ಸಾರಾಂಶ
ಗೋಕರ್ಣ: ಧರ್ಮದ ತತ್ವವನ್ನು ತಿಳಿಯಲು ಇರುವ ಸರಳ ಮಾರ್ಗವೆಂದರೆ, ಮಹಾಪುರುಷರ ದಾರಿಯನ್ನು ಅನುಸರಿಸುವುದು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು 33ನೇ ದಿನ 33ನೇ ಗುರುಗಳಾದ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿಯ ಅನಾವರಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಪರಾತ್ಪರ ಗುರುಗಳಾದ ಎಂಟನೇ ರಾಘವೇಶ್ವರರ ದಿನಚರಿ ಇಂದು ಅನಾವರಣಗೊಂಡಿದೆ. ಯಾವ ದಾರಿಯಲ್ಲಿ ನಾವು ಸಾಗಬೇಕು ಎಂಬ ಬಗ್ಗೆ ಜನಸಾಮಾನ್ಯರಿಗೆ ಗೊಂದಲಗಳು ಇವೆ. ಸ್ಮೃತಿ, ವೇದಗಳ ಮೂಲಕ ಇದನ್ನು ಕಂಡುಕೊಳ್ಳಲು ಹೊರಟರೆ ಅಲ್ಲೂ ಗೊಂದಲವಾಗಬಹುದು. ಮುನಿಗಳ ದಾರಿಯಲ್ಲಿ ಮುನ್ನಡೆಯೋಣ ಎಂದುಕೊಂಡರೆ ಒಬ್ಬೊಬ್ಬರದ್ದು ಒಂದೊಂದು ದಾರಿ. ಇಲ್ಲೂ ದಾರಿ ಗೊಂದಲಮಯ ಎಂದು ಬಣ್ಣಿಸಿದರು.
ಧರ್ಮದ ತತ್ವ ಗುಹೆಯೊಳಗೆ ಅಡಗಿಸಲ್ಪಟ್ಟಿದೆ. ಅದನ್ನು ತಿಳಿಯುವ ಸುಲಭ ದಾರಿಯೆಂದರೆ ಮಹಾಪುರುಷರು ನಡೆಯುವ ಹಾದಿ. ಮಹಾಪುರುಷರ ದಾರಿ ಇತರರಿಗೆ ರಾಜಮಾರ್ಗವಾಗುತ್ತದೆ. ಶ್ರೀರಾಮನಂಥ ಮಹಾಪುರುಷರು ನಡೆದ ದಾರಿಯನ್ನು ನೋಡಿದರೆ ನಾವು ಹೇಗೆ ಬದುಕಬೇಕು ಎನ್ನುವುದು ತಿಳಿಯುತ್ತದೆ ಎಂದರು.ನಮ್ಮ ಪರಾತ್ಪರ ಗುರುಗಳು ನಡೆದ ದಾರಿ, ನಾವು ನಡೆಯಬೇಕಾದ ದಾರಿಯನ್ನು ಶ್ರೀಗಳ ದಿನಚರಿ ತೋರಿಸುತ್ತದೆ. ಇದು ಗುರು- ಶಿಷ್ಯರಿಗೆ ಮಾರ್ಗದರ್ಶನ ನೀಡುವ ಅಪೂರ್ವ ಇತಿಹಾಸ ಕಣಜ. ಹೋದ ದೃಷ್ಟಿಯನ್ನು ತಪಃಶಕ್ತಿಯಿಂದ ಮರಳಿ ಪಡೆದ ಮಹಾನುಭಾವರು ಅವರು. ಸಮಾಜಲ್ಲಿ ಯಾವುದೋ ಮೂಲೆಯಲ್ಲಿ ಕುರುಡು ಸ್ವಾಮಿ ಎಂಬ ಮಾತು ಕೇಳಿಬಂದ ಹಿನ್ನೆಲೆ ಛಲದಿಂದ ಘೋರ ತಪಸ್ಸು ಮಾಡಿ ದೃಷ್ಟಿ ಪಡೆದುಕೊಂಡರು. ಇಂಥ ನಿದರ್ಶನ ಇತ್ತೀಚಿನ ದಿನಗಳಲ್ಲಿ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿಗೆ ಪೀಠಾಧಿಪತಿಗಳಾಗಿರುವವರು ಇಂದ್ರಿಯಗಳನ್ನು ಗೆದ್ದವರು, ವಶಪಡಿಸಿಕೊಂಡವರು ಎಂದರು.
ಕಾಲ ಪ್ರವಚನ ಸರಣಿಯನ್ನು ಮುಂದುವರಿಸಿದ ಶ್ರೀಗಳು, ಸತ್ವಗುಣ ದೃಢತೆ ಹಾಗೂ ರಜೋಗುಣ ಜಡತೆಯ ಸಂಕೇತ. ಅಂಥ ದೃಢತೆಯ ಅಧಿಪತಿಯಾದ ಗುರುವಿನ ದೃಷ್ಟಿಯಿಂದ ಬಾಳು ಬಂಗಾರವಾಗುವುದು ಮಾತ್ರವಲ್ಲದೇ, ಮರಣದಲ್ಲೂ ಆತನಿಗೆ ಮುಕ್ತಿ ದೊರಕುತ್ತದೆ ಎಂದರು.ಅಷ್ಟಮ ರಾಘವೇಶ್ವರರ ದಿನಚರಿಯ ಅನಾವರಣವನ್ನು ಮುಂಬೈ ಐಐಟಿಯ ನಿವೃತ್ತ ಅಧಿಕಾರಿ ಎಲ್.ಜಿ. ಭಟ್ಟಗದ್ದೆ ನೆರವೇರಿಸಿದರು. ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕಾರ್ಯದರ್ಶಿ ಜಿ.ಕೆ. ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ. ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.