ಸಾರಾಂಶ
ಹರಪನಹಳ್ಳಿ: ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಪಟ್ಟಣದ ಬಾಬುಜಗಜೀವನರಾಂ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧೆಡೆಯಿಂದ ಜನರು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದಿದ್ದರು.
ಹಳ್ಳಿಕೇರಿ, ಮಾದಿಹಳ್ಳಿ, ಗೌರಿಪುರ ತೊಗರಿಕಟ್ಟಿ, ಜಿಟ್ಟಿನಕಟ್ಟಿ, ಯರಬಾಳು, ತಾವರಗೊಂದಿ, ಅರಸನಾಳು, ಹಲುವಾಗಲು, ಗರ್ಭಗುಡಿ, ಬಿಕ್ಕಿಕಟ್ಟಿ ಗ್ರಾಮದಲ್ಲಿನ ಫಲಾನುಭವಿಗಳಿಗೆ ನಿವೇಶನ ನೀಡಬೇಕು, ನಿವೇಶಕ್ಕೆ ಸರ್ಕಾರಿ ಜಮೀನು ಹುಡುಕಿಕೊಡಬೇಕು. ಜಾಗವಿರುವ ಕಡೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಯಾ ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಭಾಗ್ಯ, ಶ್ರುತಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ಅರಸೀಕೆರೆಯಲ್ಲಿ ನಾಡಕಚೇರಿ ನಿರ್ಮಿಸಬೇಕು. ಬಸ್ ಸೌಕರ್ಯ, ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು. ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಿಸಬೇಕು. ನಿರಂತರ ಜ್ಯೋತಿ ಸಮಸ್ಯೆ ಸರಿಪಡಿಸಬೇಕು ಎಂದು ಅರಸೀಕೆರೆ ಗ್ರಾಮದ ರೈತ ಮುಖಂಡರಾದ ಎಚ್.ಹಾಲಪ್ಪ, ಎ.ಬಿ. ನಾಗರಾಜಗೌಡ, ಗುಡಿಹಳ್ಳಿ ಹಾಲೇಶ ಮನವಿ ಸಲ್ಲಿಸಿದರು.
ಚಿಗಟೇರಿ ಮಹಿಳಾ ಸರ್ಕಾರಿ ಪಿಯು ಕಾಲೇಜ್ ಬಳಿ ಮದ್ಯದಂಗಡಿ ಇದ್ದು, ಗಾಜಿನ ಬಾಟಲಿ ಬೀಸಾಕಿ ಹೋಗುವಷ್ಟು ಕೆಟ್ಟು ಹೋಗಿರುವ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಭೂದಾನಿಗಳು ಮತ್ತು ಸಮಾಜಸೇವಕರಾದ ಹುಳ್ಳಿ ಕೊಟ್ರಪ್ಪ ಹಾಗೂ ಇನ್ನಿತರ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಲು ಜಿಲ್ಲಾಧಿಕಾರಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.137 ಅರ್ಜಿ ಸ್ವೀಕಾರ:
ಕಂದಾಯ-87, ಅಬಕಾರಿ-2, ಪುರಸಭೆ-8, ಆರೋಗ್ಯ-4, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-3, ತಾಪಂ-19, ಪಿಆರ್ ಇಡಿ-1, ಗ್ರಾಮೀಣ ಕುಡಿಯುವ ನೀರು-4, ಬೆಸ್ಕಾಂ-3, ಕೃಷಿ ಇಲಾಖೆ-6, ಕೆಆರ್‌ಐಡಿಎಲ್-1 ... ಹೀಗೆ 137 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಹವಾಲು ಸಲ್ಲಿಸಿದ್ದು ವಿಶೇಷವಾಗಿತ್ತು. ರೈತ, ಕಾರ್ಮಿಕ, ಕೃಷಿ ಕೂಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಸಹ ಆಗಮಿಸಿ ಮನವಿ ಸಲ್ಲಿಸಿದರು.
ಗೈರಾದವರಿಗೆ ನೋಟಿಸ್:ಪಟ್ಟಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಕಾರ್ಯಕ್ರಮಕ್ಕೆ ಅಬಕಾರಿ ಡಿಸಿ, ಕೆಲ ಪಿಡಿಒಗಳು ಸೇರಿದಂತೆ ಗೈರಾದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.ಜಿಪಂ ಸಿಇಒ ನೋಂಗ್ಜಾಯಿ ಮೊಹಮ್ಮದ್ ಅಲಿ ಅಕ್ರಮ್ ಶಾ, ಹರಪನಹಳ್ಳಿ ಸಹಾಯಕ ಆಯುಕ್ತರಾದ ಚಿದಾನಂದ ಗುರುಸ್ವಾಮಿ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರ ಅಹವಾಲು ಆಲಿಸಿದರು.
ತಹಸೀಲ್ದಾರ ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಡಿವೈಎಸ್ಪಿ ಮಹಾಂತೇಶ ಸಜ್ಜನ, ಪಿಎಸ್ಐ ಶಂಭುಲಿಂಗ್ ಹಿರೇಮಠ, ನರೇಗಾ ಸಹಾಯಕ ನಿರ್ದೆಶಕ ಸೋಮಶೇಖರ, ಸಿಡಿಪಿಒ ಜಿ.ಅವಿನಾಶ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಬಿಇಒ ಬಸವರಾಜಪ್ಪ, ಎಇಇ ನಾಗಪ್ಪ ಇದ್ದರು.ಪುರಸಭಾ ಸದಸ್ಯರ ಕಡೆಗಣನೆ-ಆರೋಪ: ಹರಪನಹಳ್ಳಿ ಪಟ್ಟಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸದೇ ನಿರ್ಲಕ್ಷಿಸಿದ್ದಾರೆಂದು ಪುರಸಭಾ ಸದಸ್ಯರು ದೂರಿದ್ದಾರೆ. ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಉದ್ದಾರ ಗಣೇಶ, ಗೊಂಗಡಿ ನಾಗರಾಜ , ಟಿ.ವೆಂಕಟೇಶ ಇತರರು ಈ ಕುರಿತು ಹೇಳಿಕೆ ನೀಡಿದ್ದು, ಇನ್ನು ಮುಂದೆಯಾದರೂ ತಾಲೂಕು ಆಡಳಿತ ನಮ್ಮನ್ನು ಮರೆಯಬಾರದು. ಈ ಕುರಿತು ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ಕೋರಿದ್ದಾರೆ.
ಬಾಟಲಿ ಬದಲು ಪೌಚ್‌ನಲ್ಲಿ ಮದ್ಯ ಕೊಡಿಸಿ: ಮದ್ಯವನ್ನು ಬಾಟಲ್ ಬದಲು ಪೌಚ್ ನಲ್ಲಿ ನೀಡಿದರೆ ಸಮಾಜಕ್ಕೆ ಒಳ್ಳೆಯದು... ಇದು ತಾಲೂಕಿನ ಮತ್ತಿಹಳ್ಳಿ ಭಾಗದ ರೈತರೊಬ್ಬರು ಪಟ್ಟಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ನೀಡಿದ ಸಲಹೆ.ವಿಸ್ಕಿ, ಬಿಯರ್‌ಗಳನ್ನು ಕುಡಿದು ಬಾಟಲಿಗಳನ್ನು ಹೊಲ, ಆಟದ ಮೈದಾನ, ಕೆರೆ ಕಟ್ಟೆಗಳ ಬಳಿ ಹೀಗೆ ಎಲ್ಲೆಂದರಲ್ಲಿ ಬೀಸಾಕುತ್ತಿದ್ದಾರೆ. ಇದರಿಂದ ರೈತರು ಜಮೀನಿನಲ್ಲಿ ಉಳುಮೆ ಮಾಡಲು ಕಷ್ಟವಾಗುತ್ತದೆ. ಕಾಲುಗಳಿಗೆ ಗಾಜು ತಾಕುತ್ತವೆ. ಶಾಲಾ-ಕಾಲೇಜುಗಳ ಆಟದ ಮೈದಾನದಲ್ಲೂ ಕಾಣಸಿಗುತ್ತವೆ. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಪರಿಸರಕ್ಕೂ ಹಾನಿ. ಮದ್ಯವನ್ನು ಬಾಟಲುಗಳ ಬದಲು ಪೌಚ್ ನಲ್ಲಿ ಮಾರಾಟ ಮಾಡಿದರೆ ಒಳ್ಳೆಯದು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನು ಆಲಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ನೈಸರ್ಗಿಕವಾಗಿ ಹಾನಿ ತಪ್ಪಿಸಲು ಉತ್ತಮ ಸಲಹೆ. ಈ ಕುರಿತು ಅಬಕಾರಿ ಇಲಾಖೆಯ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.