ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ, ಇಂದಿನ ಸುದ್ದಿ ಪತ್ರಿಕೆ ಸಂಪಾದಕ ವೀರಪ್ಪ ಎಂ.ಭಾವಿ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ವೇಳೆ ಮಾತನಾಡಿದ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಉತ್ತಮ ವರದಿಯನ್ನು ಗುರುತಿಸಿ, ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ ವೀರಪ್ಪ ಭಾವಿ ಸಾಮಾಜಿಕ ಕಳಕಳಿಯ ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದವರು. ವೀರಪ್ಪ ಭಾವಿ ಅಗಲಿಕೆ ದಾವಣಗೆರೆ ಜಿಲ್ಲಾ ಪತ್ರಿಕೋದ್ಯಮ, ಪತ್ರಕರ್ತರಿಗೆ ತುಂಬಲಾರದ ನಷ್ಟ. ಯುವ ಪೀಳಿಗೆ ಪತ್ರಕರ್ತರಿಗೆ ಇಂತಹ ಹಿರಿಯ ಅನುಭವಿಗಳ ಮಾರ್ಗದರ್ಶನದ ಅಗತ್ಯವಿತ್ತು ಎಂದು ಹೇಳಿದರು.
ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮಂಜುನಾಥ ಗೌರಕ್ಕಳವರ್ ಮಾತನಾಡಿ, ವೀರಪ್ಪ ಭಾವಿ ನೀಡುತ್ತಿದ್ದ ಸಲಹೆಗಳು ನಗರಸಭೆ ಆಡಳಿತಾತ್ಮಕ ಬದಲಾವಣೆಗೂ ಕಾರಣವಾಗಿದ್ದವು. ಯಾವುದೇ ತನಿಖಾ ವರದಿಗಳಿದ್ದರೂ ಸಹಕರಿಸುತ್ತಿದ್ದ ವ್ಯಕ್ತಿತ್ವ ಭಾವಿ ಅವರದ್ದು. ಸಮಗ್ರ ಮಾಹಿತಿ ನೀಡುವ ಮೂಲಕ ಪತ್ರಿಕಾ ವೃತ್ತಿಯಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡು ಸಾರ್ವಜನಿಕರಿಗೆ ಉಪಯೋಗವಾಗುವಂತಹ, ಜನಪರ ವರದಿಗಳು ಮಾಡಬೇಕು. ವರದಿಗಳು ಸಾರ್ವಜನಿಕ ಜೀವನದಲ್ಲಿ ಪರಿಣಾಮಕಾರಿ ಕೆಲಸ ಮಾಡಬೇಕೆನ್ನುವ ತುಡಿತ ಹೊಂದಿದ್ದರು ಎಂದು ಸ್ಮರಿಸಿದರು.ವಿಜಯವಾಣಿ ಹಿರಿಯ ವರದಿಗಾರ ರಮೇಶ ಜಹಗೀರದಾರ್ ಮಾತನಾಡಿ, ದಾವಣಗೆರೆಯಲ್ಲಿ ಕನ್ನಡಪ್ರಭ ಜಿಲ್ಲಾ ವರದಿಗಾರನಾಗಿ ವೃತ್ತಿ ಆರಂಭಿಸಿದ ತಮಗೆ ಆರಂಭದಿಂದಲೂ ವೀರಪ್ಪ ಭಾವಿ ಜೊತೆ ಒಡನಾಟ. ಹಸನ್ಮುಖಿ ವೀರಪ್ಪ ಭಾವಿ ಎಲ್ಲರಿಗೂ ಸ್ಪಂದಿಸುವ ಗುಣ ಹೊಂದಿದ್ದರು. ಇಂದಿನ ಒತ್ತಡದ ಜೀವನದಲ್ಲಿ ಪತ್ರಕರ್ತರ ನಡುವೆ ಬಾಂಧವ್ಯ ಕಡಿಮೆಯಾಗಿದೆ. ವೇಗದ ಕಾಲದಲ್ಲಿ ಎಲ್ಲವೂ ಬದಲಾವಣೆ ಆಗಿದೆ. ಯಾವುದೇ ವ್ಯಕ್ತಿಯಾಗಲೀ ಗೌರವದಿಂದ ಕಾಣುವ ವ್ಯಕ್ತಿತ್ವ ವೀರಪ್ಪ ಭಾವಿ ಅವರದ್ದು, ಓರ್ವ ಕ್ರಿಯಾಶೀಲ ವ್ಯಕ್ತಿಯನ್ನು ಪತ್ರಿಕಾ ರಂಗ ಕಳೆದುಕೊಂಡಿದೆ ಎಂದು ವಿಷಾದಿಸಿದರು.
ದಾವಣಗೆರೆ ಟೈಮ್ಸ್ ಸಂಪಾದಕ, ವೀರಪ್ಪ ಭಾವಿ ಸೋದರಳಿಯ ಜಿ.ಎಸ್.ವೀರೇಶ್ ಮಾತನಾಡಿ, ತಮ್ಮ ತಂದೆ ಜಿ.ಶಿವಲಿಂಗಪ್ಪನವರು ಅಗಲಿದ ನಂತರ ತಂದೆಯ ಸ್ಥಾನದಲ್ಲಿ ನಿಂತು, ನಮ್ಮ ಪತ್ರಿಕೆ ಉಳಿಸಿ, ನಡೆಸಲು ದಾರಿ ತೋರಿಸಿದವರು ತಮ್ಮ ಮಾವ ವೀರಪ್ಪ ಭಾವಿ. ಪತ್ರಿಕೆ ಹೇಗೆ ನಡೆಸಬೇಕೆಂದು ತೋರಿಸಿಕೊಟ್ಟು, ನಮ್ಮಲ್ಲಿ ಭರವಸೆ ತುಂಬಿ ಮಾರ್ಗದರ್ಶನ ನೀಡಿ ಪತ್ರಿಕಾ ರಂಗದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಕಾರಣರಾದ ವ್ಯಕ್ತಿ ವೀರಪ್ಪ ಭಾವಿ ನಮಗೆ ಸದಾ ಆದರ್ಶವಾಗಿರುತ್ತಾರೆ ಎಂದು ಭಾವುಕರಾದರು.ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ವೀರಪ್ಪ ಭಾವಿ ಅಕಾಲಿಕ ಅಗಲಿಕೆ ನಮ್ಮೆಲ್ಲರಿಗೆ ತುಂಬಲಾರದ ನಷ್ಟ. ಪತ್ರಿಕಾ ರಂಗಕ್ಕೆ ಯಾರೇ ಹೊಸದಾಗಿ ಬರಲಿ ಅಂತಹವರಿಗೆ ಮಾನಸಿಕ ಧೈರ್ಯ ತುಂಬಿ, ನೈತಿಕ ಬೆಂಬಲ ನೀಡುತ್ತಿದ್ದ ವ್ಯಕ್ತಿತ್ವ ಭಾವಿ ಅವರದ್ದು. ಪತ್ರಕರ್ತರ ಕಷ್ಟ ನಷ್ಟಗಳಿಗೆ ಸ್ಪಂದಿಸುವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪತ್ರಕರ್ತರನ್ನು ಆಹ್ವಾನಿಸಿ, ಗೌರವಿಸುವ ಮೂಲಕ ಸಂತೃಪ್ತಿಪಡುತ್ತಿದ್ದ ಅಪರೂಪದ ವ್ಯಕ್ತಿತ್ವ ವೀರಪ್ಪ ಭಾವಿ ಹೊಂದಿದ್ದರು. ಇಂತಹ ಹಿರಿಯರು ನಮ್ಮಂತಹ ಪತ್ರಕರ್ತರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಈ ವೇಳೆ ವಿಜಯವಾಣಿಯ ಹಿರಿಯ ಪತ್ರಕರ್ತ ರಮೇಶ್ ಜಹಗೀರ್‌ದಾರ್ ಮಾತನಾಡಿದರು. ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಖಜಾಂಚಿ ಈ.ಪವನಕುಮಾರ, ಪಿಆರ್‌ಓ ಪಿ.ಎಸ್.ಲೋಕೇಶ, ಪದಾಧಿಕಾರಿಗಳಾದ ರಾ.ರವಿಬಾಬು, ಬಿ.ಸಿಕಂದರ್, ತೇಜಸ್ವಿನಿ ಪ್ರಕಾಶ, ದೇವಿಕಾ ಸುನೀಲ್, ಐ.ಗುರುಶಾಂತಪ್ಪ, ನಿಕಟ ಪೂರ್ವ ಅಧ್ಯಕ್ಷ ಬಸವರಾಜ ದೊಡ್ಮನಿ, ಬಿ.ರಾಮಮೂರ್ತಿ, ಸುರೇಶ ಕುಣಿಬೆಳಕೆರೆ, ಚನ್ನಬಸವ ಶೀಲವಂತ್, ಮಹಾದೇವ, ಜಿಗಳಿ ಪ್ರಕಾಶ, ಮಹೇಶ ಕಾಶೀಪುರ, ಬಿ.ಎಚ್.ಕಾವ್ಯ, ಡಿ.ನೂರುಲ್ಲಾ, ಶಿವರಾಜ ಈಳೀಗೇರ, ಸಂಜಯ್ ಕುಂದುವಾಡ, ಪರಶುರಾಮ, ಅಣ್ಣೇಶ, ಭಾಸ್ಕರ ಇತರರು ಇದ್ದರು.