ಜಿಲ್ಲಾ ಕೇಂದ್ರದಲ್ಲಿ ಕಾಣೆಯಾಗಿವೆ ಪಾದಚಾರಿ ಮಾರ್ಗ!

| Published : Jun 26 2024, 12:36 AM IST

ಜಿಲ್ಲಾ ಕೇಂದ್ರದಲ್ಲಿ ಕಾಣೆಯಾಗಿವೆ ಪಾದಚಾರಿ ಮಾರ್ಗ!
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಅಭಿವೃದ್ದಿಗೆ ಕೈಜೋಡಿಸಿ ಜಿಲ್ಲಾ ಕೇಂದ್ರದ ಅಂದವನ್ನು ಹೆಚ್ಚಿಸಬೇಕಿದ್ದ ನಗರಾಡಳಿತಕ್ಕೆ ಈ ಬಗ್ಗೆ ಗಮನ ಹರಿಸುವ ವ್ಯವದಾನವಾಗಲಿ, ದೂರದೃಷ್ಟಿಯಾಗಲಿ ಇಲ್ಲವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 17 ವರ್ಷಗಳಾಗಿದ್ದರೂ ಜಿಲ್ಲಾ ಕೇಂದ್ರದಲ್ಲಿ ಇನ್ನೂ ಸಂಚಾರ ವ್ಯವಸ್ಥೆ ಸಮರ್ಪಕವಾಗಿಲ್ಲ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಡಲು ಹರಸಾಹಸ ಮಾಡುವ ಸ್ಥಿತಿ ಉಂಟಾಗಿದೆ. ರಸ್ತೆಗಳು ದಿನೇ ದಿನೇ ಕಿಷ್ಕಿಂದೆಯಾಗುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿರುವ ಮೂರ್ನಾಲ್ಕು ಪ್ರಮುಖ ರಸ್ತೆಗಳಲ್ಲಿ ನಗರಸಭೆ , ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದಾಗಿ ಪಾದಚಾರಿ ಮಾರ್ಗಗಳೇ ನಾಪತ್ತೆಯಾಗಿವೆ. ಇದರಿಂದಾಗಿ ಪಾದಚಾರಿಗಳು ಫುಟ್‌ಪಾತ್‌ಗಳಲ್ಲಿ ಸರ್ಕಸ್‌ ಮಾಡುವಂತಾಗಿದೆ. ನಾಗರಿಕ ಸೌಲಭ್ಯಗಳ ಕೊರತೆ

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ನಾಗರಿಕರಿಗೆ ಸುರಕ್ಷಿತ ಸಂಚಾರಕ್ಕೆ ಯೋಗ್ಯವಾದ ಪಾದಚಾರಿ ಮಾರ್ಗಗಳಾಗಲಿ, ಪ್ರಯಾಣಿಕರಿಗೆ ಬಸ್‌ ತಂಗುದಾಣಗಳಾಗಲಿ, ವಿಶ್ರಾಂತಿ ಪಡೆಯಲು ನೆರವಾಗುವ ಉದ್ಯಾನವನಗಳಾಗಲಿ, ಪಾರ್ಕಿಂಗ್ ವ್ಯವಸ್ಥೆಯಾಗಲಿ ಇಲ್ಲ. ಇಂತಹ ಅಗತ್ಯ ನಾಗರಿಕ ಸೌಲಭ್ಯ ಕಲ್ಪಿಸಬೇಕೆಂಬ ಚಿಂತನೆಯೂ ಅಧಿಕಾರಸ್ಥರಿಗಿಲ್ಲ.

ಇದೇ ಕಾರಣಕ್ಕೆ ಪಾದಚಾರಿಗಳಿಗೆ ಕಿರಿಕಿರಿಯಾಗುವುದು ಗೊತ್ತಿದ್ದರೂ ವಾಹನ ಸವಾರರು ತಮ್ಮ ದಿಚಕ್ರ, ತ್ರಿಚಕ್ರ ವಾಹನಗಳನ್ನು ರಸ್ತೆ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದಾರೆ. ನಗರದ ಅಭಿವೃದ್ದಿಗೆ ಕೈಜೋಡಿಸಿ ಜಿಲ್ಲಾ ಕೇಂದ್ರದ ಅಂದವನ್ನು ಹೆಚ್ಚಿಸಬೇಕಿದ್ದ ನಗರಾಡಳಿತಕ್ಕೆ ಈ ಬಗ್ಗೆ ಗಮನ ಹರಿಸುವ ವ್ಯವದಾನವಾಗಲಿ, ದೂರದೃಷ್ಟಿಯಾಗಲಿ ಇಲ್ಲವಾಗಿದೆ.

ವಿಲೇವಾರಿಯಾಗದ ತ್ಯಾಜ್ಯ

ನಗರದ ಬೀದಿಗಳಲ್ಲಿ ಕಸದರಾಶಿ, ಎಲ್ಲೆಂದರಲ್ಲಿ ಮೂತ್ರವಿಸರ್ಜನೆ, ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮೂರ್ನಾಲ್ಕು ದಿನಗಳ ಸತತ ಕಸದ ರಾಶಿಯ ದರ್ಶನ ಎದ್ದು ಕಾಣುತ್ತದೆ. ನಗರ ಸಭೆಯ ಪೌರ ಕಾರ್ಮಿಕ ಸಿಬ್ಬಂದಿ ತಮಗೆ ವಹಿಸಿದ ಕೆಲಸ ಮಾಡುತ್ತಿದ್ದರೂ ಹೆಚ್ಚುವರಿಯಾಗಿ ಬೀಳುವ ಕಸದಿಂದಾಗಿ ಬೀದಿಯಲ್ಲೇ ಕೊಳೆಯುವಂತಾಗಿದೆ. .ಪ್ಲಾಸ್ಟಿಕ್‌ಗೆ ನಿಷೇಧ ಹೇರಿದ್ದರೂ ಕಸದಲ್ಲಿ ಮುಕ್ಕಾಲು ಪಾಲು ಅದೇ ಇದೆ. ಪಾದಚಾರಿ ಮಾರ್ಗಗಳನ್ನು ಅಂಗಡಿಗಳ ಮಾಲಿಕರು ಒತ್ತುವರಿ ಮಾಡಿಕೊಂಡರೂ ತುಟಿ ಬಿಚ್ಚಿ ಕೇಳದಷ್ಟು ಆಲಸ್ಯತನ ಇಲ್ಲಿನ ಅಧಿಕಾರಿ ಸಿಬ್ಬಂದಿಗೆ ಬಂದಿದೆ.ಅವ್ಯಸ್ಥೆಗಳು ಕಣ್ಣಿಗೆ ರಾಚುತ್ತಿದ್ದರೂ ಕಂಡೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ನಗರವಾಸಿಗಳ ಅಸಹನೆಗೆ ಕಾರಣವಾಗಿದೆ.ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ

ಪಾದಚಾರಿ ಮಾರ್ಗಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವುದು, ಅಂಗಡಿಯ ಮುಂದೆ ಸಾಮಾನು ಸರಂಜಾಮು ಜೋಡಿಸಿಕೊಳ್ಳುವುದು, ವ್ಯಾಪಾರ ನಿರತ ತಳ್ಳುವ ಗಾಡಿಗಳ ಮತ್ತು ಮೊಬೈಲ್ ಕ್ಯಾಂಟೀನ್ ವ್ಯಾಪಾರವು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ನೋ ಪಾರ್ಕಿಂಗ್‌, ಸರ್ಕಲ್‌ಗಳಲ್ಲಿ, ಸಂಚಾರಿ ಸಿಗ್ನಲ್‌ ಬಳಿ, ರಸ್ತೆ ತಿರುವುಗಳಲ್ಲಿ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವವರ ಮೇಲೆ ಮುಲಾಜಿಲ್ಲದೆ ಕ್ರಮವಹಿಸುವ ಅವಕಾಶ ಇದ್ದರೂ ಪೊಲೀಸರು ಅದೇಕೋ ಕಂಡುಕಾಣದಂತೆ ವರ್ತಿಸುತ್ತಿದ್ದಾರೆ. ಇವರ ಇಂತಹ ನಿರ್ಲಕ್ಷ್ಯ ಧೋರಣೆಯೇ ಪಾದಚಾರಿ ಮಾರ್ಗ ನಾಪತ್ತೆಯಾಗಲು, ದ್ವಿಚಕ್ರ ವಾಹನಗಳ ಕಳವು ಹೆಚ್ಚಾಗಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈನಿಟ್ಟಿನಲ್ಲಿ ಜಿಲ್ಲಾಡಳಿತವೂ ಕೊಂಚ ಗಮನ ಹರಿಸಿ ಪಾದಚಾರಿ ಮಾರ್ಗ ಒತ್ತುವರಿ ಮಾಡುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜನರ ಓಡಾಟಕ್ಕೆ ಅವಕಾಶ ಇಲ್ಲದಷ್ಟು ಅಂಗಡಿ ಮುಂಗಟ್ಟುಗಳಿವೆ. ಎಲ್ಲೆಂದರಲ್ಲಿ ಗಲೀಜು ತಾಂಡವವಾಡುತ್ತಿದೆ. ಬಜಾರ್‌ ರಸ್ತೆ, ಟೌನ್‌ ಹಾಲ್‌ ಮುಂಭಾಗ(ನಗರಸಭೆಯ ಮುಂದೆ)ಎಂ.ಜಿ.ರಸ್ತೆ, ಬಿಬಿ ರಸ್ತೆ,ಬಜಾರ್ ರಸ್ತೆ, ಬಿ.ಬಿ.ರಸ್ತೆ, ಸರ್ಕಾರಿ ಜ್ಯೂನಿಯರ್‌ ಕಾಲೇಜು,ಗಂಗಮ್ಮಗುಡಿ ರಸ್ತೆ, ಲೈಬ್ರರಿ ಮುಂಭಾಗ ಪಾದಚಾರಿ ಮಾರ್ಗಗಳೇ ಇಲ್ಲವಾಗಿವೆ.

ಈಗಲಾದರೂ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಂಡು ನಾಗರಿಕಕು ನೆಮ್ಮದಿಂದ ಸಂಚರಿಸಲು ಅನುವು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.