ಸಕಲೇಶಫುರ ಪಟ್ಟಣದ ಜನತೆಗೆ ಕಡೆಗೂ ಶುದ್ಧ ಕುಡಿಯುವ ನೀರಿನ ಭಾಗ್ಯ

| Published : Oct 19 2025, 01:00 AM IST

ಸಕಲೇಶಫುರ ಪಟ್ಟಣದ ಜನತೆಗೆ ಕಡೆಗೂ ಶುದ್ಧ ಕುಡಿಯುವ ನೀರಿನ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಂಪಕನಗರ ಬಡಾವಣೆಯ ೨೩ ವಾರ್ಡ್‌ಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ೧೯೮೪- ೮೫ರ ಸಾಲಿನಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ, ಇದರ ನಿರ್ವಹಣೆಯನ್ನು ಪುರಸಭೆ ನಿರ್ಲಕ್ಷಿಸಿದ್ದರಿಂದ ನಿರ್ಮಾಣಗೊಂಡ ಕೆಲವೇ ವರ್ಷಗಳಲ್ಲಿ ನೀರು ಶುದ್ಧೀಕರಿಸುವ ಯಂತ್ರಗಳು ದುರಸ್ತಿಗೀಡಾಗಿದ್ದರಿಂದ ಪಟ್ಟಣದ ಜನರಿಗೆ ಕಲುಷಿತ ನೀರೇ ನಿತ್ಯ ಮನೆ ಸೇರುವಂತಾಗಿದೆ. ಹಲವು ವರ್ಷಗಳ ಕಾಲ ಇಲ್ಲಿನ ನೀರು ಶೇಖರಣ ತೊಟ್ಟಿಯನ್ನು ಸ್ವಚ್ಛ ಮಾಡುವುದನ್ನು ಪುರಸಭೆ ಮರೆತಿದ್ದರಿಂದ ಸತ್ತಕಪ್ಪೆ, ಗೊದ್ದ, ಎರೆಹುಳುಗಳು ಸಹ ಮನೆಗಳ ನಲ್ಲಿಗಳಲ್ಲಿ ದರ್ಶನ ಕೊಡುತ್ತಿದ್ದರಿಂದ ಜನರು ಕಲುಷಿತ ನೀರು ಹಾಗೂ ಸತ್ತ ಜಲಚರಗಳನ್ನು ಪುರಸಭೆ ಮುಂದೆ ಪ್ರದರ್ಶಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಜನರಿಗೆ ಕೊನೆಗೂ ಶುದ್ಧ ಕುಡಿಯುವ ನೀರಿನ ಭಾಗ್ಯ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಪಟ್ಟಣದ ಚಂಪಕನಗರ ಬಡಾವಣೆಯ ೨೩ ವಾರ್ಡ್‌ಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ೧೯೮೪- ೮೫ರ ಸಾಲಿನಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ, ಇದರ ನಿರ್ವಹಣೆಯನ್ನು ಪುರಸಭೆ ನಿರ್ಲಕ್ಷಿಸಿದ್ದರಿಂದ ನಿರ್ಮಾಣಗೊಂಡ ಕೆಲವೇ ವರ್ಷಗಳಲ್ಲಿ ನೀರು ಶುದ್ಧೀಕರಿಸುವ ಯಂತ್ರಗಳು ದುರಸ್ತಿಗೀಡಾಗಿದ್ದರಿಂದ ಪಟ್ಟಣದ ಜನರಿಗೆ ಕಲುಷಿತ ನೀರೇ ನಿತ್ಯ ಮನೆ ಸೇರುವಂತಾಗಿದೆ.

ಹಲವು ವರ್ಷಗಳ ಕಾಲ ಇಲ್ಲಿನ ನೀರು ಶೇಖರಣ ತೊಟ್ಟಿಯನ್ನು ಸ್ವಚ್ಛ ಮಾಡುವುದನ್ನು ಪುರಸಭೆ ಮರೆತಿದ್ದರಿಂದ ಸತ್ತಕಪ್ಪೆ, ಗೊದ್ದ, ಎರೆಹುಳುಗಳು ಸಹ ಮನೆಗಳ ನಲ್ಲಿಗಳಲ್ಲಿ ದರ್ಶನ ಕೊಡುತ್ತಿದ್ದರಿಂದ ಜನರು ಕಲುಷಿತ ನೀರು ಹಾಗೂ ಸತ್ತ ಜಲಚರಗಳನ್ನು ಪುರಸಭೆ ಮುಂದೆ ಪ್ರದರ್ಶಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ಡಿ ಆದರ್ಶ ನೀರು ಶೇಖರಣಾ ತೊಟ್ಟಿಯನ್ನು ಸ್ವಚ್ಛಗೊಳಿಸಲು ಮನಸ್ಸು ಮಾಡಿದ್ದರಿಂದ ಸತ್ತ ಜಲಚರಗಳು ಮನೆಸೇರುವುದು ತಪ್ಪಿದೆ.

ಹಲವು ಕೋಟಿ ವ್ಯರ್ಥ:

ಮಳೆಗಾಲದಲ್ಲಿ ಕೆಸರು ಮಿಶ್ರಿತ ನೀರು ಮನೆಗಳ ಪಾತ್ರೆ ಸೇರುತ್ತಿದ್ದರಿಂದ ಇಂಚುಗಳಷ್ಟು ಮಣ್ಣು ಪಾತ್ರೆಯಲ್ಲಿ ಸಂಗ್ರಹವಾಗುವುದು ಇಂದಿಗೂ ಇದ್ದು, ಈ ಬಗ್ಗೆ ಕಳೆದ ಮೂರು ದಶಕಗಳಲ್ಲಿ ಹಲವು ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ೧೦ಕ್ಕೂ ಅಧಿಕ ಬಾರಿ ಸುಮಾರು ೨ ಕೋಟಿಗೂ ಅಧಿಕ ವೆಚ್ಚ ಮಾಡಿ ನೀರು ಶುದ್ಧೀಕರಿಸುವ ಯಂತ್ರಗಳನ್ನು ದುರಸ್ತಿ ಮಾಡಲಾಗಿದೆಯಾದರೂ ಒಮ್ಮೆಯು ಜನರಿಗೆ ಪುರಸಭೆ ಶುದ್ಧ ನೀರು ಒದಗಿಸಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಸ್ನಾನಕ್ಕೂ ಹೇಮಾವತಿ ನದಿಯ ಯೋಗ್ಯವಲ್ಲ ಎಂಬ ದೂರು ನಿತ್ಯ ಕೇಳಿ ಬರುತ್ತಿದೆ.

ಯೋಜನೆಗೆ ಮುಹೂರ್ತ:

ಸದ್ಯ ನಲ್ವತ್ತು ವರ್ಷಗಳ ನಂತರ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕರ್ನಾಟಕ ನೀರು ಸರಬರಾಜು ಮಂಡಳಿ ಅಮೃತ ೨.೦ ಯೋಜನೆಯಡಿ ಪಟ್ಟಣದ ಚಂಪಕ ನಗರ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರು ಘಟಕವನ್ನು ೧೪.೮೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿದ್ದು, ೨೦೨೪ ನವಂಬರ್ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ ಒವರ್ ಹೆಡ್ ಟ್ಯಾಂಕ್, ಫಿಲ್ಟರ್ ಬೆಡ್ ಸೇರಿದಂತೆ ಸಾಕಷ್ಟು ಕಾಮಗಾರಿಗಳು ಮುಗಿದಿವೆ. ಮುಂದಿನ ಆರು ತಿಂಗಳ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳವ ಆಶಾಭಾವನೆಯನ್ನು ಪುರಸಭೆ ಅಧಿಕಾರಿಗಳು ಹೊಂದಿದ್ದಾರೆ. ಇದರಿಂದಾಗಿ ಮುಂದಿನ ವರ್ಷದಲ್ಲಿ ಶುದ್ಧ ಕುಡಿಯುವ ನೀರು ಮನೆ ಸೇರುವ ಭರವಸೆ ಜನರಲ್ಲಿ ಮೂಡುವಂತೆ ಮಾಡಿದೆ.

ವ್ಯರ್ಥವಾದ ಯೋಜನೆ:

ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ೨೦೦೮ರಲ್ಲಿ ಸುಮಾರು ೮ ಕೋಟಿ ವೆಚ್ಚದ ಕಾಮಗಾರಿಯನ್ನು ಪಟ್ಟಣದಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಅಂದಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಡೆಸಿದ ಭ್ರಷ್ಟಾಚಾರದಿಂದಾಗಿ ಈ ಯೋಜನೆ ವ್ಯರ್ಥವಾಗಿದೆ.

ಕುಡುಗರಹಳ್ಳಿಯಲ್ಲಿ ಟ್ಯಾಂಕ್:

ಸದ್ಯ ಚಂಪಕನಗರ ಕುಡಿಯುವ ನೀರು ಘಟಕದಿಂದಲೇ ಕುಡಗರಹಳ್ಳಿ ಬಡಾವಣೆಗೆ ನೀರು ಒದಗಿಸುವ ಉದ್ದೇಶದಿಂದ ಬೃಹತ್ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಟ್ಯಾಂಕ್‌ನಿಂದ ಕುಡುಗರಹಳ್ಳಿ, ಆಚಂಗಿ ಹಾಗೂ ಅರೇಹಳ್ಳಿ ಬೀದಿಗೆ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ.

--

* ಹೇಳಿಕೆ 1

ಶುದ್ಧ ಕುಡಿಯುವ ನೀರು ಒದಗಿಸುವ ಯೋಜನಾ ಕಾಮಗಾರಿ ಈಗಾಗಲೇ ಶೇ. ೭೦ರಷ್ಟು ಮುಕ್ತಾಯಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಾಮಗಾರಿ ಅಂತಿಮಗೊಳ್ಳುವ ಭರವಸೆ ಇದೆ.

- ಮಹೇಶ್ವರಪ್ಪ, ಮುಖ್ಯಾಧಿಕಾರಿ, ಸಕಲೇಶಪುರ ಪುರಸಭೆ

* ಹೇಳಿಕೆ2

ಮಳೆಗಾಲದಲ್ಲಿ ಹೇಮಾವತಿ ನದಿ ನೀರು ಸ್ನಾನಕ್ಕೂ ಯೋಗ್ಯವಲ್ಲ. ಸಂಪೂರ್ಣ ಕೆಸರು ಮಿಶ್ರಿತನೀರು ಮನೆ ಸೇರುವುದರಿಂದ ಮನೆಯ ತೊಟ್ಟಿಗಳು ಕೆಸರಿನಿಂದ ಅವೃತ್ತಗೊಳ್ಳುತ್ತಿವೆ.

- ಲೋಕೇಶ್, ಪುರಸಭೆ ಮಾಜಿ ಸದಸ್ಯ. (17ಎಚ್ಎಸ್ಎನ್7ಬಿ)