ರಂಗು ರಂಗಿನ ಬಣ್ಣದಲ್ಲಿ ಮಿಂದೆದ್ದ ಮುಂಡಗೋಡ ಜನತೆ

| Published : Mar 20 2025, 01:18 AM IST

ಸಾರಾಂಶ

ಬುಧವಾರ ಮುಂಡಗೋಡ ಪಟ್ಟಣದಲ್ಲಿ ರಂಗು ಗುಂಗಿನ ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಯುವಕರಿಂದ ರೇನ್ ಡ್ಯಾನ್ಸ್ ನಡೆಯಿತು. ಪಟ್ಟಣದ ಎಲ್ಲೆಡೆ ಹಲಗೆ ಸದ್ದು ಕೇಳಿಬಂತು.

ಮುಂಡಗೋಡ: ಬುಧವಾರ ಪಟ್ಟಣದಲ್ಲಿ ರಂಗು ಗುಂಗಿನ ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಎತ್ತ ನೋಡಿದರೂ ಬಣ್ಣದಾಟದಿಂದ ಕೂಡಿದ್ದ ಪಟ್ಟಣ ಸಂಪೂರ್ಣ ಓಕುಳಿಯಲ್ಲಿ ಮುಳುಗಿತ್ತು. ಬೆಳಗ್ಗೆಯಿಂದ ಹೋಳಿ ವಿವಿಧ ಬಡಾವಣೆಗಳ ಮೂಲಕ ಪ್ರಾರಂಭವಾಗಿ ಪ್ರಮುಖ ಸ್ಥಳಗಳಿಗೆ ಆವರಿಸಿಕೊಂಡು, ಮಧ್ಯಾಹ್ನದ ವೇಳೆಗೆ ತೀವ್ರ ಬಿರುಸು ಪಡೆದುಕೊಂಡಿತು.

ಮಕ್ಕಳು ಮಹಿಳೆಯರು, ವೃದ್ಧರು ಎಂಬ ಭೇದ-ಭಾವ ಇಲ್ಲದೆ ಪರಸ್ಪರ ಬಣ್ಣ ಎರಚಿ ಓಕುಳಿ ಆಟವಾಡಿದರು. ಪರಿಚಯಸ್ಥರ ಮನೆಗೆ ತೆರಳಿ ಪರಸ್ಪರ ಬಣ್ಣ ಎರಚಿದ್ದು, ಬಣ್ಣದ ಆಟಕ್ಕೆ ಮತ್ತಷ್ಟು ಮೆರುಗು ನೀಡಿದಂತಿತ್ತು. ಪಟ್ಟಣದ ಯಾವುದೇ ಮೂಲೆಗೆ ಹೋದರೂ ಹಲಿಗೆ ಸದ್ದು ಕೇಳಿ ಬರುತ್ತಿತ್ತು. ಈ ಬಾರಿ ಹಲಿಗೆ ಬಾರಿಸುವವರ ಸಂಖ್ಯೆ ಕೂಡ ಹೆಚ್ಚಿತ್ತು.

ಹೋಳಿ ಪ್ರಯುಕ್ತ ನಗರದ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಇದರಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಯಾವ ಕಡೆ ನೋಡಿದರೂ ಎಲ್ಲೆಂದರಲ್ಲಿ ಬಣ್ಣದ ಓಕುಳಿ ಆಡುವವರದ್ದೇ ಕಾರುಬಾರು ಕಂಡು ಬರುತ್ತಿತ್ತು.

ಜೋಷ್ ಹೆಚ್ಚಿಸಿದ ರೇನ್ ಡ್ಯಾನ್ಸ್: ಪಟ್ಟಣದ ಹೊಸ ಓಣಿ, ನೆಹರು ನಗರ, ಗಾಂಧಿನಗರ, ಬಸವನಬೀದಿ, ಗಣೇಶನಗರ, ಮೇದಾರ ಓಣಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಡಿಜೆ ಸದ್ದು ಜೋರಾಗಿತ್ತು. ಇದು ಕುಣಿಯುವವರ ಜೋಶ್ ಹೆಚ್ಚಿಸಿತ್ತು.

ಮಡಿಕೆ ಒಡೆಯುವ ಕಾರ್ಯಕ್ರಮ: ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸುಮಾರ ೩೦ ಅಡಿ ಎತ್ತರದಲ್ಲಿ ಮಣ್ಣಿನ ಮಡಕೆ ಕಟ್ಟಿ ತಂಡ ರಚಿಸಿಕೊಂಡು ಒಬ್ಬರ ಮೇಲೊಬ್ಬರು ಹತ್ತಿ ಮಡಕೆ ಒಡೆಯುವ ಶಾಸ್ತ್ರ ನಡೆಸಲಾಯಿತು. ಬಳಿಕ ಸಂಪ್ರದಾಯದಂತೆ ವಿಧಿ-ವಿಧಾನಗಳನ್ನು ಪೂರೈಸಿ ರತಿ-ಕಾಮನ ಮೂರ್ತಿಗಳನ್ನು ದಹಿಸುವ ಮೂಲಕ ರಂಗ ಪಂಚಮಿ ಸಂಪನ್ನಗೊಳಿಸಲಾಯಿತು.

ಮೆರವಣಿಗೆ: ಮಧ್ಯಾಹ್ನದ ಆನಂತರ ಪಟ್ಟಣದ ಪ್ರತಿಸ್ಠಾಪಿಸಲಾದ ರತಿ-ಕಾಮನ ಮೂರ್ತಿಯ ಮೆರವಣಿಗೆಯನ್ನು ಆಯಾ ಬಡಾವಣೆಗಳಲ್ಲಿ ನಡೆಸಲಾಯಿತು.

ಬಿಗಿ ಪೊಲೀಸ ಬಂದೋಬಸ್ತ್: ಪೊಲೀಸ್‌ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಕಾಯ್ದಿಟ್ಟ ತುರ್ತು ಪೊಲೀಸ್ ತುಕಡಿಗಳು ಹಾಗೂ ನೂರಾರು ಪೊಲೀಸರು ಕಾರ್ಯನಿರ್ವಹಿಸಿದರು.