ಸಾರಾಂಶ
ಅಮೆರಿಕದ ವಾಯುಸೇನೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ ಯುದ್ಧ ವಿಮಾನ ಹಾರಾಟದ ವೇಳೆ ಸೃಷ್ಟಿಸಿದ ಶಬ್ಧದಿಂದಾಗಿ ಚಿಕ್ಕಬಳ್ಳಾಪುರ ಜನತೆ ಬೆಚ್ಚಿಬಿದ್ದ ಘಟನೆ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಮೆರಿಕದ ವಾಯುಸೇನೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ ಯುದ್ಧ ವಿಮಾನ ಹಾರಾಟದ ವೇಳೆ ಸೃಷ್ಟಿಸಿದ ಶಬ್ಧದಿಂದಾಗಿ ಚಿಕ್ಕಬಳ್ಳಾಪುರ ಜನತೆ ಬೆಚ್ಚಿಬಿದ್ದ ಘಟನೆ ಗುರುವಾರ ನಡೆದಿದೆ.ತಾಲೂಕಿನ ಆರೂರು, ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಆವಲನಾಗೇನಹಳ್ಳಿ, ದೊಡ್ಡಪೈಲಗುರ್ಕಿ, ಚಿಕ್ಕಪೈಲಗುರ್ಕಿ ಸೇರಿದಂತೆ ತುಮಕಲಹಳ್ಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳ ಮೇಲೆ ಅಮೆರಿಕದ ಬಿ-1ಬಿ ಲ್ಯಾನ್ಸರ್ ಬಾಂಬರ್ ಸೂಪರ್‌ಸಾನಿಕ್ ಯುದ್ಧ ವಿಮಾನ (ವಾರ್ ಜೆಟ್) ಗುರುವಾರ ಬೆಳಗ್ಗೆ ಸುಮಾರು 10.30ರ ಸಮಯದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿತು. ಇದನ್ನು ಕಂಡ ಜನ ಆತಂಕಕ್ಕೆ ಒಳಗಾದರು.
ವಿಮಾನದ ಸದ್ದು ಕೇಳಿ ಜನ ಇದ್ಯಾವುದೋ ಹೆಲಿಕಾಪ್ಟರ್ ಇರಬೇಕು. ಇಷ್ಟು ಸೌಂಡ್ ಬರ್ತಿದೆ ಅಂದ್ರೆ ಕೆಟ್ಟು ಹೋಗಿರಬೇಕು, ಎಲ್ಲೋ ಬಿದ್ದು ಹೋಗಿದೆ ಅಂತ ಭಾವಿಸಿದರು. ಈ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ ಪೇರೇಸಂದ್ರ ಪೊಲೀಸರ ಗಮನಕ್ಕೂ ಹೋಗಿದೆ. ತಕ್ಷಣ ಠಾಣೆಯ ಪೊಲೀಸರು ಬೀಟ್ ವ್ಯಾಪ್ತಿಗಳಲ್ಲಿ ಕರೆ ಮಾಡಿ ಮಾಹಿತಿ ಕಲೆ ಹಾಕಿ ಬೆಟ್ಟ-ಗುಡ್ಡಗಳ ಕಡೆ ಹೋಗಿ ಹೆಲಿಕಾಪ್ಟರ್ ಪತನವಾಗಿದೆಯಾ ಎಂದು ಹುಡುಕಾಟ ಸಹ ನಡೆಸಿದರು.ಕೊನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಜಿಲ್ಲಾ ಪೊಲೀಸ್ ಇಲಾಖೆಗೆ, ಇದು ಬಿ1ಬಿ ಬಾಂಬರ್‌ನ ಸದ್ದು, ಈಗಾಗಲೇ ಬಿ1ಬಿ ಬಾಂಬರ್ ವಿಮಾನ ಏರ್ ಪೋರ್ಟ್‍ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಭಾರತ-ಅಮೆರಿಕ ಜಂಟಿ ಸಮರಾಭ್ಯಾಸದ ಭಾಗವಾಗಿ ಅಮೆರಿಕದ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನ ಭಾರತಕ್ಕೆ ಆಗಮಿಸಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಪೊಲೀಸರು ಮತ್ತು ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟರು.
;Resize=(128,128))
;Resize=(128,128))
;Resize=(128,128))
;Resize=(128,128))