ವರ್ಷಧಾರೆಗೆ ಧಾರವಾಡ ಜನ ತತ್ತರ!

| Published : Oct 10 2024, 02:17 AM IST

ಸಾರಾಂಶ

ತಗ್ಗು ಪ್ರದೇಶಗಳಾದ ಶ್ರೀನಗರ ಕೆಳಗಿನ ಪ್ರದೇಶಗಳಾದ ಭಾವಿಕಟ್ಟಿ ಪ್ಲಾಟ್‌, ಶಕ್ತಿ ಕಾಲನಿ, ಮಾಕಡವಾಲಾ ಪ್ಲಾಟ್‌, ಬಸವನಗರ ಭಾಗ, ಗೌಡರ ಕಾಲನಿ, ಜಾಧವ ಪ್ಲಾಟ್‌ನ ನೂರಾರು ಮನೆಗಳಲ್ಲಿ ಮಳೆ ನೀರು ಹೊಕ್ಕು ಅವಾಂತರ ಸೃಷ್ಟಿಯಾಗಿದೆ.

ಧಾರವಾಡ:

ಬಹುಶಃ ಮಂಗಳವಾರ ನಸುಕಿನಿಂದ ಬುಧವಾರ ರಾತ್ರಿ ವರೆಗೆ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸುರಿದ ವರ್ಷಧಾರೆಯು ಈ ವರ್ಷದ ಅತ್ಯಂತ ದೊಡ್ಡ ಪ್ರಮಾಣದ ಮಳೆ ಎನ್ನಬಹುದು. ವಾಯುಭಾರ ಕುಸಿತದ ಪರಿಣಾಮವಾಗಿ ಧಾರವಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ಜನರು ಮಳೆಯಿಂದ ಅಕ್ಷರಶಃ ಒದ್ದೆಯಾಗಿ ಹೋದರು.

ಮಂಗಳವಾರ ಸಂಜೆ ದೊಡ್ಡ ಮಳೆಯಾಗಿತ್ತು. ಆದರೆ, ಕೆಲಹೊತ್ತಿಗೆ ಮಾತ್ರ ಸೀಮಿತವಾದ ಕಾರಣ ಅಷ್ಟೊಂದು ಪರಿಣಾಮ ಬೀರಲಿಲ್ಲ. ಆದರೆ, ಬುಧವಾರ ನಸುಕಿನ 4ರಿಂದ 6ರ ವರೆಗೆ ಹಾಗೂ ಬುಧವಾರ ಮಧ್ಯಾಹ್ನ 3ರಿಂದ 7ರ ವರೆಗೆ ಸುರಿದ ಭಾರೀ ಪ್ರಮಾಣದ ಗುಡುಗು ಸಮೇತ ಮಳೆಯು ಇಡೀ ಧಾರವಾಡ ನಗರವನ್ನು ತೊಯ್ದು ತೊಪ್ಪೆಯಂತೆ ಮಾಡಿತು. ದೊಡ್ಡ ಹನಿಯ ಮಳೆಯು ತುಸು ಹೊತ್ತು ಬಿಡುವು ನೀಡದೇ ಹಲವು ಗಂಟೆಗಳ ಕಾಲ ಜೋರಾಗಿ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದರೆ, ರಸ್ತೆ ಹಾಗೂ ಗಟಾರುಗಳಲ್ಲಿ ಮಳೆ ನೀರು ಆವರಿಸಿ ಅವಾಂತರ ಸೃಷ್ಟಿಯಾಯಿತು.

ಸರೋವರದಂತಾದ ಸರೋವರ ನಗರ:

ತಗ್ಗು ಪ್ರದೇಶಗಳಾದ ಶ್ರೀನಗರ ಕೆಳಗಿನ ಪ್ರದೇಶಗಳಾದ ಭಾವಿಕಟ್ಟಿ ಪ್ಲಾಟ್‌, ಶಕ್ತಿ ಕಾಲನಿ, ಮಾಕಡವಾಲಾ ಪ್ಲಾಟ್‌, ಬಸವನಗರ ಭಾಗ, ಗೌಡರ ಕಾಲನಿ, ಜಾಧವ ಪ್ಲಾಟ್‌ನ ನೂರಾರು ಮನೆಗಳಲ್ಲಿ ಮಳೆ ನೀರು ಹೊಕ್ಕು ಅವಾಂತರ ಸೃಷ್ಟಿಯಾಗಿದೆ. ಇನ್ನು, ಕೆಲಗೇರಿ ಸಮೀಪದ ಸರೋವರ ನಗರ, ಶ್ರೀಶ ನಗರ, ಗಾಯಿತ್ರಿ ಪುರಂ, ಸಿದ್ಧಾರೂಢ ಕಾಲನಿ, ಬಿ.ಡಿ. ಪಾಟೀಲ ಕಲ್ಯಾಣ ಮಂಟಪ ಹಿಂಬದಿ, ಎನ್‌ಟಿಎಸ್‌ಎಸ್‌ ಪಿಯು ಕಾಲೇಜು ಎದುರಿನ ಬಡಾವಣೆ, ರಸ್ತೆ ಹಾಗೂ ಗಟಾರುಗಳು ಸಂಪೂರ್ಣ ನೀರಿನಿಂದ ಆವೃತಗೊಂಡಿದ್ದು ಯಾವ ಕ್ಷಣ ಮಳೆ ನೀರು ಎಲ್ಲಿ ಹರಿಯುತ್ತದೆ ಎಂಬುದು ಗೊತ್ತಾಗದ ಸ್ಥಿತಿ ಉಂಟಾಗಿದೆ. ಹಾವು-ಚೇಳು ಹಾಗೂ ಚರಂಡಿಯಲ್ಲಿರುವ ಹುಳುಗಳು ಅಡುಗೆ ಮನೆಗೆ ಹೋಗುತ್ತಿದ್ದು ಜನರಿಗೆ ಅನಿರೀಕ್ಷಿತ ಮಳೆಯು ತುಂಬ ಕಸಿವಿಸಿ ಉಂಟು ಮಾಡಿದೆ.

ಇನ್ನು, ಪ್ರತಿ ಸಲದಂತೆ ಬಿಆರ್‌ಟಿಎಸ್‌ ರಸ್ತೆ ಮಳೆ ನೀರಿನಿಂದ ತುಂಬಿತು. ಎನ್‌ಟಿಟಿಎಫ್‌, ಟೋಲನಾಕಾ ಬಳಿ ಎದೆಎತ್ತರಕ್ಕೆ ನೀರು ನಿಂತು ಅದರಲ್ಲಿಯೇ ಬಿಆರ್‌ಟಿಎಸ್‌ ಹಾಗೂ ಇತರೆ ವಾಹನಗಳು ಸಂಚರಿಸುವ ದೃಶ್ಯ ಕಂಡು ಬಂತು.

ಕ್ರಮ ವಹಿಸಿ:

ಭಾರತೀಯ ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಹಾಗೂ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಹಳ್ಳ ಅಚ್ಚು ಕಟ್ಟು ಪ್ರದೇಶದಲ್ಲಿ ವಾಯುಭಾರ ಕುಸಿತದಿಂದ ನಿರಂತರ ಮಳೆಯಾಗುತ್ತಿದೆ. ಆದ್ದರಿಂದ ಜನರು ಕೆಲವು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡಲು ಸೂಚನೆ ಸಹ ನೀಡಿದ್ದಾರೆ. ನದಿ, ಹಳ್ಳದ, ಕೆರೆ ದಡದಲ್ಲಿ ಬಟ್ಟೆ ತೊಳಿಯುವುದು, ಈಜಾಡುವುದು, ಧನ, ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮವಹಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂದರ್ಭವಿರುತ್ತದೆ. ಇದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುವುದಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ತೆಗೆದುಕೊಳ್ಳವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.50 ಮೀಮೀ

ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8ರ ವರೆಗೆ ಜಿಲ್ಲೆಯಲ್ಲಿ 4.4 ಮಿ.ಮೀ ವಾಡಿಕೆ ಮಳೆಯ ಪೈಕಿ ಆಗಿದ್ದು ಬರೋಬ್ಬರಿ 26.8 ಮಿ.ಮೀ. ಅದರಲ್ಲೂ ಧಾರವಾಡ ನಗರದಲ್ಲಿ ವಾಡಿಕೆಯ 6 ಮಿ.ಮೀ. ಪೈಕಿ ಆಗಿದ್ದು 28 ಮಿ.ಮೀ. ಮುಂದುವರಿದ ಭಾಗವಾಗಿ ಬುಧವಾರ ಬೆಳಗ್ಗೆಯಿಂದ ರಾತ್ರಿ ವರೆಗೆ ಅಂದಾಜು 50 ಮೀಮೀ ಮಳೆಯಾಗಿರುವ ಸಾಧ್ಯತೆ ಇದ್ದು, ಯಾವುದೇ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.