ನಿಲ್ಲಿಸಿದ್ದ ಟ್ಯಾಂಕರ್‌ ಚಲಿಸಿ ಹೆದ್ದಾರಿ ಬದಿಗೆ ಪಲ್ಟಿ

| Published : Jan 26 2025, 01:30 AM IST

ಸಾರಾಂಶ

ಟ್ಯಾಂಕರ್‌ನಿಂದ ಅನಿಲ ಸೋರಿಕೆಯ ಭೀತಿ ಮೂಡಿತ್ತಾದರೂ, ಪರಿಶೀಲನೆಯ ವೇಳೆ ಅನಿಲ ಸೋರಿಕೆಯಾಗದಿರುವುದು ಕಂಡು ಬಂತು. ಸುರಕ್ಷತೆಯ ದೃಷ್ಟಿಯಿಂದ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಟ್ಯಾಂಕರ್ ಸ್ಥಳಾಂತರದ ಕಾರ್ಯ ನಡೆಯುತ್ತಿದೆ.

ಉಪ್ಪಿನಂಗಡಿ: ಇಲ್ಲಿನ ೩೪ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಶನಿವಾರ ಸಂಜೆ ಅಡುಗೆ ಅನಿಲ ಸಾಗಾಟದ ಟ್ಯಾಂಕರೊಂದು ಹೆದ್ದಾರಿ ಬದಿಯ ಚರಂಡಿಗೆ ಬಿದ್ದು ಭೀತಿ ಮೂಡಿಸಿತ್ತು. ಶನಿವಾರ ಮುಂಜಾನೆ ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ಸಂಚರಿಸುತ್ತಿದ್ದ ಈ ಟ್ಯಾಂಕರ್ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ಅದನ್ನು ಗಮನಿಸಿದ ಚಾಲಕ ತಮಿಳುನಾಡು ಮೂಲದ ಕನಕರಾಜ್ ಹೆದ್ದಾರಿ ಬದಿಯಲ್ಲಿ ಟ್ಯಾಂಕರ್‌ ನಿಲ್ಲಿಸಿ ಮೆಕ್ಯಾನಿಕ್ ಕರೆತರಲೆಂದು ಗ್ಯಾರೇಜ್‌ಗೆ ಹೋಗಿದ್ದ. ಈ ವೇಳೆ ಸ್ವಯಂ ಚಾಲನೆಗೆ ಒಳಗಾದ ಟ್ಯಾಂಕರ್ ಹೆದ್ದಾರಿ ಬದಿಯ ಚರಂಡಿಯನ್ನು ದಾಟಿ ಪಾರ್ಶ್ವಕ್ಕೆ ಮಗುಚಿ ಬಿದ್ದಿತು. ಸಮೀಪದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಟ್ಯಾಂಕರ್‌ನಿಂದ ಅನಿಲ ಸೋರಿಕೆಯ ಭೀತಿ ಮೂಡಿತ್ತಾದರೂ, ಪರಿಶೀಲನೆಯ ವೇಳೆ ಅನಿಲ ಸೋರಿಕೆಯಾಗದಿರುವುದು ಕಂಡು ಬಂತು. ಸುರಕ್ಷತೆಯ ದೃಷ್ಟಿಯಿಂದ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಟ್ಯಾಂಕರ್ ಸ್ಥಳಾಂತರದ ಕಾರ್ಯ ನಡೆಯುತ್ತಿದೆ.

ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳದ ಶಂಕರ್ ಹಾಗೂ ಮೆಸ್ಕಾಂ ಇಲಾಖೆಯ ಸಹಾಯಕ ಎಂಜಿನಿಯರ್ ನಿತಿನ್ ಮತ್ತು ಸಂಚಾರಿ ಪೊಲೀಸ್ ಇಲಾಖಾಧಿಕಾರಿ ಉದಯರವಿ ಎಂ. ನೇತೃತ್ವದ ತಂಡ ಹಾಜರಿದೆ.