ತಾಲೂಕಿನ ಪಾವಿನಕುರ್ಮಾದ ಜನರು ಹೊನ್ನಾವರಕ್ಕೆ ತೆರಳಲು ಇದ್ದ ಹತ್ತಿರದ ಮಾರ್ಗ ಎಂದರೆ ಅದು ಕರ್ಕಿಯ ಸಮೀಪದಲ್ಲಿರುವ ತೂಗು ಸೇತುವೆ.

೪ ಕಿಮೀ ದೂರದ ತಾಲೂಕಾ ಸ್ಥಳ ತಲುಪಲು ೧೪ ಕಿಮೀ ಸುತ್ತಬೇಕಾದ ಪರಿಸ್ಥಿತಿ ನಿರ್ಮಾಣ

ಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಪಾವಿನಕುರ್ಮಾದ ಜನರು ಹೊನ್ನಾವರಕ್ಕೆ ತೆರಳಲು ಇದ್ದ ಹತ್ತಿರದ ಮಾರ್ಗ ಎಂದರೆ ಅದು ಕರ್ಕಿಯ ಸಮೀಪದಲ್ಲಿರುವ ತೂಗು ಸೇತುವೆ. ಆದರೆ ಈ ತೂಗು ಸೇತುವೆ ಶಿಥಿಲಾವಸ್ಥೆಗೆ ತಲುಪಿ ಸುಮಾರು ವರ್ಷಗಳೇ ಆಗಿವೆ. ಆದರೂ ಇಲ್ಲಿನ ಜನರ ಬಹುಬೇಡಿಕೆಯ ಸೇತುವೆ ವಿಚಾರವನ್ನು ಜನಪ್ರತಿನಿಧಿಗಳು ಕಿವಿಗೆ ಹಾಕಿಕೊಂಡಂತಿಲ್ಲ.

ಈ ಸೇತುವೆ ಗಟ್ಟಿಮುಟ್ಟಾಗಿರದ ಹಿನ್ನೆಲೆ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು, ಜನಸಾಮಾನ್ಯರು ಎಲ್ಲರೂ ಸಹ ಪಾವಿನಕುರ್ವಾದಿಂದ ದೂರದಲ್ಲಿರುವ ಹಳದೀಪುರದ ಬಳಿಗೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಕೇವಲ ೪ ಕಿಮೀ ದೂರದಲ್ಲಿರುವ ತಾಲೂಕಾ ಸ್ಥಳವನ್ನು ತಲುಪಲು ಇದೀಗ ೧೪ ಕಿಮೀ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರೋಗಿಗಳು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವ ಸ್ಥಿತಿ ಎದುರಾದಾಗ ಈ ಸ್ಥಳದ ಜನರ ಸಂಕಷ್ಟ ಹೇಳತೀರದು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ:

ಇನ್ನು ಜನಸಾಮಾನ್ಯರು ಇಲ್ಲಿನ ಸೇತುವೆ ನಿರ್ಮಾಣವಾಗದೆ ಇದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ರವಾನಿಸಿದ್ದಾರೆ. ನಿಮಗೆ ಮತ ಬೇಕಾದರೆ ಸೇತುವೆಯನ್ನು ಮಾಡಿಕೊಡಿ ಎಂದು ಖಡಕ್ ಮಾತುಗಳನ್ನು ಆಡುತ್ತಿದ್ದಾರೆ. ಮತ ಭಿಕ್ಷೆಯನ್ನು ಕೇಳುವ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಈ ಬಗ್ಗೆ ಕ್ರಮವನ್ನು ತೆಗೆದುಕೊಂಡು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಿದೆ.

ಜನಪ್ರತಿನಿಧಿಗಳಿಗೆ ನಮ್ಮ ಸಂಕಷ್ಟ ಅರ್ಥವಾಗುತ್ತಿಲ್ಲ. ಕೇವಲ ಮತಕ್ಕಾಗಿ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಮಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಕೆಲಸ ಮಾಡಲಿ ಎಂದು ಸ್ಥಳೀಯರಾದ ಶಾರದಾ ಖಾರ್ವಿ ಒತ್ತಾಯಿಸಿದ್ದಾರೆ.

ನಮ್ಮ ಜನಪ್ರತಿನಿಧಿಗಳು ಸೇತುವೆಯನ್ನು ಮಾಡಿಕೊಡುವ ಕೆಲಸ ಮಾಡಲಿ. ಇಲ್ಲವಾದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ನಾವು ಬಹಿಷ್ಕರಿಸುತ್ತೇವೆ. ಈ ಮೂಲಕ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಸ್ಥಳೀಯ ಕೃಷ್ಣ ಖಾರ್ವಿ ಹೇಳಿದ್ದಾರೆ.