ಸಾರಾಂಶ
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಖಮುನಿಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೋಟಿಹಾಳ ಮಂಡಲದ ವತಿಯಿಂದ ವಿಜಯದಶಮಿ ಉತ್ಸವ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಕಾರ್ಯಕ್ರಮ ನಡೆಯಿತು.
ಕುಷ್ಟಗಿ: ನಮ್ಮ ಹಿಂದುಸ್ತಾನ ದೇಶದಲ್ಲಿರುವ ಎಲ್ಲ ಜನರು ಹಿಂದೂಗಳು ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ಡಾ. ರವೀಂದ್ರ ಜಿ. ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಖಮುನಿಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೋಟಿಹಾಳ ಮಂಡಲದ ವತಿಯಿಂದ ನಡೆದ ವಿಜಯದಶಮಿ ಉತ್ಸವ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎರಡನೇ ಶತಮಾನದಲ್ಲಿ ಎಲ್ಲ ಜನರು ಶಿವ ಮತ್ತು ಶ್ರೀರಾಮನ ಪೂಜೆ ಮಾಡುತ್ತಾ ಬಂದಿದ್ದು, ಹಿಂದೂ ಸಮಾಜದಲ್ಲಿನ ಅಸಮಾನತೆಯಿಂದಾಗಿ ಕೆಲವು ಜನರು ಪೂಜಾಪದ್ದತಿ ಬೇರೆ ಮಾಡಿಕೊಳ್ಳುವ ಮೂಲಕ ಮತಾಂತರಗೊಂಡಿದ್ದಾರೆ. ಭಾರತದಲ್ಲಿನ ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಇನ್ನುಳಿದ ಎಲ್ಲರೂ ಮೂಲತಃ ಹಿಂದೂಗಳು ಎಂದರು.ಸಂಘವೂ ದೇಶದ ರಕ್ಷಣೆಯ ಸಲುವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲ ತಾಲೂಕು, ಮಂಡಲದಲ್ಲಿ ಸ್ಥಾಪಿಸುವ ಸಂಕಲ್ಪ ಹೊಂದಲಾಗಿದೆ ಎಂದರು.
ಒಳ್ಳೆಯ ಕಾರ್ಯ ಮಾಡುವ ಮನಸ್ಸು ಕಡಿಮೆಯಾಗುತ್ತಿದ್ದು, ಒಳ್ಳೆಯದನ್ನು ಮಾಡುವ ವ್ಯಕ್ತಿಗಳಿಗೆ ಜಾತಿಯ ಬಣ್ಣ, ಪಕ್ಷದ ಬಣ್ಣ ಕಟ್ಟುವ ಮೂಲಕ ಕೆಲವರು ವೈಮನಸ್ಸು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ ಇದನ್ನೆಲ್ಲ ಬಿಟ್ಟು ದೇಶ ಮೊದಲು ಎಂಬ ಧ್ಯೇಯಯೊಂದಿಗೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದರು.ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಸ್ವದೇಶಿ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರದ ಕುರಿತು ಸಮಗ್ರವಾದ ಮಾಹಿತಿ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಚಂದ್ರಶೇಖರ ದೇವರು ಮಾತನಾಡಿ, ಸತತವಾಗಿ 100 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಭಾರತೀಯ ಪರಂಪರೆ ಮತ್ತು ಸಂಸ್ಕಾರ ಉಳಿಸಲು ಉತ್ತಮವಾದ ಕಾರ್ಯ ಮಾಡುತ್ತಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಡಾ. ಕೇಶವಜಿ ಸೇರಿದಂತೆ ಅನೇಕ ಮಹನಿಯರು 1925ರಲ್ಲಿ ಈ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದಾರೆ. ಯುವಕರು ದೇಶದ ರಕ್ಷಣೆಗೆ ಮುಂದಾಗಬೇಕು. ಸಂಸ್ಕಾರವಂತರು ಆಗಬೇಕು. ಈ ಸಂಘಟನೆ ಸೇರ್ಪಡೆಯಾಗುವ ಮೂಲಕ ದೇಶಸೇವೆ ಮಾಡಬೇಕು ಎಂದರು.ಪಾದಸ್ಪರ್ಶ, ನಮಸ್ತೆ ಓಟ, ಹುಲಿ ಆಕಳು, ದಂಡ ಪ್ರಯೋಗ, ನಿಯುದ್ಧ ಸೇರಿದಂತೆ ಅನೇಕ ಚಟುವಟಿಕೆ ನಡೆಯಿತು. ಕುಷ್ಟಗಿ, ದೋಟಿಹಾಳ, ಕೇಸೂರು, ಗೋತಗಿ, ಕ್ಯಾದಿಗುಪ್ಪ ಸೇರಿದಂತೆ ಅನೇಕ ಸ್ವಯಂ ಸೇವಕರು ಭಾಗವಹಿಸಿದ್ದರು.