ರಕರಣ ದಾಖಲಿಸಲಾಗಿದೆ. ಡಕಾಯಿತರು ಅಂದು ರಾತ್ರಿ 1.45 ರಿಂದ ಬೆಳಗ್ಗಿನ ಜಾವ 4.50 ರವರೆಗೂ 350 ಕೆ.ಜಿ. ಬೆಳ್ಳಿ ಇದ್ದ ಲಾಕರ್ ಒಡೆಯಲು ಪ್ರಯತ್ನಿಸಿ ವಿಫಲರಾಗಿದ್ದರು. ಬಳಿಕ ಕೈಗೆ ಸಿಕ್ಕ ಬೆಳ್ಳಿ ಪದಾರ್ಥಗಳೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಗಳ ಪತ್ತೆಗಾಗಿ ರಚಿಸಿದ್ದ ವಿಶೇಷ ತಂಡವು ವಿವಿಧ ವೈಜ್ಞಾನಿಕ ಸುಳಿವುಗಳ ಆಧಾರದ ಮೇರೆಗೆ ಇಬ್ಬರು ಆರೋಪಿಗಳನ್ನು ಗುಜರಾತ್ ರಾಜ್ಯದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿತು. ಅವರು ನೀಡಿದ ಮಾಹಿತಿ ಮೇರೆಗೆ ಮೈಸೂರಿನಲ್ಲಿ ಒಬ್ಬ ಹಾಗೂ ಬೆಂಗಳೂರಿನಲ್ಲಿ 3 ಆರೋಪಿಗಳನ್ನು ಬಂಧಿಸಿದ್ದು, ಈವರೆಗೆ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಗುಜರಾತಿ 5 ಹಾಗೂ ಮಧ್ಯಪ್ರದೇಶದ ಇಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ವಿವರಿಸಿದರು. ಕಾರು ಚಾಲಕನೇ ಮಾಸ್ಟರ್ ಮೈಂಡ್!ಈ ಪ್ರಕರಣದಲ್ಲಿ ಫ್ಯಾಕ್ಟರಿಯ ಮಾಲೀಕನ ಕಾರು ಚಾಲಕನಾದ ಪರಮೇಶ್ ಕುಮಾರ್ ಮಾಳಿ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತ ಗುಜರಾತಿನ ಪ್ರಮುಖ ನಟೋರಿಯಸ್ ದರೋಡೆಕೋರನಾಗಿದ್ದ ಕಿಶೋರ್ ನನ್ನು ಇನ್ಸ್ಟಾಗ್ರಾಂ ಮೂಲಕ ಸಂಪರ್ಕಿಸಿ, ತನಗೆ 50 ಲಕ್ಷವರೆಗೂ ಸಾಲವಾಗಿದೆ. ಅದನ್ನು ತೀರಿಸಲು ಬೆಳ್ಳಿ ತಯಾರಿಸುವ ಫ್ಯಾಕ್ಟರಿಯಲ್ಲಿ ದೋಚಲು ಸಂಚು ರೂಪಿಸಿದ್ದನು. ಈ ಇಬ್ಬರು ಉಳಿದ ಆರೋಪಿಗಳೊಂದಿಗೆ ಸೇರಿಕೊಂಡು ಫ್ಯಾಕ್ಟರಿಯಲ್ಲಿ ಕೃತ್ಯ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ನಟೋರಿಯಸ್ ಕಿಶೋರ್ ವಿರುದ್ಧ ಗುಜರಾತ್ ರಾಜ್ಯದಲ್ಲಿ 30 ಹೆಚ್ಚು ದರೋಡೆ, ಸುಲಿಗೆ ಹಾಗೂ ಅಕ್ರಮ ಆಯುಧ ಸಂಗ್ರಹ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.ವಿಜಯನಗರದ ಉಪ ವಿಭಾಗದ ಎಸಿಪಿ ಪಿ. ರವಿಪ್ರಸಾದ್ ನೇತೃತ್ವದಲ್ಲಿ ಹೆಬ್ಬಾಳ್ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್, ಎಸ್ಐಗಳಾದ ಪ್ರವೀಣ್ ಕುಮಾರ್, ಕೀರ್ತಿ ಮತ್ತು ಸಿಬ್ಬಂದಿ ಲಿಖಿತ್, ಕಾಮಣ್ಣ, ತಿಲಕ್, ಅಣ್ಣಪ್ಪ ದೇವಾಡಿಗ, ಮೋಹನ್, ಸುಭಾನ್ ಬಾಲಧಾರ್, ಮಧು, ಆನಂದ್, ಬಸವರಾಜು, ಶ್ರೀಶೈಲ ಹುಗ್ಗಿ ಈ ಪತ್ತೆ ಮಾಡಿದ್ದಾರೆ.ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್ ಇದ್ದರು.-----ಬಾಕ್ಸ್... ಒಂದೇ ತಿಂಗಳಲ್ಲಿ 21 ಸ್ವತ್ತು ಕಳುವು ಪ್ರಕರಣಗಳ ಪತ್ತೆಕಳೆದ ಒಂದು ತಿಂಗಳ ಅವಧಿಯಲ್ಲಿ 21 ಸ್ವತ್ತು ಕಳುವು ಪ್ರಕರಣಗಳ ಪತ್ತೆ ಮಾಡಿ, 22 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.5 ಕನ್ನ ಕಳುವು, 1 ಸರಗಳ್ಳತನ, 1 ಸುಲಿಗೆ, 1 ಮನೆ ಕಳ್ಳತನ, 1 ಮನೆ ಕೆಲಸದವರಿಂದ ಕಳ್ಳತನ, 9 ವಾಹನ ಕಳ್ಳತನ, 3 ಸಾಮಾನ್ಯ ಕಳ್ಳತನ ಸೇರಿದಂತೆ ಒಟ್ಟು 21 ಸ್ವತ್ತು ಕಳುವು ಪ್ರಕರಣಗಳನ್ನು ಪತ್ತೆ ಮಾಡಿದ್ದು, ಈ ಪ್ರಕರಣಗಳಿಂದ 47.57 ಲಕ್ಷ ಮೌಲ್ಯದ ಒಟ್ಟು 442 ಗ್ರಾಂ ಚಿನ್ನಾಭರಣ, 10 ದ್ವಿಚಕ್ರವಾಹನಗಳು, 8.50 ಲಕ್ಷ ಹಣ, 1 ಎಲ್‌ಇಡಿ ಟಿವಿ, 8 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.----ಬಾಕ್ಸ್... ಮಾದಕವಸ್ತು ಹೊಂದಿದ್ದ 24 ಆರೋಪಿಗಳ ಬಂಧನನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ದಾಳಿಗಳನ್ನು ಕೈಗೊಂಡು ಮಾದಕ ಪದಾರ್ಥಗಳನ್ನು ಹೊಂದಿದ್ದ ಮೇರೆಗೆ ಒಟ್ಟು 23 ಪ್ರಕರಣಗಳನ್ನು ದಾಖಲಿಸಿ 24 ಆರೋಪಿಗಳನ್ನು ಬಂಧಿಸಲಾಗಿದ್ದು, 13 ಕೆ.ಜಿ. 930 ಗ್ರಾಂ ಗಾಂಜಾ, 149 ಗ್ರಾಂ 53 ಮಿ.ಗ್ರಾಂ ಸಿಂಥೆಟಿಕಜ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.ಅಲ್ಲದೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ನಗರಾದ್ಯಂತ ಪಾರ್ಕ್, ಪಿಜಿಗಳು. ಲಾಡ್ಜ್ ಗಳು ಮತ್ತು ಇತರೇ ಸಾರ್ವಜನಿಕರ ಸ್ಥಳಗಳಲ್ಲಿ ವಿಶೇಷ ತಪಾಸಣೆ ನಡೆಸಿ, 2400 ಅಧಿಕ ಅನುಮಾನಿತ ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಮಾದಕ ಪದಾರ್ಥ ಸೇವನೆ ದೃಢಗೊಂಡ 316 ಆರೋಪಿಗಳ ವಿರುದ್ಧ ಒಟ್ಟು 303 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.