ಸಾರಾಂಶ
ಬಿಸಿಲನ ಭೀಕರತೆಯಿಂದ ಅಂತರ್ಜಲವೂ ಕುಸಿತಗೊಂಡಿದ್ದು ಅಲ್ಪಸ್ವಲ್ಪ ನೀರಿನಲ್ಲಿಯೇ ಬೆಳೆ ಬೆಳೆದಿದ್ದು ರೈತರು ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.
ಶಿರಹಟ್ಟಿ:
ತಾಲೂಕಿನ ವಡವಿ-ಹೊಸೂರ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ರಭಸದ ಮಳೆ ಹಾಗೂ ಬಿರುಗಾಳಿಗೆ 5 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ಕಳೆದೆರಡು ತಿಂಗಳಿಂದ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ಕೇವಲ 15ರಿಂದ 20 ನಿಮಿಷದಲ್ಲಿ ಸುರಿದ 38 ಮೀಲಿ ಮೀಟರ್ ಮಳೆ ತಂಪೆರದಿದೆ.₹ ೪ ಲಕ್ಷ ಬೆಳೆ ಹಾನಿ:
ವಡವಿ ಗ್ರಾಮದ ಹನರಡ್ಡಿ ಆನ್ವೇರಿ ಎಂಬುವರು ೫ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನೆಲಕಚ್ಚಿ ಸಂಪೂರ್ಣ ನಾಶವಾಗಿದೆ. ಕಟಾವಿಗೆ ಬಂದಿದ್ದ ಬೆಳೆ ಕ್ಷಣಾರ್ಧದಲ್ಲಿ ನೆಲಕಚ್ಚಿರುವುದನ್ನು ಕಂಡು ರೈತ ಕಂಗಾಲಾಗಿದ್ದಾರೆ. ಮಹಾರಾಷ್ಟ್ರದ ಜಲಗಾಂದಿಂದ ಪಪ್ಪಾಯಿ ಸಸಿ ತರಿಸಿದ್ದ ರೈತ 5 ಎಕರೆ ಪ್ರದೇಶದಲ್ಲಿ ೨೫೦೦ ಪಪ್ಪಾಯಿ ಸಸಿ ನೆಟ್ಟಿದ್ದರು. ಪ್ರತಿ ಗಿಡ ಬೆಳೆಯಲು ಈ ವರೆಗೆ ₹ 230 ಖರ್ಚು ಮಾಡಿದ್ದರು. ಉತ್ತಮ ಇಳುವರಿಯ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಸದ್ಯ 10ರಿಂದ 15 ಟನ್ ಪಪ್ಪಾಯಿ ಬೆಳೆ ಮಾರಾಟಕ್ಕೆ ಬಂದಿತ್ತು. ಆದರೆ, ಮಳೆ-ಬಿರುಗಾಳಿಯಿಂದ ಎಲ್ಲವೂ ಮಣ್ಣುಪಾಲಾಯಿತು ಎಂದು ಹನರಡ್ಡಿ ಕಣ್ಣೀರು ಸುರಿಸಿದರು.ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಹನರಡ್ಡಿ, ಹಗಲು-ರಾತ್ರಿ ಎನ್ನದೆ ಕಷ್ಟ ಪಟ್ಟು ಬೆಳೆ ಬೆಳೆದಿದ್ದೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಬೆಳೆ ಬೆಳೆಯಲು ತೋಟಗಾರಿಕೆ, ಕೃಷಿ ಇಲಾಖೆಯಿಂದ ಯಾವುದೇ ಸಹಾಯಧನ ಪಡೆಯದೇ ಸ್ವಂತ ಖರ್ಚಿನಲ್ಲಿ ೯ ತಿಂಗಳಿಂದ ಬೆಳೆಸಲಾಗಿದ್ದ ಫಸಲು ನಾಶವಾಗಿದೆ. ಸರ್ಕಾರ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನನ್ನ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಇವರಂತೆ ಹಲವು ರೈತರು ಪಪ್ಪಾಯಿ ಬೆಳೆ ಬೆಳೆದಿದ್ದು ಅವರು ಸಹ ನಷ್ಟ ಅನುಭವಿಸಿದ್ದಾರೆ. ಬಿಸಿಲನ ಭೀಕರತೆಯಿಂದ ಅಂತರ್ಜಲವೂ ಕುಸಿತಗೊಂಡಿದ್ದು ಅಲ್ಪಸ್ವಲ್ಪ ನೀರಿನಲ್ಲಿಯೇ ಬೆಳೆ ಬೆಳೆದಿದ್ದು ರೈತರು ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ಅತ್ತ ಖರ್ಚು ಮಾಡಿದ ಹಣವೂ ಹೋಯಿತು, ಇತ್ತ ಬೆಳೆಯೂ ನಾಶವಾಯಿತು ಎಂದು ಪತ್ರಿಕೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.